ಸೋಮವಾರಪೇಟೆ,ಮೇ.25: ಸರ್ಕಾರದ ಆದೇಶದನ್ವಯ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದ್ದು, ಇದರ ಉಲ್ಲಂಘನೆಯಾದಲ್ಲಿ ದಂಡ ವಿಧಿಸಲಾಗುವದು ಎಂದು ಪ.ಪಂ. ಮುಖ್ಯಾಧಿಕಾರಿ ನಟರಾಜ್ ತಿಳಿಸಿದ್ದಾರೆ.
ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಭಿತ್ತಿ ಪತ್ರ, ತೋರಣ ಪ್ಲಾಸ್ಟಿಕ್‍ನಿಂದ ತಯಾರಿಸಿದ ಫ್ಲೆಕ್ಸ್, ಪ್ಲಾಸ್ಟಿಕ್ ತಟ್ಟೆ ಲೋಟ, ಪ್ಲಾಸ್ಟಿಕ್ ಚಮಚಗಳು, ಕ್ಲಿಂಗ್ ಫಿಲ್ಸ್ಮ್ ಮತ್ತು ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆಗಳು ಹಾಗೂ ಥರ್ಮಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋಬೀಡ್ಸ್‍ನಿಂದ ತಯಾರಾದ ವಸ್ತುಗಳ ತಯಾರಿಕೆ, ಸರಬರಾಜು, ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಆದರೂ ಸಹ ಸೋಮವಾರಪೇಟೆ ಪಟ್ಟಣದಲ್ಲಿ ನಿಷೇಧಿತ ಪ್ಲಾಸ್ಟಿಕ್‍ಗಳನ್ನು ಬಳಕೆ ಮತ್ತು ಮಾರಾಟ ಮಾಡುತ್ತಿರುವದು ಕಂಡು ಬಂದಿದ್ದು, ಇದು ರಾಷ್ಟ್ರೀಯ ಹಸಿರು ನ್ಯಾಯಪೀಠದ ಆದೇಶದ ಉಲ್ಲಂಘನೆಯಾಗಿರುತ್ತದೆ. ಆದ್ದರಿಂದ ಸೋಮವಾರಪೇಟೆ ಪಟ್ಟಣದಲ್ಲಿ ಈಗಾಗಲೇ ನಿಷೇಧಿಸಲಾಗಿರುವ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮತ್ತು ಮಾರಾಟ ಕಂಡುಬಂದಲ್ಲಿ ಪಟ್ಟಣ ಪಂಚಾಯಿತಿಯಿಂದ ವಶಪಡಿಸಿಕೊಂಡು ದಂಡ ವಿಧಿಸಲಾಗುವದು ಎಂದು ಎಚ್ಚರಿಸಿದ್ದಾರೆ.
ನಾಗರಿಕರು ಪ್ಲಾಸ್ಟಿಕ್‍ನ್ನು ತ್ಯಜಿಸಿ ಪಟ್ಟಣದ ಶುಚಿತ್ವ ಮತ್ತು ಉತ್ತಮ ಆರೋಗ್ಯಕ್ಕೆ ಸಹಕರಿಸಬೇಕಾಗಿ ಮುಖ್ಯಾಧಿಕಾರಿ ನಟರಾಜ್ ಅವರು ಪತ್ರಿಕಾ ಹೇಳಿಕೆ ಮೂಲಕ ಮನವಿ ಮಾಡಿದ್ದಾರೆ.