ಶನಿವಾರಸಂತೆ, ಮೇ 25: ರಸ್ತೆ ದಾಟುತ್ತಿದ್ದ ಪಾದಚಾರಿ ಮಹಿಳೆಯೊಬ್ಬರಿಗೆ ಟಿಪ್ಪರ್ ಡಿಕ್ಕಿಯಾಗಿ ಗಾಯಗೊಂಡ ಘಟನೆ ಸಮೀಪದ ಬೀಟಿಕಟ್ಟೆ ಗ್ರಾಮದಲ್ಲಿ ನಡೆದಿದೆ. ಚಾಲಕ ಟಿಪ್ಪರ್ ನಿಲ್ಲಿಸದೆ ಪರಾರಿಯಾಗಿದ್ದಾನೆ. ವಾರಿಜಾ (55) ಅಪಘಾತದಲ್ಲಿ ಗಾಯಗೊಂಡ ಮಹಿಳೆ ತಮ್ನನ್ನು ಮೊಮ್ಮಗ ಬಿ.ಆರ್. ನಿಖಿಲ್ ಜತೆ ಕೂಗೂರು ಗ್ರಾಮದ ತೋಟಕ್ಕೆ ಕೆಲಸಕ್ಕೆ ಹೋಗಿದ್ದು, ಸಂಜೆ ಮನೆಗೆ ತೆರಳಲು ಬಸ್ಸಿನಲ್ಲಿ ಬಂದು ಬೀಟಿಕಟ್ಟೆ ಜಂಕ್ಷನ್ನಲ್ಲಿ ಇಳಿದು ಮನೆಗೆ ಹೋಗಲು ರಸ್ತೆ ದಾಟುವಾಗ ಅಪಘಾತವಾಗಿದೆ. ಗೌಡಳ್ಳಿ ಗ್ರಾಮದ ಕಡೆಯಿಂದ ಸೋಮವಾರಪೇಟೆಯತ್ತ ಟಿಪ್ಪರ್ ಚಾಲಿಸಿಕೊಂಡು ಬಂದ ಚಾಲಕ ಡಿಕ್ಕಿಪಡಿಸಿದ್ದಾನೆ. ಕೆಳಗೆ ಬಿದ್ದು ಗಾಯಗೊಂಡ ಮಹಿಳೆ ವಾರಿಜಾರನ್ನು ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿ.ಆರ್. ನಿಖಿಲ್ ನೀಡಿದ ದೂರಿನ ಅನ್ವಯ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಎಸ್ಐ ಸಿ.ಎಂ. ತಿಮ್ಮಶೆಟ್ಟಿ ಪ್ರಕರಣ ದಾಖಲಿಸಿದ್ದಾರೆ.