ಮಡಿಕೇರಿ, ಮೇ 26: ಇಲ್ಲಿನ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದೈನಂದಿನ ಕರ್ತವ್ಯಗಳೊಂದಿಗೆ, ಮಳೆಗಾಲದಲ್ಲಿ ದಿನದ 24 ಗಂಟೆಯೂ ಯಾವದೇ ತುರ್ತು ಸೇವೆಗೆ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಸದಾ ಸಿದ್ಧರಿರಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್ ಆದೇಶಿಸಿದ್ದಾರೆ. ಇಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಅಧಿಕಾರಿಗಳ ತಂಡ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಖುದ್ದಾಗಿ ಕುಂದುಕೊರತೆಗಳ ಪರಿಶೀಲನೆ ನಡೆಸಿದರು.ಅಲ್ಲದೆ ಮುಂದಿನ ದಿನಗಳಲ್ಲಿ ಮಳೆಗಾಲದ ತೀವ್ರತೆ ನಡುವೆ ಯಾವದೇ ಪರಿಸ್ಥಿತಿ ಎದುರಿಸುವ ಮೂಲಕ, ಜನತೆಯ ಪ್ರಾಣದೊಂದಿಗೆ ಆರೋಗ್ಯ ರಕ್ಷಣೆ ಸಲುವಾಗಿ ಎಲ್ಲ ತಯಾರಿ ಇರಿಸಿಕೊಳ್ಳಬೇಕೆಂದು ಶಸ್ತ್ರಚಿಕಿತ್ಸಕರು ಹಾಗೂ ಇತರ ವೈದ್ಯ ಸಿಬ್ಬಂದಿಗೆ ನಿರ್ದೇಶಿಸಿದರು. ಈ ವೇಳೆ ಕೊಡಗು ವೈದ್ಯಕೀಯ ಕಾಲೇಜಿನ ಮುಖ್ಯಸ್ಥೆ ಡಾ. ಮೇರಿ ನಾಣಯ್ಯ ಸೇರಿದಂತೆ ಇತರ ಆಡಳಿತ ವರ್ಗ, ಆಸ್ಪತ್ರೆಯ ವೈದ್ಯ ಸಿಬ್ಬಂದಿ ಹಾಜರಿದ್ದರು. ಆಸ್ಪತ್ರೆಯ ಸಂದರ್ಶನ ಬಳಿಕ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಈಗಿನ ಪರಿಸ್ಥಿತಿಯಲ್ಲಿ ಔಷಧಿ ಸೇರಿದಂತೆ ಯಾವದೇ ಕೊರತೆ ಕಂಡುಬರಲಿಲ್ಲ ವೆಂದು ನುಡಿದರಲ್ಲದೆ, ಮಳೆಗಾಲ ಸನ್ನಿವೇಶ ನಿಭಾಯಿಸಲು ಅಗತ್ಯ ಸಲಹೆ ನೀಡಿರುವದಾಗಿ ಸ್ಪಷ್ಟಪಡಿಸಿದರು.ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ತುರ್ತು ಸೇವೆ ಮತ್ತು ಅಸಹಾಯಕರಿಗೆ ವಾರ್ಡ್‍ಗಳಿಗೆ ಕರೆದೊಯ್ಯಲು ‘ಲಿಫ್ಟ್’ ವ್ಯವಸ್ಥೆಯ ಕೊರತೆ ಇರುವದಾಗಿ ವಿವರಿಸಿದರು. ಈ ಸಂಬಂಧ ಆರೋಗ್ಯ ಇಲಾಖೆಯ ಸಂಬಂಧಿಸಿದ ತಾಂತ್ರಿಕ ವಿಭಾಗಕ್ಕೆ ಕೂಡಲೇ ವರದಿ ಸಲ್ಲಿಸುವ ಮುಖಾಂತರ, ಅಗತ್ಯ ಸೌಲಭ್ಯಕ್ಕೆ ಪ್ರಸ್ತಾವನೆಯೊಂದಿಗೆ ಕ್ರಮ ವಹಿಸಲಾಗುವದು ಎಂದು ಭರವಸೆ ನೀಡಿದರು.