ಶನಿವಾರಸಂತೆ, ಮೇ 24: ಪಟ್ಟಣದಲ್ಲಿ ಗ್ರಾಮ ಪಂಚಾಯಿತಿಯ ನೈರ್ಮಲ್ಯ ಕಾರ್ಯ ಸ್ಥಗಿತಗೊಂಡಿದ್ದು, ಎಲ್ಲೆಡೆ ಕಸದ ರಾಶಿ ರಾರಾಜಿಸುತ್ತಿದೆ. ಕಳೆ ಸಸ್ಯಗಳು ಆಳೆತ್ತರಕ್ಕೆ ಬೆಳೆದು ನಿಂತಿವೆ. ಮುಖ್ಯರಸ್ತೆ, ಬೈಪಾಸ್ ರಸ್ತೆ, ಕಾವೇರಿ ರಸ್ತೆಗಳ ಎರಡೂ ಬದಿಗಳಲ್ಲೂ ಉದ್ದಕ್ಕೂ ಒಣ - ಹಸಿ ತ್ಯಾಜ್ಯಗಳು ರಾಶಿ ಬಿದ್ದಿವೆ. ಸತ್ತ ಕೋಳಿ, ಇತರ ಪ್ರಾಣಿಗಳ ತ್ಯಾಜ್ಯವನ್ನು ಚೀಲದಲ್ಲಿ ತುಂಬಿಸಿ ಎಸೆಯಲಾಗಿದೆ. ಕೊಳೆತು ದುರ್ನಾತ ಬೀರುತ್ತಿದ್ದು, ಪಾದಚಾರಿಗಳು ಮೂಗು ಮುಚ್ಚಿ ನಡೆಯುವ ಪರಿಸ್ಥಿತಿ ಉಂಟಾಗಿದೆ ಎಂದು ಕೆಲವು ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಟ್ಟಣ ಪ್ರವೆÉೀಶ ದ್ವಾರದ ಮುಖ್ಯರಸ್ತೆ ಬದಿಯಲ್ಲಿ ಸೇತುವೆ ಪಕ್ಕವೇ ಇಡೀ ಊರಿನ ತ್ಯಾಜ್ಯವನ್ನು ಸಂಗ್ರಹಿಸಿ ಟ್ರ್ಯಾಕ್ಟರ್ನಲ್ಲಿ ತುಂಬಿಸಿ ಸುರಿಯಲಾಗುತ್ತದೆ. ಆಗಾಗ್ಗೆ ಪೌರ ಕಾರ್ಮಿಕರು ತ್ಯಾಜ್ಯ ರಾಶಿಗೆ ಬೆಂಕಿ ಹಚ್ಚುವದರಿಂದ ಪರಿಸರ ಮಾಲಿನ್ಯಗೊಳ್ಳುತ್ತಿದೆ. ಸಮೀಪದಲ್ಲೇ ಸಮುದಾಯ ಆರೋಗ್ಯ ಕೇಂದ್ರವಿದ್ದು, ರೋಗಿಗಳು ಭಯಪಡುವಂತಾಗಿದೆ. ಗ್ರಾಮ ಪಂಚಾಯಿತಿಯವರಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ, ತ್ಯಾಜ್ಯ ವಿಲೇವಾರಿಗೆ, ಪಟ್ಟಣ ನೈರ್ಮಲ್ಯಕ್ಕೆ ಶೀಘ್ರ ಕ್ರಮಕೈಗೊಳ್ಳಲಿ ಎಂದು ನಾಗರಿಕರಾದ ವಸಂತಾಚಾರ್, ವಿಮಲೇಶ್ಚಂದ್ರ, ಗೀತಾ, ಶೈಲಾ ಇತರರು ಒತ್ತಾಯಿಸಿದ್ದಾರೆ.