ವೀರಾಜಪೇಟೆ, ಮೇ 25: ವೀರಾಜಪೇಟೆ ವಿಭಾಗಕ್ಕೆ ನಿನ್ನೆ ದಿನ ರಾತ್ರಿ ಸುಮಾರು 7-30 ರ ಸಮಯದಲ್ಲಿ ಭಾರೀ ಗುಡುಗು ಮಿಂಚು ಸಹಿತ ಮಳೆ ಸುರಿದಿದೆ. ಸತತವಾಗಿ 9 ಗಂಟೆಯ ತನಕ ಭಾರೀ ಗಾಳಿಯೊಂದಿಗೆ 1.11 ಇಂಚುಗಳಷ್ಟು ಮಳೆ ಸುರಿದಿದೆ. ನಿನ್ನೆ ದಿನ ಅಪರಾಹ್ನ 3 ಗಂಟೆಯಿಂದಲೇ ಈ ವಿಭಾಗದಲ್ಲಿ ಮೋಡ ಕವಿದ ವಾತಾವರಣವಿತ್ತು. ಮಳೆ ಗಾಳಿಯ ಪರಿಣಾಮವಾಗಿ ರಾತ್ರಿ ಪೂರ್ತಿ ವಿದ್ಯುತ್ ಸಂಪರ್ಕವಿಲ್ಲದೆ ಕಾರ್ಗತ್ತಲು ಆವರಿಸಿತ್ತು.
ಮಳೆಯಿಂದ ಇಲ್ಲಿನ ನೆಹರೂನಗರದಲ್ಲಿ ರಸ್ತೆ ಬದಿಗೆ ಮರ ಬಿದ್ದುದರಿಂದ ಸಂಚಾರಕ್ಕೆ ಅಡಚಣೆ ಉಂಟಾಗಿಲ್ಲ. ವೀರಾಜಪೇಟೆ ಎಫ್ ಎಂ ಸಿ ರಸ್ತೆಯ ಹಿಂಭಾಗದಲ್ಲಿ ಮಹೇಂದ್ರ ಎಂಬವರಿಗೆ ಸೇರಿದ ಮನೆಯ ಮೇಲೆ ಮರ ಬಿದ್ದು ಗೋಡೆ ಜಖಂಗೊಂಡಿದೆ. ಮಗ್ಗುಲ ಬಳಿಯ ವಿನಾಯಕ ನಗರದಲ್ಲಿ ಸಾವಿತ್ರಿ ಎಂಬುವರಿಗೆ ಸೇರಿದ ಮನೆಯ ಮೇಲ್ಚಾವಣಿ ಹಾರಿ ಹೋಗಿದ್ದು ರೂ 25000ಕ್ಕೂ ಅಧಿಕ ನಷ್ಟ ಉಂಟಾಗಿದೆ.