ಮಡಿಕೇರಿ, ಮೇ 24: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ 2018ನೇ ಸಾಲಿನ ಗೌರವ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಮೂವರು ಸಾಧಕರಿಗೆ ಜೂ.9ರಂದು ಗೋಣಿಕೊಪ್ಪಲುವಿನಲ್ಲಿ ನಡೆಯಲಿರುವ ‘ಬೊಳ್ಳಿನಮ್ಮೆ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವದು ಎಂದು ಅಕಾಡೆಮಿಯ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಕೊಡವ ಸಾಹಿತ್ಯ ಸಂಶೋಧನಾ ಕ್ಷೇತ್ರ, ಕೊಡವ ಕಲಾಕ್ಷೇತ್ರ ಹಾಗೂ ಜಾನಪದ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದವರನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ ಎಂದರು. ಈ ಬಾರಿ ಸಾಹಿತ್ಯ ಸಂಶೋಧನಾ ಕ್ಷೇತ್ರದಲ್ಲಿ ಡಾ. ಬೊವ್ವೇರಿಯಂಡ ನಂಜಮ್ಮ ಚಿಣ್ಣಪ್ಪ, ಕೊಡವ ಕಲಾಕ್ಷೇತ್ರದಲ್ಲಿ ಕೋಳೇರ ಸನ್ನು ಕಾವೇರಪ್ಪ ಹಾಗೂ ಜಾನಪದ ಕ್ಷೇತ್ರದಲ್ಲಿ ನಾಳಿಯಮ್ಮಂಡ ಕೆ.ಅಚ್ಚಮ್ಮಯ್ಯ ಅವರನ್ನು ಆಯ್ಕೆ ಮಾಡಿರುವದಾಗಿ ತಿಳಿಸಿದರು.
ಜೂ.8 ಮತ್ತು 9 ರಂದು ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನಲ್ಲಿ ‘ಬೊಳ್ಳಿನಮ್ಮೆ’ ಕಾರ್ಯಕ್ರಮ ನಡೆಯಲಿದ್ದು, 9 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮೂವರು ಸಾಧಕರಿಗೆ ತಲಾ ರೂ. 50 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಗುವದು ಎಂದು ಪೊನ್ನಪ್ಪ ಹೇಳಿದರು.
ಡಾ.ಬೊವ್ವೇರಿಯಂಡ ನಂಜಮ್ಮ
ಕೊಡಗಿನ ಪ್ರಮುಖ ಸಂಶೋಧನಾ ಕೃತಿಯಾದ ‘ಪಟ್ಟೋಲೆ ಪಳಮೆ’ಯನ್ನು 1924ರಲ್ಲಿ ರಚಿಸಿದ ನಡಿಕೇರಿಯಂಡ ಚಿಣ್ಣಪ್ಪ ಅವರ ಮೊಮ್ಮಗಳಾಗಿರುವ ನಂಜಮ್ಮ ಅವರು ಬೊವ್ವೇರಿಯಂಡ ಎಂ. ಚಿಣ್ಣಪ್ಪ ಅವರನ್ನು ವಿವಾಹವಾಗಿದ್ದು, ದೇಶ ವಿದೇಶಗಳ ಹಲವು ಸಂಸ್ಥೆಗಳಲ್ಲಿ ಕೆಲಸ ಮಾಡಿ 1995ರಲ್ಲಿ ಕೆನಡಾದಿಂದ ಹಿಂತಿರುಗಿದ ನಂತರ ಬರೆಯುವ ಹವ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಅಜ್ಜ ನಡಿಕೇರಿಯಂಡ ಚಿಣ್ಣಪ್ಪ ಇವರು ಬರೆದಿರುವ ಪಟ್ಟೋಲೆ ಪಳಮೆ ಪುಸ್ತಕವನ್ನು ಇಂಗ್ಲೀಷ್ಗೆ ಅನುವಾದಗೊಳಿಸಿ 2003ರಲ್ಲಿ ಲೋಕಾರ್ಪಣೆ ಮಾಡಿದ ಇವರು, 2003ರಿಂದ 2008ನೇ ಇಸವಿಯವರೆಗೆ ಕೊಡಗಿನ ಮೂಲೆ ಮೂಲೆಯಲ್ಲಿ ನೆಲೆಸಿರುವ ಎಲ್ಲಾ ಭಾಷಿಕ ಜನಾಂಗದವರ ಐನ್ಮನೆಗಳಿಗೆ ತೆರಳಿ 800ಕ್ಕೂ ಹೆಚ್ಚು ಐನ್ಮನೆಗಳ ವಿವರಗಳನ್ನು ಸಂಗ್ರಹಿಸಿ ‘ಐನ್ಮನೆಸ್ ಆಫ್ ಕೊಡಗು’ ಎಂಬ ಪುಸ್ತಕವನ್ನು ಪ್ರಕಟಿಸಿದ್ದಾರೆ. ಇದು ಅವರ ಸಂಶೋಧನಾ ಕೃತಿಯಾಗಿದ್ದು, ಈಗಲೂ ಅವರು ಇನ್ನೂ ಹಲವು ಐನ್ಮನೆಗಳ ವಿವರಗಳನ್ನು ಸಂಗ್ರಹಿಸಿ ತಮ್ಮ ವೆಬ್ಸೈಟ್ನಲ್ಲಿ ಎಲ್ಲಾ ಮಾಹಿತಿ ಸಿಗುವಂತೆ ಮಾಡಿದ್ದಾರೆ.
1995ರಿಂದ ಕೊಡಗಿನ ಮೂಲೆ ಮೂಲೆಗೆ ತೆರಳಿ ಎಲ್ಲಾ ಭಾಷಿಕರ ಐನ್ಮನೆ ಅಲ್ಲದೆ ಅವರ ಕೈಮಡ ಮತ್ತು ಇನ್ನಿತರ ಮಾಹಿತಿಗಳನ್ನು ಪಡೆದು ಹಲವು ಪತ್ರಿಕೆ ಮತ್ತು ಪುಸ್ತಕದ ಮುಖಾಂತರ ಹೊರತರುವ ಕೆಲಸವನ್ನು ಮಾಡುತ್ತಿದ್ದಾರೆ. ಅಜ್ಜ ನಡಿಕೇರಿಯಂಡ ಚಿಣ್ಣಪ್ಪನ ಅವರಂತೆ ಇವರು ಸಹ ಊರು ಊರುಗಳಿಗೆ ತೆರಳಿ ಜನಪದ ಸಾಹಿತ್ಯದ ಬಗ್ಗೆ ಹಾಗೂ ಹಬ್ಬ ಹರಿದಿನಗಳ ಬಗ್ಗೆ ಮಾಹಿತಿ ಸಂಗ್ರಹಿಸಿರುವ ಇವರ ಈ ಎಲ್ಲಾ ಸಂಶೋಧನೆಯನ್ನು ಪರಿಗಣಿಸಿ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕೋಳೇರ ಸನ್ನು ಕಾವೇರಪ್ಪ
ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ಬಲ್ಯಮುಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡಿಕೇರಿ ಗ್ರಾಮದವರಾದ ಕೋಳೆರ ಸನ್ನು ಕಾವೇರಪ್ಪ ಅವರು 3ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವಾಗಲೇ ‘ಪಾದುಕಾ ಪಟ್ಟಾಭಿಷೇಕ’ ನಾಟಕದಲ್ಲಿ ಅಭಿನಯಿಸುವದರ ಮೂಲಕ ಕಲಾ ಜೀವನ ಆರಂಭಿಸಿದ್ದಾರೆ. ನಂತರದ ದಿನಗಳಲ್ಲಿ ವರ್ಷಂಪ್ರತಿ ನಾಟಕ, ಛದ್ಮವೇಷಗಳಲ್ಲಿ ಅಭಿನಯಿಸುತ್ತಾ ಬಂದು 1981ನೇ ಇಸವಿಯಲ್ಲಿ ಸೃಷ್ಟಿ ಕೊಡಗು ರಂಗ ತಂಡದಲ್ಲಿ ಸೇರ್ಪಡೆಗೊಂಡು ಆನಂತರ 1985ರಲ್ಲಿ ನಿ.ನಾ.ಸಂ. ನಲ್ಲಿ ರಂಗ ಶಿಕ್ಷಣ ತರಬೇತಿ ಪಡೆದಿದ್ದಾರೆ.
