ಮಡಿಕೇರಿ, ಮೇ 26: ದಿನನಿತ್ಯದ ಜನತೆಯ ಬದುಕಿನ ಮೇಲೆ ಅನಿರೀಕ್ಷಿತವಾಗಿ ಪ್ರಾಕೃತಿಕ ವಿಕೋಪದಂತಹ ಸನ್ನಿವೇಶಗಳು ಎದುರಾದ ಸಂದರ್ಭದಲ್ಲಿ ಅದನ್ನು ಸಮರ್ಥವಾಗಿ ಯಾವ ರೀತಿ ಎದುರಿಸಬಹುದು, ಹೆಚ್ಚಿನ ಅನಾಹುತ, ತೊಂದರೆಗಳನ್ನು ಹೇಗೆ ತಪ್ಪಿಸಲು ಶ್ರಮಿಸಬಹುದು ಎಂಬ ಬಗ್ಗೆ ಬೆಂಗಳೂರಿನ ಕಾಸ್ಫೌಂಡೇಷನ್ ವತಿಯಿಂದ ಇಂದು ಆಯ್ದ ವ್ಯಕ್ತಿಗಳಿಗೆ ಪೂರ್ವ ತರಬೇತಿಯನ್ನು ನೀಡಲಾಯಿತು.ಮಡಿಕೇರಿ ಸನಿಹದ ಕಡಗದಾಳು ವಿನ ಸರಕಾರಿ ಪ್ರೌಢಶಾಲೆಯಲ್ಲಿ ಈ ಕುರಿತಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಪರಿಸ್ಥಿತಿ ನಿಭಾಯಿಸುವ ಬಗ್ಗೆ ಪರಿಣತರು ಪ್ರಾತ್ಯಕ್ಷಿಕೆ ಸಹಿತವಾಗಿ ಮಾಹಿತಿ ನೀಡಿದರು. ಕಳೆದ ವರ್ಷ ಜಿಲ್ಲೆಯಲ್ಲಿ ಅನಿರೀಕ್ಷಿತವಾಗಿ ಪ್ರಾಕೃತಿಕ ವಿಕೋಪ ಎದುರಾಗಿ ಇದರಿಂದ ಉಂಟಾಗಿದ್ದ ಸಂಕಷ್ಟದ ಹಿನ್ನೆಲೆಯಲ್ಲಿ ಈ ಪೂರ್ವ ತರಬೇತಿ ನೀಡಲಾಯಿತು. ಆಯ್ದ ಪ್ರದೇಶಗಳ ಕಳೆದ ವರ್ಷ ಪರಿಸ್ಥಿತಿ ನಿಭಾಯಿಸುವಲ್ಲಿ ಶ್ರಮಿಸಿದ್ದ ಸುಮಾರು 30 ಎನ್‍ಸಿಸಿ, ಎನ್‍ಎಸ್‍ಎಸ್ ವಿದ್ಯಾರ್ಥಿಗಳಿಗೆ ಈ ಬಗ್ಗೆ ಇನ್ನಷ್ಟು ತರಬೇತಿ ನೀಡಲಾಯಿತು. ವಿದ್ಯಾರ್ಥಿಗಳೊಂದಿಗೆ ಸ್ಥಳೀಯ ಟ್ಯಾಕ್ಸಿ ಚಾಲಕರು - ಆಟೋ ಚಾಲಕರು ಪಾಲ್ಗೊಂಡು ಮಾಹಿತಿ ಪಡೆದುಕೊಂಡರು.ಕಾಸ್ ಫೌಂಡೇಷನ್ ಏರ್ಪಡಿಸಿದ್ದ ಈ ಕಾರ್ಯಾಗಾರದಲ್ಲಿ ಕರ್ನಾಟಕ ಸಿವಿಲ್ ಡಿಫೆನ್ಸ್ ಸರ್ವೀಸ್‍ನ ತುರ್ತು ನಿರ್ವಹಣಾ ತಂಡದ ಪ್ರಮುಖರು ಮಾರ್ಗದರ್ಶನ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ಎಂ. ನಾಗೇಂದ್ರನ್ ಅವರು ಈ ಸಂದರ್ಭ ಮಾತನಾಡಿ, ಕಳೆದ ವರ್ಷದ ದುರಂತದ ವೇಳೆಯಲ್ಲಿ ಈ ತಂಡದ ಮೂಲಕ ಕೆಲಸ ನಿರ್ವಹಿಸಿರುವ ಬಗ್ಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಈ ರೀತಿಯ ತಂಡ ಇಲ್ಲದಿರುವದರಿಂದ ಸ್ಥಳೀಯವಾಗಿ ಜನತೆಗೆ ಈ ತರಬೇತಿ ನೀಡುತ್ತಿರುವದಾಗಿ ತಿಳಿಸಿದರು. ಸ್ಟ್ರಚರ್ ಬಳಕೆ, ಹಗ್ಗದ ಮೂಲಕದ ಸಾಹಸ ಮತ್ತಿತರ ಮೂಲ ಅಗತ್ಯತೆಗಳ ಬಗ್ಗೆ ತಿಳಿ ಹೇಳಲಾಯಿತು. ತಾ. 28 ಹಾಗೂ 29 ರಂದು ಈ ಬಗ್ಗೆ ಎನ್‍ಡಿಆರ್‍ಎಫ್‍ನವರು ಆಯ್ದ ಸ್ಥಳಗಳಲ್ಲಿ ನೀಡುವ ಅಣಕು ಪ್ರದರ್ಶನದಲ್ಲೂ ಈ ಬಗ್ಗೆ ಮಾಹಿತಿ ನೀಡಲಾಗುವದು ಎಂದು ಅವರು ಈ ಸಂದರ್ಭ ತಿಳಿಸಿದರು.

ಬೆಂಗಳೂರಿನ ಸೆಂಟ್‍ಜಾನ್ ಆಸ್ಪತ್ರೆಯ ವಿಪತ್ತು ನಿರ್ವಹಣಾ ಸಮಿತಿಯ ಡಾ. ಪ್ರತೀಶ್ ಕಿರಣ್ ಅವರು ಪ್ರಥಮ ಚಿಕಿತ್ಸೆಗಳ ಕುರಿತು ವಿವರವಿತ್ತರು. ಸ್ಥಳೀಯರೇ ಆದ ಡಾ. ತಮ್ಮಯ್ಯ ಅವರು ಸಾಕು ಪ್ರಾಣಿಗಳು, ಜಾನುವಾರುಗಳನ್ನು ರಕ್ಷಿಸುವ ಬಗ್ಗೆ ಮುಂದಿನ

(ಮೊದಲ ಪುಟದಿಂದ) ದಿನಗಳಲ್ಲಿ ಮಾರ್ಗದರ್ಶನ ಒದಗಿಸಲಿದ್ದಾರೆ.

ನಾಲ್ಕು ಕಡೆಗಳಲ್ಲಿ ಅಗತ್ಯ ಪರಿಕರ

ಕಾಸ್ ಫೌಂಡೇಷನ್ ಮೂಲಕ ವಿಪತ್ತು ನಿರ್ವಹಣೆಗೆ ಅಗತ್ಯವಿರುವ ಸಲಕರಣೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಮಡಿಕೇರಿಯ ನಾರ್ಥ್ ಕೂರ್ಗ್ ಕ್ಲಬ್, ಮಾದಾಪುರ ಶಾಲೆ ಸೇರಿದಂತೆ ನಾಲ್ಕು ಕಡೆಗಳಲ್ಲಿ ಇದನ್ನು ಇರಿಸಲಾಗುತ್ತಿದೆ. ರೂ. 2.25 ಲಕ್ಷ ವೆಚ್ಚದಲ್ಲಿ ಸಾಮಗ್ರಿ ಒದಗಿಸಲಾಗುತ್ತಿದೆ. ಜಿಲ್ಲೆಯ ನಿವಾಸಿಯಾಗಿರುವ ಕಾಸ್ ಫೌಂಡೇಷನ್‍ನ ಸ್ಥಾಪಕ ಅಧ್ಯಕ್ಷೆಯಾಗಿರುವ ಲೈಲಾ ಆಲ್ವಾರೀಸ್ ಅವರು ಬರೆದಿರುವ ಪುಸ್ತಕವೊಂದರ ಮಾರಾಟದಿಂದ ಬಂದ ರೂ. 1 ಲಕ್ಷವನ್ನು ಇದಕ್ಕಾಗಿ ನೀಡಿದ್ದಾರೆ. ಫೌಂಡೇಷನ್‍ನಿಂದಲೂ ಖರ್ಚು ಭರಿಸಲಾಗಿದೆ ಎಂದು ಪ್ರಮುಖರು ಈ ಸಂದರ್ಭ ತಿಳಿಸಿದರು.