ಮಡಿಕೇರಿ, ಮೇ 26: ಕಳೆದ ಮುಂಗಾರುವಿನಲ್ಲಿ ಸಂಭವಿಸಿದ ಭಯಾನಕ ಜಲಸ್ಫೋಟ ಹಾಗೂ ಭೂಕುಸಿತದಿಂದ ಹೆದ್ದಾರಿ ಸಂಪರ್ಕ ಕಡಿತಗೊಂಡು, ದ್ವೀಪದಂತಾಗಿದ್ದ ಹಾಲೇರಿ ಸುತ್ತಮುತ್ತಲಿನ ಗ್ರಾಮಸ್ಥರು ಇದೀಗ ಅಭಿವೃದ್ಧಿಗೊಳ್ಳುತ್ತಿರುವ ರಸ್ತೆ ಕಾಮಗಾರಿಯಿಂದ ನಿಟ್ಟಿಸಿರು ಬಿಡುವಂತಾಗಿದೆ. ಸೋಮವಾರಪೇಟೆಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಪಾಪಲಿಕಾಡು ರಸ್ತೆ 300 ಅಡಿಗಳಷ್ಟು ಅಂತರದಲ್ಲಿ ಹತ್ತಾರು ಎಕರೆ ಕಾಫಿ ತೋಟ ಸಹಿತ ಹಾನಿಗೀಡಾಗಿತ್ತು.ಅಲ್ಲದೆ ಕಾಂಡನಕೊಲ್ಲಿ ಮಾರ್ಗವಾಗಿ ಸುಂಟಿಕೊಪ್ಪ ಹೆದ್ದಾರಿ ಸಂಪರ್ಕ ಕಲ್ಪಿಸುವ ರಸ್ತೆಯು, ಒಂದೆಡೆ ಹೊಳೆಯ ಪ್ರವಾಹದಿಂದ ಕೊಚ್ಚಿ ಹೋಗಿತ್ತು. ಅನತಿ ದೂರದಲ್ಲಿ ಹಾಲೇರಿ ಭದ್ರಕಾಳಿ ದೇವಾಲಯ ಬಳಿ ಕೆರೆಯೊಂದು ಒಡೆದು ರಸ್ತೆಯನ್ನೇ ಕೊಚ್ಚಿಕೊಂಡು ಹೋಗಿದ್ದರಿಂದ ಸಾರ್ವಜನಿಕ ಸಂಪರ್ಕ ಕಡಿತಗೊಂಡಿತ್ತು.ಪರಿಣಾಮ ಹಾಲೇರಿ, ಕಡಂದಾಳು, ಕಾಂಡನಕೊಲ್ಲಿ ಹಾಗೂ ಸುತ್ತಮುತ್ತಲಿನ ಎಲ್ಲ ನಿವಾಸಿಗಳು ಗ್ರಾಮಗಳನ್ನು ತೊರೆದು ಸುಂಟಿಕೊಪ್ಪ, ಮಾದಾಪುರ ಮುಂತಾದೆಡೆಗಳಲ್ಲಿ ಸಂತ್ರಸ್ತರ ಪರಿಹಾರ ಕೇಂದ್ರಗಳಲ್ಲಿ ಮೂರ್ನಾಲ್ಕು ತಿಂಗಳು ಆಸರೆ ಕಂಡುಕೊಂಡಿದ್ದರು. ಮಳೆಗಾಲದ ಬಳಿಕ ಗ್ರಾಮವಾಸಿಗಳು ಹಿಂತಿರುಗಿ ಮತ್ತೆ ಬದುಕು ಕಟ್ಟಿಕೊಂಡಿದ್ದರು. ಕಾಂಡನಕೊಲ್ಲಿ ಸರಕಾರಿ ಪ್ರಾಥಮಿಕ ಶಾಲೆಯೂ ಅನೇಕ ದಿವಸ ಬಾಗಿಲು ಮುಚ್ಚಿಕೊಂಡಿತ್ತು.
ಇದೀಗ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರ ಸತತ ಪ್ರಯತ್ನದಿಂದ ಹಾನಿಗೊಂಡಿದ್ದ ಗ್ರಾಮ ರಸ್ತೆಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಿಧಿ ಬಳಕೆಯೊಂದಿಗೆ ದುರಸ್ತಿ ಮಾಡಲಾಗುತ್ತಿದೆ. ಪಾಪಲಿಕಾಡು ತೋಟದಲ್ಲಿ ಬೃಹತ್ ರೀತಿ; ಮಕ್ಕಂದೂರು ಬಳಿ ಸೋಮವಾರಪೇಟೆ ಹೆದ್ದಾರಿ ಸಂಪರ್ಕ ಕಡಿತಗೊಂಡಿದ್ದ ರೀತಿಯಲ್ಲಿ ಕುಸಿದಿರುವ ರಸ್ತೆಗೆ ಮರು ಕಾಯಕಲ್ಪ ನೀಡಲಾಗುತ್ತಿದೆ.