ನಂತರ ಸೃಷ್ಟಿ ಸಂಸ್ಥೆಯ ನಾಟಕಗಳಾದ ಕಳ್ಳ್, ಪೆರ್ಚೊಳಿಯ, ದಿವಾನ್ ಬೋಪಣ್ಣ, ನೀಲಿ ಕುದುರೆ, ತಬರನ ಕಥೆ, ಬಿದ್ದು ಟೈಲರ್ನ ಪೊಣ್ಣ್, ಪೋಲಿ ಕಿಟ್ಟಿ, ತದ್ರೂಪಿ, ಕಟ್ಟೆ, ಕೊಡಗ್ ರಾಜ್ಯ, ಈಡಿಪಸ್, ಮಾಚಯ್ಯ, ಸಾಹೇಬರು ಬರುತ್ತಾರೆ ಮುಂತಾದ ನಾಟಕಗಳಲ್ಲಿ ಅಭಿನಯಿಸಿ 1996ರಲ್ಲಿ ಕೊಡವ ತಕ್ಕ್ ಎಳ್ತ್ ಕಾರಡ ಕೂಟದ ತಂಡದಲ್ಲಿ ನಾಟಕ ನಿರ್ದೇಶನದೊಂದಿಗೆ ಓಂಕಾರೇಶ್ವರ, ಪರ್ಂಜ ಕಣ್ಣೀರ್, ಇಗ್ಗುತ್ತಪ್ಪ, ಕಾವೇರಿ, ಯಯಾತಿ, ಆಲಿಬಾಬಾ, ಬ್ರಹ್ಮತೀರ್ಥ, ತೆಳ್ಂಗ್ನ ಕಾವೇರಿ, ಕುರ್ಕ್ಂಗ, ಮುಂತಾದ ನಾಟಕಗಳಲ್ಲಿ ಅಭಿನಯಿಸಿರುತ್ತಾರೆ. ಹೀಗೆ ಇವರು ನಾಟಕಗಳಲ್ಲಿ, ಧಾರವಾಹಿಗಳಲ್ಲಿ ಕನ್ನಡ ಮತ್ತು ಕೊಡವ ಭಾಷಾ ಚಲನಚಿತ್ರಗಳಲ್ಲಿ ಅಭಿನಯಿಸುವದರ ಮೂಲಕ ರಂಗಭೂಮಿ ಕ್ಷೇತ್ರದಲ್ಲಿ ಮಾಡಿರುವ ಸೇವೆಯನ್ನು ಪರಿಗಣಿಸಿ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ನಾಳಿಯಮ್ಮಂಡ ಕೆ. ಅಚ್ಚಮ್ಮಯ್ಯ
ವೀರಾಜಪೇಟೆ ತಾಲೂಕಿನ ಕುಟ್ಟಂದಿ ಗ್ರಾಮದ ನಾಳಿಯಮ್ಮಂಡ ಕೆ. ಅಚ್ಚಮ್ಮಯ್ಯ ಅವರು ಅಮ್ಮಕೊಡವ ಜನಾಂಗಕ್ಕೆ ಸೇರಿದವರಾಗಿದ್ದು, ಕಳೆದ 45 ವರ್ಷದಿಂದ ಬಾಳೋಪಾಟ್, ತಾಲಿಪಾಟ್, ಕೋಲಾಟ್, ಬೊಳಕಾಟ್, ಕಪ್ಪೆಯಾಟ್, ಪರೆಯಕಳಿ, ಸಂಬಂಧ ಅಡ್ಕುವೊ, ಅಲ್ಲದೆ ಕೊಡವ ಪದ್ಧತಿ ಸಂಸ್ಕøತಿಯನ್ನು ಕಲಿತಿದಲ್ಲದೆ, ಊರಿನ ಎಷ್ಟೋ ಜನರಿಗೆ ಇದನ್ನು ಕಲಿಸಿದ್ದಾರೆ. ಅಲ್ಲದೆನೆ ಸಾವು ಮನೆಯಲ್ಲಿ ಚಾವುಪಾಟ್, ಮಾದ ಮನೆಯಲ್ಲಿ ಮಾದಪಾಟ್ ಹಾಡಿ ಸತ್ತವರನ್ನು ಓಣಿಕ್ಕೂಟುವ ಪದ್ಧತಿಯನ್ನು ಸುಮಾರು 200ಕ್ಕೂ ಅಧಿಕ ಮಾಡಿರುತ್ತಾರೆ.
