ಆಚೆ ಬೈಲಿನ ಸುಶೀಲಕ್ಕನ ಮಗಳು ಗೀತಾಳಿಗೆ ಗಂಡು ಒದಗಿ ಬಂದಿದೆಯಂತೆ. ಮೊನ್ನೆ ಮಾತು ಕತೆ ನಡೆದು, ಆಚೆ ಈಚೆ ಹೋಗಿ -ಬಂದು ಎಲ್ಲಾ ಆಗಿ ಈಗ ಲಗ್ನ ಕೂಡ ನಿಶ್ಚಯ ಆಗಿದೆಯಂತೆ. ಸಂಜೆಯ ಜಗಲಿ ಕಟ್ಟೆಯ ಸಭೆಯಲ್ಲಿ ಈ ಹೊಸ ವರದಿಯೊಂದು ಕಿವಿಗೆ ಬಿದ್ದದ್ದೇ ತಡ, ಎಲ್ಲಾ ಹೆಂಗಳೆಯರ ಕಿವಿಗಳು ಚುರುಕಾಗಿ ಮನಸು ಗಳು ಪ್ರಫುಲ್ಲಗೊಳ್ಳುತ್ತವೆ. ಮತ್ತೊಮ್ಮೆ ಮದುವೆ ಮನೆಯ ಕೆಲಸದ ನೆಪದಲ್ಲಿ ಎಲ್ಲರೊಂದಿಗೆ ಕೂಡಿಯಾಡುವ ಅವಕಾಶ. ಪಕ್ಕದ ಮನೆಯಲ್ಲಿಯೋ, ಅಥವಾ ಅನತಿ ದೂರದ ಸಂಬಂಧಿಕರ ಮನೆಯಲ್ಲಿಯೋ ಮದುವೆ ಎದ್ದಿತು ಅಂದರೆ ಎಲ್ಲರ ಮನೆಯಲ್ಲಿಯೂ ಸಡಗರವೆ. ಯಾಕೆಂದರೆ ಹೆಂಗಳೆಯರಿಗೆ ದುಪ್ಪಟ್ಟು ಕೆಲಸ. ಮದುವೆ ಮನೆಯ ಪೂರ್ವ ತಯಾರಿಯ ಕೆಲಸಗಳಿಗೆ ಭಾಗಿಯಾಗಬೇಕು, ಇದೇ ದಾರಿಯಲ್ಲಿ ನೆಂಟರಿಷ್ಟರು ಹೋಗುವ ಕಾರಣ ಮನೆಗೊಮ್ಮೆ ಭೇಟಿ ಕೊಡದೆ, ಕುಶಲ ವಿಚಾರಿಸದೆ ಯಾರೂ ಮುಂದಕ್ಕೆ ಅಡಿಯಿಡಲಾರರು. ಹಾಗಾಗಿ ತಮ್ಮ ಮನೆಯ ಸುತ್ತ ಮುತ್ತ ಎಲ್ಲವೂ ಅದಕ್ಕೂ ಮೊದಲೇ ಒಪ್ಪ ಓರಣಗೊಳ್ಳಬೇಕಿದೆ. ಹಬ್ಬಕ್ಕೆಂದು ಒಂದಾವರ್ತಿ ಸಾರಿಸಿದ ನೆಲದ ಸೆಗಣಿ ಹಕ್ಕಳೆಗಳೆಲ್ಲಾ ಎದ್ದುಕೊಂಡಿವೆ. ಮತ್ತೊಮ್ಮೆ ಒಪ್ಪವಾಗಿ ನೆಲ ಅರೆದು ಸಗಣಿ ಸಾರಿಸಿ ಶುಚಿಗೊಳಿಸಬೇಕು. ಒಂದೇ ಎರಡೇ!, ಅವರಿಗೆಲ್ಲಾ ಕೈ ತುಂಬಾ ಕೆಲಸ. ಅದರ ನಡುವೆಯೆ ಒಂದಷ್ಟು ಹೊಸ ಜವಳಿ ಖರೀದಿಯಾಗಬೇಕು. ಅಕ್ಕ ಪಕ್ಕದವರೆಲಾ ್ಲ ಸಣ್ಣ ಜರಿಯಂಚಿನ ಸೀರೆಯಲ್ಲಿ ಬರುವಾಗ ತಾನು ಅದೇ ಮಾಸಲು ಬಣ್ಣದ ಚೌಕಳಿ ಸೀರೆಯಲ್ಲಿ ಪ್ರತೀ ಸಾರಿಯೂ ಕಾಣಿಸಿ ಕೊಂಡರೆ ಅದೆಷ್ಟು ಚೆನ್ನ ಇರುತ್ತೆ ? ಗಂಡನಿಗೆ ಪೂಸಿ ಹೊಡೆದು ಈ ಸಲವಾದರೂ ಒಂದೊಳ್ಳೆಯ ಸೀರೆಯಾದರೂ ಕೊಂಡುಕೊಳ್ಳಬೇಕು. ಮತ್ತದೇ ಹಬ್ಬಕ್ಕೆಂದು ಹಾಕಿಸಿಕೊಂಡ ಗಿಲೀಟು ಬಳೆಗಳೆಲ್ಲಾ ಮಸಿ ಪಾತ್ರೆ ತಿಕ್ಕಿ-ತಿಕ್ಕಿ ಗಿಲೀಟನ್ನೆಲ್ಲಾ ತಿಂದು ಹಾಕಿವೆ. ಹೇಗೂ ಮಧುಮಗಳಿಗೆ ಬಳೆ ತೊಡಿಸಲು ಬಳೆಗಾರ ಬಂದೇ ಬರುತ್ತಾನಲ್ಲ ? ಆಗ ಎಲ್ಲರ ಕಣ್ಣು ತಪ್ಪಿಸಿ ಜೀರಿಗೆ ಡಬ್ಬಿಯಲ್ಲಿ ಅಡಗಿಸಿಟ್ಟ ಒಂದಷ್ಟು ಚಿಲ್ಲರೆ ಕಾಸುಗಳನ್ನು ಸೇರಿಸಿ ಬಂಗಾರ ಬಣ್ಣದ ಗಿಲೀಟು ಬಳೆಯನ್ನೇ ಕೊಂಡುಕೊಳ್ಳಬೇಕು. ಹೀಗೆ ಮುಗಿಯದಷ್ಟು ಬೇಕುಗಳು, ಮಾಡಲೇ ಬೇಕಾದ ಸಿದ್ಧತೆಗಳು ಮೆರವಣಿಗೆ ಹೊರಡುತ್ತವೆ. ನೆರೆಮನೆಯ ಒಂದು ಮದುವೆಯ ಸುತ್ತ ಆಸು ಪಾಸಿನ ಎಲ್ಲಾ ಹೆಮ್ಮಕ್ಕಳ ಸಂಭ್ರಮಗಳು ಗರಿಗೆದರಿಕೊಳ್ಳುತ್ತವೆ. ಒಂದು ಹಳ್ಳಿಯಿಡೀ ಸಂಭ್ರಮದಲ್ಲಿ ಮೀಯುತ್ತಿದ್ದಂತೆ ಗೋಚರಿಸುತ್ತದೆ. ಇನ್ನು ಗಂಡಸರು ಅದಾಗಲೇ ಏನನ್ನೂ ಹೇಳಿಕೊಳ್ಳದೆಯೇ ಚಪ್ಪರ ಹಾಕುವುದು, ಕಂಬ ನೆಡುವುದು, ಹೀಗೆ ಇನ್ನಿತರ ಮದುವೆ ಮನೆಯ ತಯಾರಿಗಳಿಗೆ ತೆರಳಿಯಾಗಿರುತ್ತಿತ್ತು. ಒಂದೊಂದು ಮನೆಯವರಂತೆ ಒಬ್ಬೊಬ್ಬರು ಒಂದೊಂದು ಕೆಲಸದಲ್ಲಿ ನೆರವಾಗುತ್ತಿದ್ದರು. ಹುಡುಗಿಗೆ ಚಿನ್ನಾಭರಣ ಕೊಳ್ಳುವಂತಹ ಅನಿವಾರ್ಯ ಖರ್ಚು ಬಿಟ್ಟರೆ ಉಳಿದಂತೆ ಯಾವ ಹೊರೆಯೂ ಅಷ್ಟಾಗಿ ಮದುಮಗಳ ಅಥವಾ ಮದುಮಗನ ಮನೆಯವರ ತಲೆಯ ಮೇಲೆ ಹೊರೆ ಬೀಳುತ್ತಿರಲಿಲ್ಲ. ಊಟಕ್ಕೆ ಬಾಳೆ ಎಲೆ ಒಬ್ಬರ ಮನೆಯಿಂದ, ಅಡುಗೆಗೆ ಪಾತ್ರೆ ಪಗಡಿ ಮತ್ತೊಂದು ಮನೆಯಿಂದ, ಮೇಜು, ಕುರ್ಚಿ ಹೀಗೆ ಕೊಡುಕೊಳ್ಳುವಿಕೆಯ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಕೊಡುವುದು –ತೆಗೆದುಕೊಳ್ಳುವುದರಲ್ಲಿ ಯಾರಿಗೂ ಮನಸಿನಲ್ಲಿ ವೃಥಾ ಚಿಂತೆಯ ಇನಿತು ಸೋಂಕು ಕೂಡ ಇಲ್ಲ. ಯಾಕೆಂದರೆ ಮುಂದೊಂದು ದಿನ ಇದೇ ಪರಸ್ಪರ ಉಪಕಾರವನ್ನು ಅವರಿಗೂ ಎಲ್ಲರೂ ನೀಡುವವರೆ. ಅಥವಾ ಅದರ ಅಗತ್ಯ ಬೀಳದಿದ್ದರೂ ಮತ್ತೊಬ್ಬರಿಗೆ ಇಂತಹ ಸಮಾರಂಭಗಳಿಗೆ ಕೊಡಲು ಯಾರ ಮನಸು ಕೂಡ ಹಿಂಜರಿಯುತ್ತಿರಲಿಲ್ಲ. ಅದೆಷ್ಟೇ ವೈಮನಸ್ಸು ಇದ್ದರೂ ಸಮಾರಂಭದ ಸಂಭ್ರಮದಲ್ಲಿ ಎಲ್ಲರೂ ಭಾಗಿಗಳಾಗುತ್ತಿದ್ದರು ಮತ್ತು ಅದೇ ಕಾರ್ಯಕ್ರಮ ಎಲ್ಲರ ಹೃದಯವನ್ನು ಅರಿತುಕೊಳ್ಳಲು, ಬೆಸೆದುಕೊಳ್ಳಲು ಸೇತುವಾಗುತ್ತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಯಾರಾದರೂ ಆಗಿ ಬರದ ನೆರೆಹೊರೆಯವರಿದ್ದರೆ, ಅವರಿಗೆ ಮೊದಲೇ ವೀಳ್ಯ ಕೊಟ್ಟು ಕರೆಯುವಷ್ಟು ವಿಶಾಲ ಹೃದಯವಂತಿಕೆಯನ್ನು ಮದುವೆಮನೆ ಕಲಿಸಿ ಕೊಡುತ್ತಿತ್ತು. ಹೀಗೆ ಸಿದ್ಧಗೊಳ್ಳುವ ಒಂದು ಮದುವೆಯ ಹಿಂದೆ ಇಡೀ ಹಳ್ಳಿಯ ಜನರ ಅದರಲ್ಲೂ ಹೆಂಗಳೆಯರ ಓಡಾಟ ಸಾಕಷ್ಟು ಇರುತ್ತಿತ್ತು.
ನಮ್ಮ ಮಗನ ಮದುವೆಗೆ ದೊಡ್ಡ ಪಾತ್ರೆಯೊಂದು ಉಡುಗೊರೆ ಕೊಟ್ಟಿದ್ದಾರೆ. ಹಾಗಾಗಿ ಅದಕ್ಕೆ ಸಮಾನಾದ ಬೇರೊಂದು ಉಡುಗೊರೆಯನ್ನು ಕೊಡಬೇಕು ಎಂಬುದಾಗಿ ಒಬ್ಬರ ಮನಸ್ಸು ಚಿಂತಿಸಿದರೆ, ಮತ್ತೊಬ್ಬರದು ಈ ಉಪಯೋಗಕ್ಕೆ ಬಾರದ ರಾಶಿ ಪಾತ್ರೆಗಳನ್ನು ಗೋಣಿಯಲ್ಲಿ ಕಟ್ಟಿ ಇಟ್ಟುಕೊಂಡು ಏನು ಮಾಡುವುದು? ಕವರು ಕೊಟ್ಟು ಬಿಡುವ. ಒಂದಷ್ಟು ಅವರ ಖರ್ಚಿಗಾದರು ಒದಗಿ ಬರುತ್ತದೆ ಎಂಬ ಯೋಚನೆ. ಮದುವೆಯ ಹಿಂದಿನ ದಿನವಂತೂ ಹಳ್ಳಿಯ ಎಲ್ಲ ಹೆಂಗಳೆಯರದ್ದೇ ಕಾರುಬಾರು. ಮದುವೆಯ ನೆಪದಲ್ಲಿ ಎಲ್ಲರೂ ಒಂದೆಡೆ ಕಲೆತು , ಕಷ್ಟ- ಸುಖ ಹಂಚಿಕೊಂಡು ಒಂದು ವರುಷಕ್ಕಾಗುವಷ್ಟು ಖುಷಿಯಲ್ಲಿ ಮನಸ್ಸನ್ನು ತೋಯಿಸಿ ಮತ್ತದೇ ಹುರುಪನ್ನು ಎದೆಯೊಳಗೆ ಇಟ್ಟುಕೊಂಡು ಲವಲವಿಕೆಯಿಂದ ಕೆಲಸ ಕಾರ್ಯಗಳಲ್ಲಿ ಕಳೆದು ಹೋಗಿ ಬಿಡುತ್ತಿದ್ದರು.
