ಸೋಮವಾರಪೇಟೆ, ಮೇ. 26: ಗ್ರಾಮೀಣ ಪ್ರದೇಶವನ್ನೇ ಹೆಚ್ಚು ಹೊಂದಿರುವ ಸೋಮವಾರಪೇಟೆ ತಾಲೂಕಿನಾದ್ಯಂತ ಗ್ರಾಮೀಣ ಭಾಗದ ರಸ್ತೆಗಳ ಸ್ಥಿತಿ ಇಂದಿಗೂ ಶೋಚನೀಯ ವಾಗಿವೆ. ಮೂಲಭೂತ ಅವಶ್ಯಕತೆ ಗಳಲ್ಲಿ ಆದ್ಯತೆ ಪಡೆದಿರುವ ರಸ್ತೆಗಳು ದುಸ್ಥಿತಿಗೆ ತಲಪಿದ್ದರೂ ಆಡಳಿv Àಗಾರರು ಹಾಗೂ ಅಧಿಕಾರಿ ವರ್ಗ ಇತ್ತ ಗಮನ ಹರಿಸದೇ ಇರುವದು ಕಂಡುಬಂದಿದೆ.
ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದೆರಡು ರಸ್ತೆಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ರಸ್ತೆಗಳನ್ನು ನಗರೋತ್ಥಾನ ಯೋಜನೆಯಡಿ ಡಾಂಬರು, ಕಾಂಕ್ರಿಟೀಕರಣಗೊಳಿಸಲಾಗಿದೆ. ಆದರೆ ಗ್ರಾಮೀಣ ಪ್ರದೇಶದ ರಸ್ತೆಗಳ ಸ್ಥಿತಿ ಮಾತ್ರ ಹೇಳತೀರದಾಗಿದೆ.
ಈಗಾಗಲೇ ಗುಂಡಿಬಿದ್ದಿರುವ ತಾಲೂಕಿನ ಗ್ರಾಮೀಣ ಭಾಗದ ಬಹುತೇಕ ರಸ್ತೆಗಳು ಮಳೆಗಾಲದಲ್ಲಿ ಹೊಂಡಮಯವಾಗುವದರಿಂದ ಕೃಷಿಕರು ಕಂಗಾಲಾಗಿದ್ದಾರೆ. ರಸ್ತೆಗಳ ದುಸ್ಥಿತಿಯಿಂದಾಗಿ ಸಂಚಾರ ವ್ಯವಸ್ಥೆಯೂ ಹದಗೆಟ್ಟಿದ್ದು, ಸರ್ಕಾರದಿಂದ ದಾಖಲೆಗಳಲ್ಲಿ ಮಾತ್ರ ಬಿಡುಗಡೆಯಾಗುವ ಅನುದಾನ, ವಿಶೇಷ ಪ್ಯಾಕೇಜ್‍ಗಳ ಹಣ ಎಲ್ಲಿ ಹೋಗುತ್ತಿದೆ? ಎಂದು ಸಾರ್ವ ಜನಿಕರು ಪ್ರಶ್ನಿಸುವಂತಾಗಿದೆ.
ತಾಲೂಕಿನ ಹಲವಷ್ಟು ಗ್ರಾಮ ಪಂಚಾಯಿತಿಗಳ ಬಹುತೇಕ ರಸ್ತೆಗಳು ಕಳೆದ ಹತ್ತು ವರ್ಷಗಳಿಂದಲೂ ದುರಸ್ತಿಗೊಂಡಿಲ್ಲ. ಕನಿಷ್ಟ ಪಕ್ಷ ರಸ್ತೆಯ ಗುಂಡಿ ಮುಚ್ಚುವ ಕೆಲಸ ಕೂಡ ಆಗಿಲ್ಲ. ಜನಪ್ರತಿನಿಧಿಗಳಿಗೆ, ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗ, ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ ಎಂದು ಸಾರ್ವಜನಿಕರು ಅವಲತ್ತು ಕೊಳ್ಳುತ್ತಿದ್ದಾರೆ.