ಮೂಂದ್ನಾಡಿನಲ್ಲಿ ನಡೆಯುವ ಕೈಮುಡಿಕೆ ನಮ್ಮೆಯಲ್ಲಿ ಸುಮಾರು 26ವರ್ಷದಿಂದ ಹಾಡಿ ನೆನಪಿನ ಕಾಣಿಕೆ, ಪ್ರಶಸ್ತಿ ಪಡೆದಿದ್ದು, ಪುತ್ತರಿ ನಮ್ಮೆಯ ಸಮಯದಲ್ಲಿ ಮನೆಪಾಟ್ ಹಾಡುವುದು, ರೈತರ ಪರಿಕರವಾದ ನೇಗಿ ನೊಗ ತಾವೆ ತಯ ಕಳಿಕೋಲ್, ತಮಿಕೇರ್, ನೆಲ್ಲ್ಕುಟ್ಟುವ ರಾಟೆ, ವನಕೆ, ಅಲ್ಲದೆ ಇನ್ನೂ ಹಲವು ರೈತರ ಪರಿಕರವನ್ನು ತಯಾರಿಸಿ ನೀಡುತ್ತಾ ಬಂದಿದ್ದಾರೆ.
ಉತ್ತರ ಕೊಡಗಿನ ಭದ್ರಕಾಳಿ ಈಶ್ವರ ದೇವಸ್ಥಾನ, ಬೆಕ್ಕೆಸೊಡ್ಲೂರು, ಕುತ್ತ್ನಾಡ್, ಹಳ್ಳಿಗಟ್, ಕುಟ್ಟಂದಿ, ಕೊಟ್ಟಂಗೇರಿ ದೇವಸ್ಥಾನಗಳಿಗೆ ದೇವರ ಕುದುರೆಯನ್ನು ತಯಾರಿಸಿ ಕೊಟ್ಟಿರುವ ಇವರು ಕೊಡವ ಆಚಾರ ವಿಚಾರ ಸಂಸ್ಕøತಿ, ರೈತರ ಪರಿಕರ ಸೇರಿದಂತೆ ಕೊಡವ ಜನಪದ ಕ್ಷೇತ್ರದಲ್ಲಿ ಮಾಡಿರುವ ಗಣನೀಯ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಪರಿಗಣಿಸಲಾಗಿದೆ.
ಪ್ರಶಸ್ತಿ ಪುರಸ್ಕøತರಿಗೆ ತಲಾ ರೂ. 50 ಸಾವಿರ ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವದು ಎಂದು ಪೊನ್ನಪ್ಪ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ರಿಜಿಸ್ಟ್ರಾರ್ ಬಿ.ಚಂದ್ರಹಾಸ ರೈ, ಸದಸ್ಯರಾದ ತೋರೆರ ಮುದ್ದಯ್ಯ, ಹಂಚೆಟ್ಟಿರ ಮನು ಮುದ್ದಯ್ಯ ಹಾಗೂ ಬೊಳ್ಳಜಿರ ಬಿ. ಅಯ್ಯಪ್ಪ ಉಪಸ್ಥಿತರಿದ್ದರು.