ಮಡಿಕೇರಿ, ಮೇ 26: ಕೊಡಗು ಜಿಲ್ಲಾ ಪ್ರಾದೇಶಿಕ ಸಾರಿಗೆ ಇಲಾಖಾ ಕಚೇರಿಗೆ ಖಾಯಂ ಆರ್‍ಟಿಓ ಅಧಿಕಾರಿಯನ್ನು ನೇಮಕ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.

ಈ ಕುರಿತು ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಗಿದ್ದರೆ, ಹಿತರಕ್ಷಣಾ ಸಮಿತಿ ಅಧ್ಯಕ್ಷ ಎ.ಎಸ್. ಕಟ್ಟಿ ಮಂದಯ್ಯ ಹಾಗೂ ಇತರರು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು ಖುದ್ದು ಭೇಟಿಯಾಗಿ ಚರ್ಚಿಸಿದ್ದಾರೆ. ಜಿಲ್ಲೆಯಲ್ಲಿ ಸಾಕಷ್ಟು ವಾಹನಗಳಿದ್ದು, ಇದಕ್ಕೆ ಸಂಬಂಧಿಸಿದ ಅಗತ್ಯ ಕೆಲಸಗಳಿಗೆ ಖಾಯಂ ಅಧಿಕಾರಿ ಇಲ್ಲದೆ ಜನರು ಪರದಾಡುವಂತಾಗಿದೆ ಎಂದು ಪದಾಧಿಕಾರಿಗಳು ಗಮನ ಸೆಳೆದಿದ್ದಾರೆ.

ಇದರೊಂದಿಗೆ ವೀರಾಜಪೇಟೆ ತಾಲೂಕು ಕಚೇರಿಯ ವ್ಯವಸ್ಥೆಗಳನ್ನು ಸರಿಪಡಿಸಬೇಕು, ಕೂಲಿ ಕಾರ್ಮಿಕರ ಪಡಿತರ ಚೀಟಿ ವಿತರಣೆಯನ್ನು ತ್ವರಿತಗೊಳಿಸಬೇಕು. ಕಾಯಮಾನಿ ಗ್ರಾಮದಿಂದ ಇರ್ಪು ರಾಮೇಶ್ವರ ದೇಗುಲ ರಸ್ತೆ ಅಭಿವೃದ್ಧಿ ಹಾಗೂ ದೇಗುಲ ಅಭಿವೃದ್ಧಿಗೂ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ. ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಸಂದರ್ಭ ಕಟ್ಟಿಮಂದಯ್ಯ ಅವರೊಂದಿಗೆ ಅಜ್ಜಮಾಡ ರಾಜು ನಂಜಪ್ಪ, ಮುಕ್ಕಾಟಿರ ದಾದ ಬೋಪಯ್ಯ, ಅಚ್ಚಿಯಂಡ ಕೃಷ್ಣಮಯ್ಯ ಪಾಲ್ಗೊಂಡಿದ್ದರು.