ಸೋಮವಾರಪೇಟೆ,ಮೇ.25: ತಾಲೂಕಿನ ಶಾಂತಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಹಲವು ಕಾಮಗಾರಿಗಳನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮೀಪ್ರಿಯ ಅವರು ಪರಿಶೀಲಿಸಿದರು.
ಶಾಂತಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಅವರು, 2018-19ನೇ ಸಾಲಿನಲ್ಲಿ ಉದ್ದೇಶಿತ ಯೋಜನೆಯಡಿ ಕೈಗೊಳ್ಳಲಾದ ರೂ. 52 ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು.
2018-19ನೇ ಸಾಲಿನಲ್ಲಿ ಪಂಚಾಯಿತಿ ವತಿಯಿಂದ ಬೆಳೆಸಲಾಗಿರುವ 30 ಸಾವಿರ ಸಿಲ್ವರ್ ಸಸಿಗಳು, ರಸ್ತೆ ಬದಿಯಲ್ಲಿ ನೆಟ್ಟಿರುವ ಹಣ್ಣಿನ ಗಿಡಗಳು, 12 ಲಕ್ಷ ರೂಪಾಯಿ ವೆಚ್ಚದಲ್ಲಿ ಕೈಗೊಂಡಿರುವ 4 ಕಾಂಕ್ರೀಟ್ ಚರಂಡಿ ಕಾಮಗಾರಿಗಳು, 26 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ 6 ರಸ್ತೆ, ಮೋರಿ ಕಾಮಗಾರಿಗಳು, ಒಕ್ಕಲು ಕಣ ಸೇರಿದಂತೆ ಜಲ ಮರುಪೂರ್ಣ ಕಾಮಗಾರಿಗಳನ್ನು ಪರಿಶೀಲಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.
ಇದರೊಂದಿಗೆ ತಲ್ತರೆಶೆಟ್ಟಳ್ಳಿ ಮತ್ತು ಶಾಂತಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಂಪರ್ಕಕ್ಕೆ ಅಳವಡಿಸಿರುವ ಮೀಟರ್‍ಗಳನ್ನು ಪರಿಶೀಲಿಸಿ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಅಧ್ಯಕ್ಷ ಬಗ್ಗನ ಅನಿಲ್‍ಕುಮಾರ್ ಅವರಿಂದ ಮಾಹಿತಿ ಪಡೆದರು.
ಈ ಸಂದರ್ಭ ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಸುನಿಲ್ ಕುಮಾರ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಜೇಂದ್ರ, ತಾಂತ್ರಿಕ ಸಂಯೋಜಕ ಟಿ.ಪಿ ರಂಜಿತ್, ಗ್ರಾ.ಪಂ. ಸದಸ್ಯರಾದ ತ್ರಿಶೂಲ್, ಭಾರತಿ ಈರಪ್ಪ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.