ಗೋಣಿಕೊಪ್ಪಲು, ಮೇ 26: ಜಿಲ್ಲೆಯಲ್ಲಿಯೇ ಮೊದಲು ಎನ್ನುವಂತೆ ಮಹಿಳೆಯೊಬ್ಬರು ಮೀನು ಮಾರಾಟಕ್ಕೆ ಇಳಿದಿದ್ದಾರೆ.
‘ಉದ್ಯೋಗಂ ಪುರುಷ ಲಕ್ಷಣಂ’ ಎಂದು ಹೇಳುವ ಕಾಲ ಒಂದಿತ್ತು. ಈ ಕಾರಣಕ್ಕೆ ಪುರುಷರು ಮಹಿಳೆಯರನ್ನು ಮನೆಯೊಳಗಿರಿಸಿ ತಾವು ಉದ್ಯೋಗ ಅರಸಿ ಹೊರಡುತ್ತಿದ್ದರು. ಕೃಷಿಕ ವರ್ಗದ ಮಹಿಳೆಯರು ಮಾತ್ರ ಮನೆ ಬಿಟ್ಟು ಹೊರಬಂದು ತಮ್ಮ ಹೊಲ ಗದ್ದೆಗಳಲ್ಲಿ ದುಡಿಯುತ್ತಿದ್ದರು.
ಆದರೆ ಈಗ ಕಾಲ ಬದಲಾಗಿದೆ. ಇಂದು ಮಹಿಳೆಯಾಗಲಿ, ಪುರುಷನಾಗಲಿ ಇಬ್ಬರೂ ದುಡಿದರೆ ಮಾತ್ರ ಬದುಕುವ ಸ್ಥಿತಿ ಎದುರಾಗಿದೆ. ಇದಕ್ಕೆ ಪೂರಕವಾಗಿ ಮಹಿಳೆಯೂ ತಯಾರಾಗುತ್ತಿದ್ದಾಳೆ. ತೊಟ್ಟಿಲು ತೂಗುವ ಕೈ ದೇಶವನ್ನೂ ಆಳಿತು ಎಂಬಂತೆ ಇಂದು ಮಹಿಳೆ ಎಲ್ಲ ಕ್ಷೇತ್ರಗಳಲ್ಲಿಯೂ ಪುರುಷರಿಗೆ ಸಮನಾಗಿ ನಿಲ್ಲುತ್ತಿದ್ದಾಳೆ. ಅದು ಸರಕಾರಿ ಇಲ್ಲವೆ ಖಾಸಗಿ ಉದ್ಯೋಗ ವಾಗಲಿ, ವ್ಯಾಪಾರ ವಹಿವಾಟು ಆಗಲಿ ಮಹಿಳೆಯರು ಯಾವ ಮುಜುಗರವೂ ಇಲ್ಲದೆ ಬದುಕು ಸಾಗಿಸಲು ಟೊಂಕ ಕಟ್ಟಿ ನಿಂತಿದ್ದಾರೆ.
ಇಂಥವರಲ್ಲಿ ಅರುವತ್ತೊಕ್ಕಲು ಗ್ರಾಮದ ಭವ್ಯಾ ಒಬ್ಬರು. ಈಕೆ ಗೋಣಿಕೊಪ್ಪಲಿನ ಸುವರ್ಣ ಕರ್ನಾಟಕ ಮೀನು ಸರಬರಾಜು ಮತ್ತು ಮಾರಾಟ ಕೇಂದ್ರ (ರಿ)ದ ವತಿಯಿಂದ ಬೆಳಿಗ್ಗೆ ಮೀನು ಮಾರುಕಟ್ಟೆಗೆ ತೆರಳಿ ಮೀನುಗಳನ್ನು ಪೆಟ್ಟೆಗೆಗೆ ತುಂಬಿಸಿಕೊಳ್ಳುತ್ತಾರೆ. ಬಳಿಕ ದ್ವಿಚಕ್ರದಲ್ಲಿ ಇರಿಸಿಕೊಂಡು ತಲೆಗೆ ಹೆಲ್ಮೆಟ್ ಧರಿಸಿ ಮನೆಮನೆಗೆ ಹೊರಡುತ್ತಾರೆ. ಮೀನು.... ಎಂದು ಕೂಗುತ್ತಾ ಬಳಿಗೆ ಬಂದ ಗ್ರಾಹಕರಿಗೆ ತಕ್ಕಡಿ ಹಿಡಿದು ಕೇಳಿದಷ್ಟು ಮೀನು ಕೊಡುತ್ತಾರೆ. ಎರಡು ತಿಂಗಳಿನಿಂದ ಈ ವೃತ್ತಿಯಲ್ಲಿ ತೊಡಗಿರುವ ಭವ್ಯಾ ಅವರಿಗೆ ಮೀನು ಮಾರಾಟ ಕೇಂದ್ರದ ಎ.ಆರ್. ಗಣೇಶ್ ಕುಮಾರ್, ವಿ.ಎಸ್. ಸೂರ್ಯ, ಉಂಬಾಯ್, ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಯೋಜನೆ ಅಡಿಯಲ್ಲಿ ಭವ್ಯಾ ಅವರನ್ನು ಪ್ರೋತ್ಸಾಹಿಸುತ್ತಿದ್ದಾರೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಭವ್ಯಾ ಬೆಳಿಗ್ಗೆ 7 ಗಂಟೆಯಿಂದ 9 ಗಂಟೆವರೆಗೆ 20ರಿಂದ 30 ಕಿಲೋ ನಷ್ಟು ಮೀನು ಮಾರಾಟ ಮಾಡುತ್ತೇನೆ. ಇದರಿಂದ ಬರುವ ಲಾಭದ ಹಣ ಜೀವನೋಪಾಯಕ್ಕೆ ಸಹಕಾರಿ ಯಾಗಿದೆ. 9 ಗಂಟೆ ಬಳಿಕ ಮನೆ ಕೆಲಸಮಾಡಿಕೊಳ್ಳುತ್ತೇನೆ ಎಂದು ನುಡಿದರು.
ಮೀನು ಮಾರಾಟ ಕೇಂದ್ರದ ಎ.ಆರ್. ಗಣೇಶ್ ಕುಮಾರ್ ಮಾತನಾಡಿ ಮಹಿಳೆಯರ ಸ್ವಯಂ ಉದ್ಯೋಗ ಯೋಜನೆಯನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಭವ್ಯಾ ಅವರಿಗೆ ಉದ್ಯೋಗ ನೀಡಲಾಗಿದೆ. ದ್ವಿಚಕ್ರದಲ್ಲಿ ಮನೆಮನೆಗೆ ತೆರಳಿ ಮೀನು ಮಾರಾಟ ಮಾಡುವ ಮೊದಲ ಮಹಿಳೆ ಇವರಾಗಿದ್ದಾರೆ ಎಂದು ಹೇಳಿದರು. -ವರದಿ: ಎನ್.ಎನ್. ದಿನೇಶ್