ಮಡಿಕೇರಿ, ಮೇ 24: ಸಾಮಾನ್ಯವಾಗಿ ಜೂನ್ 1 ರಂದು ಕೇರಳ ಪ್ರವೇಶಿಸುವ ಮುಂಗಾರು ಮಳೆಯು ಈ ಬಾರಿ ಐದು ದಿನ ತಡವಾಗಿ ಜೂನ್ 6 ರಂದು ಆಗಮಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಭಾರತೀಯ ಸರ್ವೇಕ್ಷಣಾ ಇಲಾಖೆಯ ಮಧ್ಯಂತರ ವರದಿಯಲ್ಲಿ ಗುರುತಿಸಲಾಗಿರುವ ಕೊಡಗಿನ 13 ಬಾಧಿತ ಸೂಕ್ಷ್ಮ ಪ್ರದೇಶಗಳಿಗೆ ನೋಡಲ್ ಅಧಿಕಾರಿಗಳನ್ನು ಈಗಾಗಲೇ ನೇಮಿಸಲಾಗಿದ್ದು, ನೋಡಲ್ ಅಧಿಕಾರಿಗಳು ಪ್ರತಿ ಗ್ರಾಮದಲ್ಲೂ, ವಿಶೇಷ ಗ್ರಾಮಸಭೆ ನಡೆಸಿ ಪ್ರಕೃತಿ ವಿಕೋಪ ಎದುರಾದಲ್ಲಿ ಸಮರ್ಥವಾಗಿ ಎದುರಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ನೋಡಲ್ ಅಧಿಕಾರಿಗಳು, ಪಿಡಿಒ, ಕಂದಾಯ ಪರಿವೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರೊಂದಿಗೆ ಸೂಕ್ಷ್ಮ ಪ್ರದೇಶಗಳಲ್ಲಿನ ಮನೆಗಳಿಗೆ ಭೇಟಿ ನೀಡಿ ಕುಟುಂಬಗಳ ಮಾಹಿತಿಯನ್ನು ಸಂಗ್ರಹಿಸಿ, ತುರ್ತು ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದಾರೆ.

ಕಳೆದ ಬಾರಿಯ ಭೂಕುಸಿತ ಹಾಗೂ ಪ್ರವಾಹದಿಂದ ನದಿ ತೋಡುಗಳಲ್ಲಿ ಸಂಗ್ರಹವಾಗಿದ್ದ ಹೂಳು, ಮರಗಳು ಹಾಗೂ ಬಂಡೆಗಳನ್ನು ತೆರವುಗೊಳಿಸಿ ನೀರಿನ ಹರಿವನ್ನು ಸರಾಗಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ರಸ್ತೆ ಬದಿಯಲ್ಲಿನ ಅಪಾಯದ ಅಂಚಿನಲ್ಲಿರುವ ಮರಗಳನ್ನು ತೆರವುಗೊಳಿಸಲಾಗುತ್ತಿದೆ.

ಪೊಲೀಸ್, ಅಗ್ನಿಶಾಮಕ, ಅರಣ್ಯ ಇಲಾಖೆಯಿಂದ ಈಗಾಗಲೇ ತುರ್ತು ಸಂದರ್ಭಗಳಲ್ಲಿನ ರಕ್ಷಣಾ ಕಾರ್ಯದ ಅಣುಕು ಪ್ರದರ್ಶನ ಮಾಡಲಾಗಿದ್ದು, ಈ ತಿಂಗಳ ತಾ. 28 ಹಾಗೂ 29 ರಂದು ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್, ಸಿವಿಲ್ ಡಿಫೆನ್ಸ್ ಫೋರ್ಸ್, ಡೋಗ್ರಾ ರೆಜಿಮೆಂಟ್, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ ಹಾಗೂ ಇತರ ಇಲಾಖೆಗಳು ಆಯ್ದ ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಕೃತಿ ವಿಕೋಪದ ಸನ್ನಿವೇಶದಲ್ಲಿನ ಜಂಟಿ ರಕ್ಷಣಾ ಕಾರ್ಯದ ಅಣುಕು ಪ್ರದರ್ಶನ ಕೈಗೊಳ್ಳಲಿದ್ದಾರೆ.

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಕೊಡಗು ಜಿಲ್ಲೆಯ ಹವಾಮಾನದ ಬಗ್ಗೆ ನಿರಂತರ ನಿಗಾವಹಿಸಿದೆ. ಹವಾಮಾನದ ಮಾಹಿತಿಯನ್ನು ರಾಜ್ಯ ನೈಸರ್ಗಿಕ ವಿಪತ್ತು ಉಪ ಕೇಂದ್ರ(ಕೆಎಸ್‍ಎನ್‍ಡಿಎಮ್‍ಸಿ) ದೂರವಾಣಿ ಸಂಖ್ಯೆ 9243345433, 080-22745232, 22745234 ಗಳಿಗೆ ಕರೆ ಮಾಡಿ ಪಡೆಯಬಹುದು. ಸೂಕ್ಷ್ಮ ಪ್ರದೇಶದಲ್ಲಿನ ಜನರು ತಮ್ಮ ಪ್ರದೇಶದ ಪಿಡಿಒ, ನೋಡಲ್ ಅಧಿಕಾರಿ, ಕಂದಾಯ ಪರಿವೀಕ್ಷಕರು, ಗ್ರಾಮ ಲೆಕ್ಕಿಗರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಅಥವಾ ಜಿಲ್ಲಾಧಿಕಾರಿಗಳ ಕಚೇರಿಯ ವಿಪತ್ತು ನಿರ್ವಹಣಾ ಕೊಠಡಿಯ ಉಚಿತ ದೂರವಾಣಿ ಸಂಖ್ಯೆ 1077 (08272-221077)ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