ಈಗ ಆ ಊರಿನ ಎಲ್ಲಾ ಯುವಕ-ಯುವತಿಯರಿಗೆ ಮದುವೆಯಾಗಿ, ಮಕ್ಕಳಾಗಿ ಅವರಿಗೂ ಲಗ್ನ ಕೂಡಿ ಬರುತ್ತಿದೆ. ಮನೆಯಲ್ಲಿ ಸಮಾರಂಭ ನಿಭಾಯಿಸುವುದು ಕಷ್ಟ, ಅದೂ ಅಲ್ಲದೆ ಬಂದು ಹೋಗುವವರನ್ನು ಸತ್ಕರಿಸುವುದು ಇನ್ನೂ ತ್ರಾಸದ ಕೆಲಸ. ಒಪ್ಪ ಓರಣ ಮಾಡಿಟ್ಟ ಮನೆ ಅರೆಗಳಿಗೆಯಲ್ಲಿ ಕೊಳಕಾಗಿ ಬಿಡುತ್ತದೆ. ಹಾಗಾಗಿ ದೂರ ದೃಷ್ಟಿಯಿಟ್ಟುಕೊಂಡು ದೂರದ ಛತ್ರದಲ್ಲಿ ಮದುವೆ ಇಟ್ಟುಕೊಂಡು ಧಾಂ ಧೂಂ ಆಗಿ ಮದುವೆ ಶಾಸ್ತ್ರ ಮುಗಿಸಿ ಬಿಡುತ್ತಾರೆ. ಇನ್ನು ಕೆಲವರಂತೂ ಯಾರಿಗೂ ಹೇಳದೆ ಸದ್ದಿಲ್ಲದೇ ಮದುವೆಯಾಗಿ ಮತ್ತೆ ದೊಡ್ಡ ಸುದ್ದಿಯಾಗುತ್ತಾರೆ.
ಇನ್ನು ಕೆಲವರಂತು ಕೊಟ್ಟು ತೆಗೆದುಕೊಳ್ಳುವ ಉಸಾಬರಿಯೇ ಬೇಡ ಅಂತ ಆಮಂತ್ರಣ ಪತ್ರಿಕೆಯಲ್ಲಿ ಆಶೀರ್ವಾದವೇ ಉಡುಗೊರೆ ಅಂತ ನಮೂದಿಸಿ ನಿರಾಳವಾಗಿ ಬಿಡುತ್ತಾರೆ. ಇದು ಒಂದು ರೀತಿಯಲ್ಲಿ ಒಳ್ಳೆಯದೇ ಆದರೂ ಯಾರಿಗೆ ಯಾರು ಅನಿವಾರ್ಯವಲ್ಲದ ಈ ಹೊತ್ತಿನಲ್ಲಿ ಗಡಿ ಬಿಡಿಯಲ್ಲಿ ಮುಗಿದು ಹೋಗಿ ಬಿಡುವ ಮದುವೆ ಸಮಾರಂಭ ಮದುವೆ ಮನೆಯವರಿಗಷ್ಟೇ ಸಂಭ್ರಮವಾಗಿ ಉಳಿಯುತ್ತಿದೆ. ಆಮಂತ್ರಿತರು ಭೋಜನ ಸಮಯಕ್ಕಾಗುವಾಗ ನೇರ ಭೋಜನ ಶಾಲೆಗೆ ನುಗ್ಗಿ ಗಡದ್ದಾಗಿ ಊಟ ಪೂರೈಸಿ, ಬಂದಿದ್ದೇವೆ ಅಂತ ಫೋಟೋದವನ ಮುಂದೆ ಹಾಜರಿ ಹಾಕಿ ತುರ್ತಿನ ಕೆಲಸ ಬಾಕಿ ಉಳಿದಂತೆ ಓಡಿ ಬಿಡುತ್ತಾರೆ. ಹೆಚ್ಚಿನ ಕಡೆ ಗಂಡಸರಷ್ಟೇ ಮದುವೆ ಮುಗಿಸಿ ಬರುತ್ತಾರೆ. ಆಪ್ತ ವಲಯದ ಮದುವೆಗಳು ಬಿಟ್ಟರೆ ಹೆಂಗಳೆಯರೆಲ್ಲರೂ ಈ ಸಂಭ್ರಮವನ್ನು ಅನುಭವಿಸುವ ಕ್ಷಣಗಳಿಂದ ವಂಚಿತರಾಗುವ ಕಾಲಘಟ್ಟಕ್ಕೆ ಬಂದು ನಿಂತಿದ್ದೇವೆ ಅನ್ನುವ ವಾಸ್ತವ ಕಾಲ ತೆರೆದಿಟ್ಟ ವಿಸ್ಮಯಗಳಲ್ಲಿ ಒಂದು.
-ಸ್ಮಿತಾ ಅಮೃತರಾಜ್, ಸಂಪಾಜೆ.