ಮಡಿಕೇರಿ, ಮೇ 26: ಕಳೆದ ವರ್ಷ ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಅನೇಕ ಮನೆಗಳ ಹಾನಿ ಮತ್ತು ಭೂಕುಸಿತ ಉಂಟಾಗಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಗದ್ದೆ, ತೋಟಗಳು ಕೊಚ್ಚಿ ಹೋಗಿದ್ದು, ಕೆಲವು ಭಾಗಗಳಲ್ಲಿ ಗದ್ದೆ ತೋಟಗಳಲ್ಲಿ ಮಣ್ಣು ತುಂಬಿಕೊಂಡು ಇನ್ನೂ ಕೆಲವು ಭಾಗಗಳಲ್ಲಿ ಅತಿಯಾದ ಮಳೆಯಿಂದ ಫಸಲು ಕೊಳೆತು ಹೋಗಿ ಅಪಾರ ಬೆಳೆಹಾನಿ ಸಂಭವಿಸಿತ್ತು.

ಹೀಗೆ ಪ್ರಕೃತಿ ವಿಕೋಪದಿಂದ ಬೆಳೆಹಾನಿ ಪ್ರಕರಣಗಳಲ್ಲಿ ಸರ್ಕಾರವು ಆದ್ಯತೆ ಮೇರೆಗೆ ಪರಿಹಾರವನ್ನು ನೇರ ಪಾವತಿ ಮೂಲಕ ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿರುತ್ತದೆ. ಮನೆಹಾನಿ ಪ್ರಕರಣಗಳಲ್ಲಿ ಪೂರ್ಣ, ತೀವ್ರ ಮನೆಹಾನಿ ಸಂತ್ರಸ್ತರನ್ನು ಮೊದಲ ಪಟ್ಟಿಯಲ್ಲಿ ಮತ್ತು ವಾಸಿಸಲು ಯೋಗ್ಯವಲ್ಲದ ಪ್ರದೇಶದಲ್ಲಿರುವ ಮತ್ತು ಅಪಾಯದ ಪ್ರದೇಶದಲ್ಲಿರುವ ಮನೆಗಳ ಸಂತ್ರಸ್ತರನ್ನು ಎರಡನೇ ಪಟ್ಟಿಯಲ್ಲಿ ಸೇರಿಸಲಾಗಿದೆ. ಮೊದಲ ಪಟ್ಟಿಯಲ್ಲಿರುವ ಪೂರ್ಣ, ತೀವ್ರ ಮನೆಹಾನಿ ಪ್ರಕರಣಗಳಿಗೆ ನವೆಂಬರ್-2018 ರಿಂದ ಬಾಡಿಗೆ ಹಣವನ್ನು ಸಂತ್ರಸ್ಥರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ.

ಬೆಳೆ ಪರಿಹಾರ ಸಂಬಂಧದ ಮಾಹಿತಿಯನ್ನು hಣಣಠಿ://ಠಿಚಿಡಿihಚಿಡಿಚಿ.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ಆಧಾರ್ ಸಂಖ್ಯೆ ದಾಖಲಿಸುವ ಮುಖಾಂತರ ಪಡೆಯಬಹುದಾಗಿದೆ. ನಂತರ ಬೆಳೆ ಪರಿಹಾರದ ಮೊತ್ತ ಫಲಾನುಭವಿಗಳ ಖಾತೆಗೆ ಜಮೆಯಾಗಿರುವ, ಜಮೆ ಆಗದಿರುವ ವಿವರವನ್ನು ವೆಬ್ ಸೈಟ್ hಣಣಠಿ://ಠಿಚಿಡಿihಚಿಡಿಚಿ.ಞಚಿಡಿಟಿಚಿಣಚಿಞಚಿ. gov.iಟಿ ನಲ್ಲಿ ಪರಿಶೀಲಿಸಿಕೊಳ್ಳುವದು.

ಹಾಗೆಯೇ ಮನೆಹಾನಿ, ಮನೆ ಬಾಡಿಗೆ ಮತ್ತು ಬೆಳೆಹಾನಿ ಪರಿಹಾರ ಸಂಬಂಧ ತಾ. 27 ರಿಂದ 29 ರವರೆಗೆ ಮೂರು ದಿನಗಳ ಕಾಲ ಪರಿಹಾರ ಅದಾಲತ್‍ನ್ನು ಜಿಲ್ಲಾಧಿಕಾರಿಗಳ ಕಚೇರಿಯ ಕೊಠಡಿ ಸಂ. 32 ರಲ್ಲಿ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಮನೆಹಾನಿ ಮತ್ತು ಬೆಳೆಹಾನಿ ಪರಿಹಾರದ ಬಗ್ಗೆ ಯಾವದೇ ಗೊಂದಲಗಳಿದ್ದಲ್ಲಿ ಈ ಪರಿಹಾರ ಅದಾಲತ್‍ಗೆ ಹಾಜರಾಗಿ ತಮ್ಮ ಸಂಶಯಗಳನ್ನು ಪರಿಹರಿಸಿಕೊಳ್ಳ ಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಮನೆಹಾನಿ ಪರಿಹಾರ ಸಂಬಂಧ ಸಾರ್ವಜನಿಕರು ಪರಿಹಾರ ಪಾವತಿ ಅರ್ಜಿಯೊಂದಿಗೆ ಸಲ್ಲಿಸಿದ ತಮ್ಮ ಬ್ಯಾಂಕ್ ಪಾಸ್ ಪುಸ್ತಕವನ್ನು ಮತ್ತು ಬೆಳೆಹಾನಿ ಪರಿಹಾರ ಸಂಬಂಧ ಸಾರ್ವಜನಿಕರು ಆಧಾರ್ ಸಂಖ್ಯೆಯ ಪ್ರತಿ (ಜೆರಾಕ್ಸ್)ಯನ್ನು ಕಡ್ಡಾಯವಾಗಿ ತರುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೋರಿದ್ದಾರೆ.