ಈ ಕಾಮಗಾರಿಗೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ತಕ್ಷಣಕ್ಕೆ ರೂ. 2 ಕೋಟಿ ವೆಚ್ಚದಲ್ಲಿ ಕಾಮಗಾರಿ ನಿರ್ವಹಿಸಲಾಗುತ್ತಿದ್ದು, ಮುಂದೆ ಹೆಚ್ಚಿನ ಅನುದಾನದಿಂದ ಶಾಶ್ವತ ಕಾಮಗಾರಿ ಪೂರ್ಣ ಗೊಳಿಸಲಾಗುವದು ಎಂದು ಅವರು ‘ಶಕ್ತಿ’ಗೆ ತಿಳಿಸಿದ್ದಾರೆ. ಅಲ್ಲದೆ, ಮಳೆಗಾಲದಲ್ಲಿ ಮತ್ತೆ ಜನತೆಗೆ ತೊಂದರೆ ಎದುರಾಗದಂತೆ ಈ ತುರ್ತು ಕೆಲಸ, ನಿರ್ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸಲಹೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಧಾನಮಂತ್ರಿ ಗ್ರಾಮ ಸಡಕ್ ರಸ್ತೆ ಅಭಿವೃದ್ಧಿ ಅಧಿಕಾರಿ
(ಮೊದಲ ಪುಟದಿಂದ) ಗುಂಡಪ್ಪ ಅವರು, ಈ ಬಗ್ಗೆ ಪ್ರತಿಕ್ರಿಯಿಸಿ ಪಾಪಲಿಕಾಡು, ಕೆದಕಲ್ ಸಂಪರ್ಕ ರಸ್ತೆ ಹಾಗೂ ಇತರೆಡೆಗಳಲ್ಲಿ ಮೂರು ಕಡೆ ಭೂಕುಸಿತ ಸಂಬಂಧ ತಡೆಗೋಡೆ ಇತ್ಯಾದಿ ಕಾಮಗಾರಿಯನ್ನು ತಾತ್ಕಾಲಕ್ಕೆ ತುರ್ತಾಗಿ ರೂ. 2 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಪರ್ಯಾಯ ಕೆಲಸಕ್ಕೆ ಬೆಳೆಗಾರರೊಬ್ಬರು ಜಮೀನು ಕೂಡ ಕಲ್ಪಿಸಿರುವದಾಗಿ ಅವರು ಶ್ಲಾಘಿಸಿದ್ದಾರೆ. ಈ ಬಗ್ಗೆ ಹಾಲೇರಿಯ ಬೆಳೆಗಾರ ಸುಬ್ರಮಣಿ ಹಾಗೂ ಗ್ರಾಮದ ಪ್ರಮುಖರು ಪ್ರತಿಕ್ರಿಯಿಸಿ, ಶಾಸಕರ ಪ್ರಯತ್ನದಿಂದ ಸಾಧ್ಯವೇ ಆಗದೆಂದು ನಿರೀಕ್ಷಿಸುತ್ತಿದ್ದ ರಸ್ತೆಯನ್ನು ಸರಿಪಡಿಸುತ್ತಿರುವದು ನೆಮ್ಮದಿ ತಂದಿದೆ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.
ಕಾಲೂರು ರಸ್ತೆ : ಇನ್ನೊಂದೆಡೆ ಕಳೆದ ಆಗಸ್ಟ್‍ನಲ್ಲಿ ಗಾಳಿಬೀಡುವಿನಿಂದ ಕಾಲೂರುವಿಗೆ ತೆರಳುವ ಸಂಪರ್ಕ ರಸ್ತೆ ಕಡಿತಗೊಂಡು, ಭಾರೀ ಭೂಕುಸಿತದಿಂದ ಸಂಚಾರಕ್ಕೆ ಅಡ್ಡಿಯಾಗಿದ್ದ ಪಾಟಿ ಎಂಬಲ್ಲಿಯೂ ರೂ. 1 ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿದೆ. ಅಲ್ಲಲ್ಲಿ ಜಲಮೂಲ ತಪ್ಪಿಸಿ ಮೋರಿಗಳನ್ನು ಅಳವಡಿಸುವ ಮೂಲಕ ಇಂತಹ ಕೆಲಸಗಳನ್ನು ನಿರ್ವಹಿಸಲಾಗುತ್ತಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಮಳೆಗಾಲಕ್ಕೆ ಮುನ್ನ ಈ ಕಾಮಗಾರಿಗಳನ್ನು ಸಾಧ್ಯವಾಗುವ ಮಟ್ಟಿಗೆ ತೀವ್ರಗತಿಯಲ್ಲಿ ಪೂರೈಸಲು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಅಲ್ಲದೆ ಜಿಲ್ಲಾಧಿಕಾರಿಯೊಂದಿಗೆ ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ. ಲಕ್ಷ್ಮೀಪ್ರಿಯ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಮತ್ತು ಇಂಜಿನಿಯರ್‍ಗಳ ತಂಡ ಖುದ್ದು ಪರಿಶೀಲನೆ ನಡೆಸಿದ್ದಾರೆ.