ವೀರಾಜಪೇಟೆ, ಮೇ 24: ವೀರಾಜಪೇಟೆ ಅರಣ್ಯ ವಲಯದ ಕರಡ-ಚೈಯ್ಯಂಡಾಣೆ ರಸ್ತೆಯಲ್ಲಿ ಅಕ್ರಮವಾಗಿ ಲಾರಿಯಲ್ಲಿ ರಾತ್ರಿ ವೇಳೆ ಹೆಬ್ಬಲಸು ನಾಟಗಳನ್ನು ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿ ಲಾರಿಯನ್ನು ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಅರಣ್ಯ ಇಲಾಖಾ ಸಿಬ್ಬಂದಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಲಾರಿಯಲ್ಲಿ (ಕೆ.ಎ 12 ಬಿ 9090) ಪುತ್ತೂರಿನ ಇಮ್ತಿಯಾಜ್, ಮಹಮದ್ ರಿಯಾಜ್, ಎಂ ಫಯಾಜ್ ಎಂಬವರು ಪಾರಣೆಯ ಖಾಸಗಿ ತೋಟದಿಂದ ಕರಡ ಮುಖ್ಯ ರಸ್ತೆಯ ಮೂಲಕ ಮರ ಸಾಗಿಸುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ಲಾರಿ ಹಾಗೂ ಆರೋಪಿಗಳನ್ನು ಬಂದಿಸಲಾಗಿದೆ. ಮತ್ತೋರ್ವ ಆರೋಪಿ ಕುಂಜಿಲ ಗ್ರಾಮದ ರಿಯಾಜ್ ತಲೆಮರೆಸಿಕೊಂಡಿದ್ದಾನೆ. ಲಾರಿ ಹಾಗೂ ಮರದ ಮೌಲ್ಯ ರೂ. 8 ಲಕ್ಷ ಎಂದು ಅಂದಾಜಿಸಲಾಗಿದೆ.

ಉಪಸಂರಕ್ಷಣಾಧಿಕಾರಿ ಮರೀಯಾ ಕ್ರಿಸ್ತರಾಜು ಹಾಗೂ ಸಹಾಯಕ ಉಪಸಂರಕ್ಷಣಾಧಿಕಾರಿ ರೋಷನಿ ಅವರ ಮಾರ್ಗದರ್ಶನದಲ್ಲಿ ಆರ್‍ಎಫ್‍ಒ ಗೋಪಾಲ್ ನೇತೃತ್ವದಲ್ಲಿ ಉಪರಣ್ಯಾಧಿಕಾರಿ ಅಕ್ಕಮ್ಮ, ಸುಬ್ರಾಯ, ಅರನ್ಯ ರಕ್ಷಕರಾದ ಸೋಮಯ್ಯ, ಮಾಲತೇಶ್, ಮಧುಕುಮಾರ್, ವಿಕಾಸ್, ಲತೇಶ್, ಚಾಲಕ ಅಶೋಕ್ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.