ಮಡಿಕೇರಿ, ಮೇ 26: ಕಳೆದ ಮುಂಗಾರು ಮಳೆಯ ತೀವ್ರತೆ ನಡುವೆ ಜಿಲ್ಲೆಯಲ್ಲಿ ಆಸ್ತಿಪಾಸ್ತಿ, ಮನೆ ಮಠ ಕಳೆದುಕೊಂಡು ಅನೇಕರು ಬೀದಿ ಪಾಲಾಗಿದ್ದರು. ಇನ್ನು ಕೃಷಿ ಫಸಲುಗಳಾದ ಭತ್ತ, ಏಲಕ್ಕಿ, ಮೆಣಸು, ಸೆಂಗು, ಅಡಿಕೆ ಇತ್ಯಾದಿ ಬೆಳೆಗಳೊಂದಿಗೆ ಕಾಫಿ ಮತ್ತಿತರ ತೋಟ, ಗದ್ದೆಗಳು ಮಣ್ಣು ಪಾಲಾಗಿದ್ದವು. ಅನೇಕ ಕಡೆ ಜಲಸ್ಫೋಟದಿಂದ ಎದುರಾಗಿದ್ದ ಹಾನಿಯಿಂದ ಇಂದಿಗೂ ಜನ ಚೇತರಿಸಿಕೊಂಡಿಲ್ಲ.
ಈ ನಡುವೆ ಬೇಸಿಗೆ ಬೆಳೆ ಬೆಳೆಯುತ್ತಿದ್ದವರು, ಸೊಪ್ಪು, ತರಕಾರಿಗಳಿಂದ ಬದುಕು ಕಟ್ಟಿಕೊಂಡಿದ್ದವರು ಪ್ರಸಕ್ತ ನೀರಿನ ಅಭಾವದಿಂದ ಮತ್ತಷ್ಟು ಜೀವನದಲ್ಲಿ ನಲುಗಿ ಹೋಗಿದ್ದಾರೆ. ಗ್ರಾಮೀಣ ಜನತೆ ತಮ್ಮ ಗದ್ದೆಗಳಲ್ಲಿ ಬೇಸಿಗೆಯ ದಿನಗಳಲ್ಲಿ ಸೌತೆಕಾಯಿ, ಬೆಳ್ಳರಿಕಾಯಿ, ಸೋರೆಕಾಯಿ, ಕುಂಬಳಕಾಯಿ ಯೊಂದಿಗೆ ಮೆಣಸು, ಗೆಣಸು, ಸೊಪ್ಪುಗಳನ್ನು ಬೆಳೆಯುತ್ತಿದ್ದರು.
ಪ್ರಸಕ್ತ ವರ್ಷದಲ್ಲಿಯೂ ಮಳೆಗಾಲದ ಕಹಿನೆನಪಿನ ನಡುವೆ ಬೇಸಿಗೆ ಬೆಳೆಯ ಆಶಯದಿಂದ ಕೃಷಿ ಕಾಯಕ ನಿರತರಾಗಿದ್ದರು. ಆದರೆ ಸಕಾಲದಲ್ಲಿ ಮಳೆ ಸಿಗದೆ ನೆಟ್ಟ ಗಿಡ - ಬಳ್ಳಿಗಳು ಫಸಲು ಬಿಡುವ ಮುನ್ನ ಸೊರಗುವಂತಾಗಿದೆ. ಬಹುತೇಕ ಗಿಡಬಳ್ಳಿಗಳಿಗೆ ಅಲ್ಲಿ ಇಲ್ಲಿ ಲಭ್ಯವಿರುವ ನೀರೆರೆದು ಪೋಷಿಸುತ್ತಿದ್ದರೂ, ಬಿಸಿಲಿನ ತಾಪ ತಡೆಯಲಾರದೆ ಒಣಗುತ್ತಿರುವ ಸನ್ನಿವೇಶ ಎದುರಾಗಿದೆ. ಇದಕ್ಕೆ ಕಾರಣ ಇತ್ತೀಚಿನ ವರ್ಷಗಳಲ್ಲಿ ಕೊಡಗಿನ ಗರಿಷ್ಠ ತಾಪಮಾನ 24 ರಿಂದ 26 ಡಿ. ಸೆ. ಇರುತ್ತಿದ್ದರೆ, ಪ್ರಸಕ್ತ ಬೇಸಿಗೆಯ ದಿನಗಳಲ್ಲಿ ಕೊಡಗಿನ ತಾಪಮಾನದಲ್ಲಿ ತೀವ್ರತೆಯೊಂದಿಗೆ ಸರಾಸರಿ 32 ರಿಂದ 34 ಡಿ.ಸೆ. ಗೋಚರಿಸುವಂತಾಗಿದೆ.ಕೊಡಗಿನ ಬಹುತೇಕ ಹಳ್ಳಕೊಳ್ಳಗಳು, ಕೆರೆ, ಹೊಳೆಗಳು ಬತ್ತುವಂತಾಗಿದೆ. ಈಚೆಗೆ ಬಂದಿರುವ ಮಳೆಯಿಂದ ನೀರಿನ ಹರಿಯುವಿಕೆ ಯಲ್ಲಿ ಸುಧಾರಣೆಯಾಗು ತ್ತಿದ್ದರೂ, ಬಿಸಿಲ ಧಗೆ ಕೃಷಿ ಫಸಲು, ಸೊಪ್ಪು, ತರಕಾರಿಯೊಂದಿಗೆ ಹಲವಷ್ಟು ಕಾಫಿ ತೋಟಗಳಲ್ಲಿ ಕೂಡ ಗಿಡಗಳು ಮತ್ತು ಮೆಣಸಿನ ಬಳ್ಳಿಗಳು ಒಣಗುತ್ತಿರುವ ದೃಶ್ಯ ಎದುರಾಗಿದೆ.
ಜಿಲ್ಲೆಯಲ್ಲಿ ತಾಪಮಾನ ಏರಿಕೆಯು, ಈ ಪ್ರಕೃತಿದತ್ತ ಕೊಡಗಿನ ಜೀವನ ಕ್ರಮದ ಅರಿವಿರುವವರಿಗೂ ಆತಂಕ ಉಂಟು ಮಾಡಿದೆ. ಹೀಗಾಗಿ ಅನೇಕರು ಪ್ರಸಕ್ತ ಮುಂಗಾರು ಕೃಷಿಗೆ ಆಸಕ್ತಿ ತೋರುವ ಬದಲು, ಈ ವರ್ಷದ ಮಳೆಗಾಲ ನೋಡಿಕೊಂಡು ಮುಂದಿನ ಬದುಕು ರೂಪಿಸಿಕೊಳ್ಳುವ ದಿಸೆಯಲ್ಲಿ ಚಿಂತಿಸುತ್ತಿದ್ದಾರೆ. - ಶ್ರೀಸುತ