ಸುಂಟಿಕೊಪ್ಪ, ಮೆ 26: ಬ್ಲೂ ಬಾಯ್ಸ್ ಯೂತ್ ಕ್ಲಬ್‍ನ ವತಿಯಿಂದ ಸಂಘದ 37ನೇ ವಾರ್ಷಿಕೋತ್ಸವದ ಮತ್ತು ದಿ.ಡಿ.ಶಿವಪ್ಪ ಅವರ ಜ್ಞಾಪಕಾರ್ಥದ 24 ನೇ ವರ್ಷದ ರಾಜ್ಯ ಮಟ್ಟದ 'ಗೋಲ್ಡ್ ಕಪ್' ಫುಟ್‍ಬಾಲ್ ಟೂರ್ನಿಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೈಸೂರು, ನಂಜನಗೂಡು ತಂಡಗಳು ಮುಂದಿನ ಹಂತಕ್ಕೆ ಪ್ರವೇಶಿಸಿದೆ. ದಿನದ ಮೊದಲ ಪಂದ್ಯದಲ್ಲಿ ವಿಜಯನಗರ ಎಫ್.ಸಿ. ಮೈಸೂರು ತಂಡವು ಸ್ವರ್ಣ ಎಫ್.ಸಿ.ಮಂಡ್ಯ ತಂಡವನ್ನು 4-1 ಗೋಲುಗಳಿಂದ ಸೋಲಿಸಿತು. ಪ್ರಾರಂಭದಿಂದಲೂ ಮೈಸೂರು ತಂಡವು ಆಕ್ರಮಣಕಾರಿ ಆಟಕ್ಕೆ ಒತ್ತನ್ನು ನೀಡಿತ್ತು. ಮೊದಲಾರ್ಧದ 25ನೇ ನಿಮಿಷದಲ್ಲಿ ಮೈಸೂರು ತಂಡದ ಶರತ್ ಗೋಲು ಗಳಿಸುವುದರೊಂದಿಗೆ ಮುನ್ನಡೆ ತಂದುಕೊಟ್ಟರು.
ಆದರೆ ದ್ವಿತೀಯಾರ್ಧದಲ್ಲಿ ಹೊಂದಾಣಿಕೆ ಆಟದ ಪ್ರದರ್ಶನ ನೀಡಲು ಆರಂಭಿಸಿದ ಮಂಡ್ಯ ತಂಡ ಹಲವಾರು ಬಾರಿ ಗೋಲು ಬಾರಿಸಲು ಶ್ರಮಪಟ್ಟರೂ ವಿಫಲಗೊಂಡಿತು. ಇದರಿಂದ ಎಚ್ಚೆತ್ತುಕೊಂಡ ಮೈಸೂರು ತಂಡದ ಆಟಗಾರರು ಚೆಂಡಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು. ಪಂದ್ಯದ 8 ನಿಮಿಷದಲ್ಲಿ ಮೋಹಿತ್ ಹೊಡೆದ ಚೆಂಡು ಮಂಡ್ಯ ತಂಡದ ಆಟಗಾರನ ಕಾಲಿಗೆ ತಗುಲಿ ಗೋಲು ಕೀಪರನ್ನು ವಂಚಿಸಿ ಗೋಲುಪಟ್ಟಿಯೊಳಗೆ ನುಗ್ಗಿತು. ಈ ಗೋಲಿನೊಂದಿಗೆ ಉತ್ತಮ ಪ್ರದರ್ಶನ ನೀಡಿದ ಮೈಸೂರು ತಂಡದ ಆಟಗಾರರು 20 ಮತ್ತು 25ನೇ ನಿಮಿಷದಲ್ಲಿ ತುಷಾರ್ ಮತ್ತು ಅಭಿಷೇಕ್ ಕ್ರಮವಾಗಿ ಒಂದೊಂದು ಗೋಲುಗಳನ್ನು ಬಾರಿಸುವದರೊಂದಿಗೆ 4-0 ಮುನ್ನಡೆ ಪಡೆಯುವದರಷ್ಟರಲ್ಲಿ ಮಂಡ್ಯ ತಂಡದ ಹುಚ್ಚೆಗೌಡ 28ನೇ ನಿಮಿಷದಲ್ಲಿ ಗೋಲನ್ನು ಹೊಡೆಯುವದರ ಮೂಲಕ ನಿಟ್ಟುಸಿರು ಬಿಡುವಂತೆ ಮಾಡಿದರು. ಕೊನೆಯಲ್ಲಿ ಮೈಸೂರು ತಂಡವು ಜಯಗಳಿಸಿತು.
ದಿನದ ಎರಡನೇ ಪಂದ್ಯವು ಟಿಡಿಎಲ್ ಸ್ಫೋಟ್ರ್ಸ್ ಕ್ಲಬ್ ಬೈಲುಕೊಪ್ಪ ಮತ್ತು ನಂಜನಗೂಡು ಇಲೆವೆನ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ 1-0 ಗೋಲುಗಳಿಂದ ಜಯಗಳಿಸಿ ಮುಂದಿನ ಹಂತಕ್ಕೆ ತಲಪಿದೆ.
ಮೊದಲಾರ್ಧದಲ್ಲಿ 2 ತಂಡಗಳ ಆಟದಿಂದ ಯಾವದೇ ಗೋಲು ಬರಲಿಲ್ಲ. ದ್ವಿತೀಯಾರ್ಧದಲ್ಲಿ ಹೊಂದಾಣಿಕೆಯ ಆಟವನ್ನು ತೋರಿದ 2 ತಂಡಗಳಿಗೆ ಕ್ರೀಡಾಭಿಮಾನಿಗಳ ಕೇಕೆ, ಚಪ್ಪಾಳೆಯ ಜಯಘೋಷ ಮೊಳಗಲಾರಂಭಿಸಿತು. ಇದರಿಂದ ಹುರುದುಂಬಿದ ಆಟಗಾರರು ತಮ್ಮ ಚಾಕಚಕ್ಯತೆಯ ಆಟವನ್ನು ಆಡಲಾರಂಭಿಸಿದರು.
ದ್ವಿತೀಯಾರ್ಧದಲ್ಲೂ ಉತ್ತಮ ಆಟ ನೀಡಿದ್ದರಿಂದ 2 ತಂಡಗಳು ಗೋಲು ಗಳಿಸುವಲ್ಲಿ ವಿಫಲಗೊಂಡವು. ಟೈಬ್ರೇಕರ್‍ನಲ್ಲಿ ನಂಜನಗೂಡು ತಂಡವು ಜಯಗಳಿಸಿತು.ಮೂರನೇ ಪಂದ್ಯದಲ್ಲಿ 2 ತಂಡಗಳು ಮೈದಾನಕ್ಕೆ ಆಗಮಿಸದೇ ಇದ್ದುದರಿಂದ ಪಂದ್ಯವನ್ನು ರದ್ದುಗೊಳಿಸಲಾಯಿತು.