ತಾಲೂಕಿನ ತೊಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಷ್ಟು ರಸ್ತೆಗಳು ಇಂದಿಗೂ ಗುಂಡಿಯೊಳಗೆ ಮುಚ್ಚಿಹೋಗಿವೆ. ತೋಳೂರುಶೆಟ್ಟಳ್ಳಿಯಿಂದ ಸುಗ್ಗಿಕಟ್ಟೆ ತೆರಳುವ ರಸ್ತೆ, ಭತ್ತದರಾಶಿಗೆ ತೆರಳುವ ರಸ್ತೆಗಳು ಸಂಚಾರಕ್ಕೆ ಅಯೋಗ್ಯ ವಾಗಿವೆ. ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಳ್ಳಿ ಗ್ರಾಮಕ್ಕೆ ಇಂದಿಗೂ ಡಾಂಬರು ರಸ್ತೆಯಿಲ್ಲ. ಮಲ್ಲಳ್ಳಿ ಜಲಪಾತದಿಂದ ಮೂರು ಕಿ.ಮೀ. ದೂರ ಕಚ್ಚಾ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ತೆರಳಿ ಗ್ರಾಮವನ್ನು ತಲಪಬೇಕು. ಬೇಸಿಗೆಯಲ್ಲಿ ಮಾತ್ರ ಜೀಪುಗಳು ಗ್ರಾಮಕ್ಕೆ ತಲಪುತ್ತವೆ. ನಾಡ್ನಳ್ಳಿ, ತಡ್ಡಿಕೊಪ್ಪ ಗ್ರಾಮಗಳ ನಿವಾಸಿಗಳ ರಸ್ತೆ ಕೂಗು ಅರಣ್ಯರೋಧನವಾಗಿದೆ.. ಮೂರು ಕಿ.ಮೀ. ತಲೆಹೊರೆಯಲ್ಲೆ ಕೃಷಿ ಉತ್ಪನ್ನಗಳನ್ನು ಕೊತ್ತನಳ್ಳಿ ಜಂಕ್ಷನ್‍ಗೆ ತಂದು, ನಂತರ ವಾಹನಗಳಲ್ಲಿ ಸಾಗಿಸ ಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಇದರೊಂದಿಗೆ ಶಾಂತಳ್ಳಿ ಹೋಬಳಿಯ ತಲ್ತರೆಶೆಟ್ಟಳ್ಳಿ ಊರೊಳಗಿನ ರಸ್ತೆ, ಚಿಗಟಳ್ಳಿ ರಸ್ತೆ, ಉದ್ರಳ್ಳಿ ಕಾಕನಕೊಪ್ಪಲು ರಸ್ತೆ, ಬಾರಲಗದ್ದೆ ಹರಗ ಸಂಪರ್ಕ ರಸ್ತೆ, ಅಬ್ಬಿಮಠಬಾಚಳ್ಳಿ ರಸ್ತೆ, ಶಾಂತಳ್ಳಿ ಕಾಕನಕೊಪ್ಪಲು ರಸ್ತೆ, ಗುಡ್ಡಳಿ ಬೀಕಳ್ಳಿ ರಸ್ತೆ, ಇನಕನಹಳ್ಳಿ, ಬೇಕನಹಳ್ಳಿ, ಬೆಟ್ಟದಳ್ಳಿ, ಕೊತ್ತನಳ್ಳಿ, ಕುಮಾರಳ್ಳಿ, ಕಂಬಳ್ಳಿ, ಚಿಕ್ಕತೋಳೂರು, ವಣಗೂರು ಕೊಪ್ಪ, ಹರಪಳ್ಳಿ, ದೊಡ್ಡತೋಳೂರು, ಹಾನಗಲ್ ಶೆಟ್ಟಳ್ಳಿ ರಸ್ತೆ, ಹಾನಗಲ್ ಕೆರೆಯಿಂದ ಯಡೂರು ಗ್ರಾಮ ಸಂಪರ್ಕ ರಸ್ತೆ, ಹೊಸಬೀಡು ದೇವಸ್ಥಾನ ರಸ್ತೆ, ಕಾರೆಕೊಪ್ಪ, ಬಸವನಹಳ್ಳಿ, ತಣ್ಣೀರುಹಳ್ಳ, ಹಾರಳ್ಳಿ ರಸ್ತೆ, ಮಸಗೋಡು, ಗೋಣಿಮರೂರು ರಸ್ತೆಗಳು ದುರಸ್ತಿಗಾಗಿ ಹಂಬಲಿಸುತ್ತಿವೆ.
ನೇರುಗಳಲೆ, ಅರೆಯೂರು, ಚನ್ನಾಪುರ, ಕೂಗೂರು, ಕೋm Éಯೂರು, ಬಸವನಕೊಪ್ಪ, ಹಾರಳ್ಳಿ, ಸುಳಿಮಳ್ತೆ, ಚೌಡ್ಲು ಸೇರಿದಂತೆ ಅನೇಕ ಗ್ರಾಮಗಳ ರಸ್ತೆಗಳು ಗುಂಡಿಮಯ ವಾಗಿವೆ. ತೀರಾ ಹಾಳಾದ ರಸ್ತೆಗಳಲ್ಲಿ ವಾಹನಗಳು ತೆರಳಲು ಅಸಾಧ್ಯ ವಾದಂತಹ ಸ್ಥಿತಿ ನಿರ್ಮಾಣವಾಗಿದ್ದು, ಶಾಲಾ ವಾಹನಗಳು ತೆರಳಲು ಹಿಂದೇಟು ಹಾಕುವಂತಾಗಿದೆ.
ರಸ್ತೆಯ ಗುಂಡಿಗಳ ಆಧಾರದ ಮೇಲೆ ವಾಹನಗಳ ಬಾಡಿಗೆಯೂ ಹೆಚ್ಚುತ್ತಿದ್ದು, ದುಪ್ಪಟ್ಟು ಬಾಡಿಗೆ ನೀಡಬೇಕಿದೆ. ವಾಹನದ ರಿಪೇರಿಗೆ ಹೆಚ್ಚು ಹಣ ವ್ಯಯಿಸುವಂತಾಗಿದೆ ಎಂದು ವಾಹನಗಳ ಮಾಲೀಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
-ವಿಜಯ್