ಸಿದ್ದಾಪುರ, ಮೇ 26: ರ್ಯಾಲಿ ಕ್ರೀಡಾಪಟು ಜುಗುನ್ ಕಾರ್ಯಪ್ಪ ಜ್ಞಾಪಕಾರ್ಥವಾಗಿ ಸಿದ್ದಾಪುರದಲ್ಲಿ ಆಟೋಕ್ರಾಸ್ ರ್ಯಾಲಿಯು ಆಕರ್ಷಕವಾಗಿ ನಡೆಯಿತು. ಸಿದ್ದಾಪುರದ ಕಾಫಿ ಬೆಳೆಗಾರ ಚುಮ್ಮಿ ಪೂವಯ್ಯ ಅವರ ಗದ್ದೆಯಲ್ಲಿ ಟೀಂ-53 ತಂಡದಿಂದ ವಿವಿಧ ಆಟೋಕ್ರಾಸ್ ರ್ಯಾಲಿಯನ್ನು ಏರ್ಪಡಿಸಲಾಗಿತ್ತು.

ರ್ಯಾಲಿಯಲ್ಲಿ ಪಾಲ್ಗೊಂಡ ವಾಹನಗಳು ಕೆಸರಿನೊಂದಿಗೆ ಧೂಳೆಬ್ಬಿಸಿ ಚಲಿಸುವ ಮೂಲಕ ನೋಡುಗರ ಮೈಜುಮ್ಮೆನಿಸುವಂತೆ ಮಾಡಿತು. ರ್ಯಾಲಿಯಲ್ಲಿ ರೋಲ್ಕೇಸ್ ಕ್ಲಾಸ್, ಸ್ಟೋಕ್ಲಾಸ್, 800 ಸಿ.ಸಿ, 1000 ಸಿ.ಸಿ, 1400 ಸಿ.ಸಿ, 1600 ಸಿ.ಸಿ, ಜಿಪ್ಸಿ ಓಪನ್ ಕ್ಲಾಸ್, ಕೂರ್ಗ್ ಓಪನ್ ಕ್ಲಾಸ್, ಡೀಸೆಲ್ ಓಪನ್ ಕ್ಲಾಸ್, ಎಕ್ಸ್‍ಯುವಿ ಕ್ಲಾಸ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.

ರ್ಯಾಲಿಯಲ್ಲಿ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ರ್ಯಾಲಿಪಟುಗಳು ಭಾಗವಹಿಸಿದ್ದರು, ಸುಮಾರು 2ಕಿ.ಮೀ ಉದ್ದದ ಟ್ರಾಕ್‍ನಲ್ಲಿ ನಡೆದ ರ್ಯಾಲಿಯನ್ನು ವೀಕ್ಷಿಸಲು ಸಾವಿರಾರು ಮಂದಿ ನೆರೆದಿದ್ದರು. ಮಹಿಳೆಯರ ವಿಭಾಗದಲ್ಲಿ ಕೂಡ ಮಹಿಳಾ ರ್ಯಾಲಿಪಟುಗಳು ಭಾಗವಹಿಸಿದ್ದರು.

ಕಿರಿಯ ಬಾಲಕ ರ್ಯಾಲಿಪಟು: ಆಟೋಕ್ರಾಸ್‍ನಲ್ಲಿ ಬೆಂಗಳೂರಿನ 14ವರ್ಷ ಪ್ರಾಯದ ಅರ್ಜುನ್ ಎಂಬಾತ ಪಾಲ್ಗೊಂಡು ಅತೀ ವೇಗವಾಗಿ ಕಾರು ಚಾಲನೆ ಮಾಡುತ್ತಿದ್ದದ್ದು ವಿಶೇಷವಾಗಿತ್ತು. ಈತ ಹೊರ ರಾಜ್ಯಗಳಲ್ಲಿ ನಡೆದ ಹಲವಾರು ರ್ಯಾಲಿಯಲ್ಲಿ ಪಾಲ್ಗೊಂಡು ಪಶಸ್ತಿ ಪಡೆದುಕೊಂಡಿ ರುವದಾಗಿ ತಿಳಿಸಿದನು.

ಕಾರ್ಯಕ್ರಮದಲ್ಲಿ ಸ್ಥಳದಾನಿ ಚುಮ್ಮಿ ಪೂವಯ್ಯ ಆಯೋಜಕರಾದ ದಿಲ್‍ರೂಪ್, ಸಂತೋಷ್ ಸ್ವಿಕ್ವೇರಾ, ಟೀಂ53 ತಂಡದ ಪದಾಧಿಕಾರಿಗಳು ಹಾಜರಿದ್ದರು.