ಸಿದ್ದಾಪುರ, ಮೇ 25: ರಾತ್ರಿಯಿಂದ ಬೆಳಗ್ಗಿನವರೆಗೆ ಕಾಡಾನೆಗಳ ಹಿಂಡು ಮನೆಯಂಗಳದಲ್ಲಿ ದಾಂಧಲೆ ನಡೆಸಿರುವ ಘಟನೆ ಸಿದ್ದಾಪುರ ಸಮೀಪ್ ಟೀಕ್‍ವುಡ್ ಎಸ್ಟೇಟ್‍ನಲ್ಲಿ ನಡೆದಿದೆ.

ಕರಡಿಗೋಡು ರಸ್ತೆಯಲ್ಲಿರುವ ಕಂಬೀರಂಡ ನಂಜಪ್ಪ ಅವರಿಗೆ ಸೇರಿದ ಟೀಕ್ ವುಡ್ ಕಾಫಿ ತೋಟದ ಒಳಗೆ ಮರಿ ಆನೆ, ಸಲಗ ಸೇರಿದಂತೆ 6 ಕಾಡಾನೆಗಳಿದ್ದ ಹಿಂಡು ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗ್ಗಿನ ಜಾವದವರೆಗೆ ತೋಟದಲ್ಲಿ ದಾಂದÀಲೆ ನಡೆಸಿ, ಮನೆಯ ಹೆಂಚುಗಳನ್ನು ನಾಶಗೊಳಿಸಿವೆÉ. ಮಾತ್ರವಲ್ಲದೇ ತೋಟದ ಗೇಟನ್ನು ಹಾನಿಗೊಳಿಸಿವೆ. ಅಲ್ಲಿನ ನಿವಾಸಿಗಳು ರಾತ್ರಿ ಪೂರ್ತಿ ಕಾಡಾನೆಗಳ ಘೀಳಿಡುವ ಸದ್ದಿನಿಂದ ನಿದ್ರಿಸದೆ ಕಾಲ ದೂಡಿದ್ದಾರೆ. ಓಡಿಸಲು ಹಲವು ಬಾರಿ ಕಿರುಚಿದ್ದರೂ, ಶಬ್ಧ ಮಾಡಿದರೂ ಕಾಡಾನೆಗಳು ಕದಲದೇ ಮನೆಯ ಬಳಿಯೇ ನಿಂತಿದ್ದವು ಎಂದು ತೋಟದ ಉಸ್ತುವಾರಿ ಅನಿಲ್ ತಿಳಿಸಿದ್ದಾರೆ.

ಕಾಡಾನೆ ಹಾವಳಿಯಿಂದಾಗಿ ಕಾಫಿ ತೋಟದ ಕಾರ್ಮಿಕರು ರಜೆ ಮಾಡಿದ್ದು, ಜೀವಭಯದಿಂದ ಕೆಲಸ ಮಾಡಬೇಕಾಗಿದೆ. ಮಳೆಗಾಲ ಆರಂಭ ವಾಗುತ್ತಿದ್ದು, ಕಾಫಿ ತೋಟದಲ್ಲಿ ಕೆಲಸ ಮಾಡುವ ಸಂದರ್ಭ ಕಾಡಾನೆಗಳು ಬಂದರೂ ಶಬ್ದ ಕೇಳುವದಿಲ್ಲ. ಕಾಡಾನೆಗಳನ್ನು ಕಾಡಿಗಟ್ಟಿದರೂ ಮತ್ತೆ ತೋಟ ಗಳಿಗೆ ಲಗ್ಗೆ ಇಡುತ್ತಿದ್ದು, ಕಾಡಾನೆಗಳು ಮರಳಿ ಬರದಂತೆ ಕಾರ್ಯಾಚರಣೆ ನಡೆಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. -ಎ.ಎನ್. ವಾಸು