ಸೂಕ್ಷ್ಮ ಪ್ರದೇಶ: ಭಾರತೀಯ ಸರ್ವೇಕ್ಷಣಾ ಇಲಾಖೆಯ ಮಧ್ಯಂತರ ವರದಿಯನ್ನು ಆಧರಿಸಿ, ಕರ್ನಾಟಕ ರಾಜ್ಯ ರಾಷ್ಟ್ರೀಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರ (ಕೆಎಸ್‍ಎನ್‍ಡಿಎಂಸಿ), ಯುನಿಸೆಫ್ ಸಂಸ್ಥೆಗಳೊಂದಿಗೆ ಚರ್ಚಿಸಿದಂತೆ, ಲಭ್ಯವಿರುವ ಮಾಹಿತಿ ಮತ್ತು ದಾಖಲೆಗಳ ಆದಾರದಲ್ಲಿ ಕೊಡಗು ಜಿಲ್ಲೆಯಲ್ಲಿ 2019ರ ಮುಂಗಾರು ಮಳೆಯಲ್ಲಿ ಭೂ ಕುಸಿತ ಉಂಟಾಗಬಹುದಾದ ಕೆಲವು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ.

ಇಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಮುಂಜಾಗ್ರತೆಯಾಗಿ ತುರ್ತು ಪರಿಹಾರ ಕಾರ್ಯ ಕೈಗೊಳ್ಳಲು ಪ್ರದೇಶಗಳ ಸಾರ್ವಜನಿಕರು ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ನೆರವು, ಸಲಹೆ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ನಿಡುವಟ್ಟು, ಬಾರಿಬೆಳ್ಳಚ್ಚು, ಹೆಬ್ಬೆಟ್ಟಗೇರಿ, ದೇವಸ್ತೂರು-ಕೃಷಿ ಇಲಾಖೆ ಉಪ ನಿರ್ದೇಶಕರಾದ ರಾಜು (8277931901), (9900594717). ತಂತಿಪಾಲ, ಬಾಡಿಗೇರಿ, ಮುಕ್ಕೋಡ್ಲು, ಮೇಘತ್ತಾಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅವಿನ್ (9886907455). ಮಕ್ಕಂದೂರು, ಉದಯಗಿರಿಗೆ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇಲಾಖೆಯ ಶಿವಕುಮಾರ್ (9741999571), ಕಾಟಕೇರಿ, ಮದೆ(ಜೋಡುಪಾಲ) 2ನೇ ಮೊಣ್ಣಂಗೇರಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಹೇಮಂತ್ ಕುಮಾರ್ (9980240966).

ಇಂತಹ ಸೂಕ್ಷ್ಮ ಪ್ರದೇಶಗಳ ಜನರಲ್ಲಿ ಪ್ರಕೃತಿ ವಿಕೋಪ ಸಂಭವಿಸಿದಾಗ ವಹಿಸಬೇಕಾದ ತುರ್ತು ಕ್ರಮಗಳ ಬಗ್ಗೆ ಸಂಘ ಸಂಸ್ಥೆಗಳೂ, ಚುನಾಯಿತ ಪ್ರತಿನಿಧಿಗಳು ಮತ್ತು ನೋಡಲ್ ಅಧಿಕಾರಿಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ.

ಮುಂಬರುವ ಮಳೆಗಾಲದಲ್ಲಿ ವಿಕೋಪಗಳು ಎದುರಾದಲ್ಲಿ ಅದನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತವು ಎಲ್ಲಾ ರೀತಿಯ ಸುರಕ್ಷಾ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಯಾವದೇ ಊಹಾಪೋಹಗಳಿಗೆ ಕಿವಿಗೊಡದೆ, ವದಂತಿಗಳನ್ನು ಹರಡದೆ, ಎದೆಗುಂದದೆ ಜಿಲ್ಲಾಡಳಿತದೊಂದಿಗೆ ಸಹಕರಿಸಲು ಕೋರಿದೆ.ಜಿಲ್ಲೆಗೆ ಆಗಮಿಸುವ ಪ್ರವಾಸಿಗರೂ ಸಹ ಜಿಲ್ಲಾಡಳಿತ ಆಗಿಂದಾಗ್ಗೆ ನೀಡುವ ಸೂಚನೆಗಳನ್ನು ಗಮನದಲ್ಲಿಟ್ಟು ಕೊಂಡು ಅಗತ್ಯ ಮುಂಜಾಗ್ರತೆ ವಹಿಸಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮನವಿ ಮಾಡಿದ್ದಾರೆ.