ಮಡಿಕೇರಿ, ಮೇ 26: ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ ಇಂದು ಜಿಲ್ಲಾ ಸಂಘದ ಅಧ್ಯಕ್ಷೆ ಬಿ.ಆರ್ ಸವಿತಾ ರೈ ಅಧ್ಯಕ್ಷತೆಯಲ್ಲಿ ಪತ್ರಿಕಾಭವನದಲ್ಲಿ ನಡೆಯಿತು. ಸಭೆಯಲ್ಲಿ ಪ್ರಕೃತಿ ವಿಕೋಪದ ಸಂದರ್ಭ ಸಂತ್ರಸ್ತರಾಗಿದ್ದ ಒಟ್ಟು ಏಳು ಪತ್ರಕರ್ತರಿಗೆ ಪರಿಹಾರ ಧನವನ್ನು ವಿತರಿಸಲಾಯಿತು. ರಾಜ್ಯ ಸಂಘದ ನಿರ್ದೇಶಕ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರ ಕೋರಿಕೆ ಮೇರೆಗೆ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜಿಲ್ಲಾ ಸಂಘಕ್ಕೆ ಐದು ಲಕ್ಷ ರೂ.ಗಳನ್ನು ನೀಡಲಾಗಿತ್ತು. ಈ ಮೊತ್ತವನ್ನು ಇಂದು ವಿತರಣೆ ಮಾಡಲಾಗಿದೆ. ಸಂತ್ರಸ್ತ ಪತ್ರಕರ್ತರಾದ ಕುಡೆಕಲ್ ಸಂತೋಷ್ ಅವರಿಗೆ ಒಂದು ಲಕ್ಷ, ಹಟ್ಟಿಹೊಳೆಯ ಕೆ.ಎಂ. ವಿನೋದ್ ಅವರಗೆ ಒಂದು ಲಕ್ಷ, ಕಾಟಕೇರಿಯ ಲೋಕೇಶ್ ಅವರಿಗೆ ಒಂದು ಲಕ್ಷ, ಎಂ.ಎನ್. ನಾಸೀರ್ ಅವರಿಗೆ 50,000, ನವೀನ್ ಡಿಸೋಜ ಅವರಿಗೆ 50,000, ಉಜ್ವಲ್ ರಂಜಿತ್ ಅವರಿಗೆ 50,000, ಕುಶಾಲನಗರದ ಕೆ.ಟಿ. ಶ್ರೀನಿವಾಸ್ ಅವರಿಗೆ 50,000 ರೂ.ಗಳನ್ನು ಚೆಕ್ ಮೂಲಕ ರಾಜ್ಯ ಸಂಘದ ನಿರ್ದೇಶಕ ಅಜ್ಜಮಾಡ ರಮೇಶ್ ಕುಟ್ಟಪ್ಪ ವಿತರಿಸಿದರು.
ವಾರ್ಷಿಕ ಮಹಾಸಭೆ ಸಂದರ್ಭ ರಾಜ್ಯ ಪತ್ರಕರ್ತ ಸಂಘದ ಪ್ರಶಸ್ತಿ ಪಡೆದಿದ್ದ ವಿಘ್ನೇಶ್ ಭೂತನಕಾಡು ಹಾಗೂ ಪ್ರಕೃತಿ ಮುನಿದ ಹಾದಿಯಲ್ಲಿ ಪುಸ್ತಕ ಹೊರತಂದಿರುವ ಕಿಶೋರ್ ರೈ ಕತ್ತಲೆಕಾಡು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.