ಮಡಿಕೇರಿ, ಮೇ 26: ಕೊಡಗಿನಲ್ಲಿ ಕಳೆದ ಮೂರು ದಿನಗಳ ಅಂತರದಲ್ಲಿ ಅಲ್ಲಲ್ಲಿ ಗುಡುಗು - ಮಿಂಚು ಸಹಿತ ತೀವ್ರ ಗಾಳಿಯೊಂದಿಗೆ ಮಳೆಯಾದ ಬಗ್ಗೆ ನಿಖರ ಮಾಹಿತಿ ಲಭಿಸಿದೆ. ಬದಲಾಗಿ ಭೂಮಿ ಕಂಪಿಸಿರುವ ಸಂಗತಿ ಕುರಿತು ಯಾರೂ ಸ್ಪಷ್ಟವಾಗಿ ಹೇಳುತ್ತಿಲ್ಲ ಎಂದು ತಿಳಿದು ಬಂದಿದೆ.ಜನವಲಯದಲ್ಲಿ ಭೂಕಂಪನ ಸಂಬಂಧದ ಊಹಾಪೋಹಾಗಳ ಹಿನ್ನೆಲೆ ಜಿಲ್ಲಾಡಳಿತದಿಂದ ಆಯ ಗ್ರಾ.ಪಂ. ಅಧಿಕಾರಿಗಳು, ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರಿಂದ ಮಾಹಿತಿ ಕಲೆ ಹಾಕಲಾಗಿದೆ. ಆಯ ಭಾಗದ ಜನಪ್ರತಿನಿಧಿಗಳ ಅನಿಸಿಕೆ ಪಡೆಯಲಾಗಿದೆ. ಈ ಸಂದರ್ಭ ಗುಡುಗು - ಮಿಂಚು - ಗಾಳಿ ಸಹಿತ ಮಳೆಯ ಬಗ್ಗೆಯಷ್ಟೇ ಅಭಿಪ್ರಾಯ ಹಂಚಿಕೊಂಡಿದ್ದಾರೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.ಅಂತೆಯೇ ಮೂರ್ನಾಡು ಹಾಗೂ ಮರಗೋಡು ಸುತ್ತಮುತ್ತ ಕೂಡ ಇಂತಹ ಸುದ್ದಿ ಹಬ್ಬಿಸಲಾಗಿದ್ದು, ಆಯ ಗ್ರಾಮದ ಪ್ರಮುಖರು, ಸ್ಥಳೀಯ ಪ್ರತಿನಿಧಿಗಳು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ‘ಶಕ್ತಿ’ಗೆ ಅಭಿಪ್ರಾಯ ನೀಡಿದ್ದಾರೆ. ಯಾವದಕ್ಕೂ ಭೂಗರ್ಭ ಇಲಾಖೆ ತಜ್ಞರ ಭೇಟಿ ಬಳಿಕ ನಿಖರ ಮಾಹಿತಿ ಲಭಿಸಲಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಎಸ್‍ಪಿ ಡಾ. ಸುಮನ್ ಡಿ.ಪಿ. ಪ್ರತಿಕ್ರಿಯಿಸಿದ್ದಾರೆ.