ಮಡಿಕೇರಿ, ಮೇ 25: ಮರಂದೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆತಟ್ಟು ಕಾಲೋನಿಯ 36 ಕುಟುಂಬಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಜಿಲ್ಲಾಡಳಿತದ ಗಮನಸೆಳೆದಿರುವ ತಮ್ಮ ವಿರುದ್ಧ ಗ್ರಾಮದ ಕೆಲವರು ಹೇಳಿಕೆ ನೀಡಿದ್ದು, ಜಿಲ್ಲಾಡಳಿತ ನ್ಯಾಯ ಒದಗಿಸಲು ಪ್ರಜಾ ಪರಿವರ್ತನಾ ವೇದಿಕೆಯ ಜಿಲ್ಲಾಧ್ಯಕ್ಷ ಹೆಚ್.ಎಸ್. ಮುತ್ತಪ್ಪ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಂದೋಡ ಗ್ರಾಮದ ಕೆರೆತಟ್ಟು ಕಾಲೋನಿಯ ನಿವಾಸಿಗಳು ನೀಡಿದ ಮನವಿಯ ಮೇರೆಗೆ ತಾನು ಗ್ರಾಮಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿ, ಸವಿವರವಾದ ಮಾಹಿತಿಯನ್ನು ಜಿಲ್ಲಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು ಎಂದು ಸ್ಪಷ್ಟಪಡಿಸಿದರು. ಕಾಲೋನಿ ನಿವಾಸಿ ಲೀಲಾವತಿ ಹಾಗೂ ಇತರರು ಮಾತನಾಡಿ, ಪತ್ರಿಕಾ ಹೇಳಿಕೆ ನೀಡಿರುವ ಸ್ಥಳೀಯ ಕೆಲವು ವ್ಯಕ್ತಿಗಳು ಅಲ್ಲಿ ಅಂಗನವಾಡಿ, ಶಾಲೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲವೂ ಇರುವದಾಗಿ ಹೇಳಿದ್ದಾರೆ ಎಂದು ಆರೋಪಿಸಿದರು. ಗ್ರಾಮದಲ್ಲಿ ನೀರಿನ ಟ್ಯಾಂಕ್‍ಗಳಿವೆಯೇ ಹೊರತು ಅದರಲ್ಲಿ ನೀರು ಇಲ್ಲ. ಅಂಗನವಾಡಿ ಎಲ್ಲಿದೆ ಎಂಬದನ್ನು ಪತ್ರಿಕಾ ಹೇಳಿಕೆ ನೀಡಿದವರೇ ತೋರಿಸಬೇಕಿದೆ. ಶಾಲೆಗೆ ಈಗಲೂ 6 ಕಿ.ಮೀ. ನಡೆದು ಹೋಗುವ ಪರಿಸ್ಥಿತಿ ಇದ್ದು, ವನ್ಯಪ್ರಾಣಿಗಳ ಹಾವಳಿ ನಡುವೆ ಮಕ್ಕಳು ಶಾಲೆಗೆ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳೇ ಸ್ಥಳಕ್ಕೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿ ತಮಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಗಣೇಶ್, ಪವನ್, ರಮೇಶ್ ಹಾಗೂ ಚಿನ್ನಮ್ಮ ಉಪಸ್ಥಿತರಿದ್ದರು.