ಗೋಣಿಕೊಪ್ಪಲು, ಮೇ 24: ಕಾರ್ಮಿಕರೆಲ್ಲರಿಗೂ ಹಾಲುಣಿಸುತ್ತಿದ್ದ ಕಾಮಧೇನು ಕೊನೆಗೂ ತನ್ನ ನೋವಿನ ನಡುವೆ ಹೆಣ್ಣು ಕರುವಿಗೆ ಜನ್ಮ ನೀಡುವ ಮೂಲಕ ತೋಟದ ಕಾರ್ಮಿಕರಿಗೆ, ಮಾಲೀಕರಿಗೆ ಹರ್ಷ ತಂದಿದೆ. ತಾ. 12 ರಂದು ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಪಾಲ ಸಮೀಪದ ನರವತ್ತು ಎಸ್ಟೇಟ್‍ನಲ್ಲಿ ಎಲ್ಲರ ಪ್ರೀತಿಗೆ ಪಾತ್ರವಾಗಿದ್ದ ಕಾಮಧೇನುವಿನ ಮೇಲೆ ವ್ಯಾಘ್ರನ ದಾಳಿ ನಡೆದಿತ್ತು.
ಹುಲಿಯ ಬಾಯಿಂದ ತಪ್ಪಿಸಿಕೊಂಡು ಸಾವು-ಬದುಕಿನ ನಡುವೆ ಆ ಹಸು ಹೋರಾಟ ನಡೆಸಿತ್ತು. ವೈದ್ಯರೊಬ್ಬರು ಆರಂಭದಲ್ಲಿ ಇದನ್ನು ಬದುಕಿಸಲು ಸಾಧ್ಯ ಇಲ್ಲ ಎಂದಿದ್ದರು. ಆದರೆ ಹಸುವಿನ ಮಾಲೀಕ ಹಾಗೂ ಕಾರ್ಮಿಕರ ಸತತ ಪರಿಶ್ರಮ, ಪಶು ವೈದ್ಯಾಧಿಕಾರಿಗಳ ಔಷಧೋಪಚಾರದಿಂದ ಬಹುಬೇಗ ಗುಣಮುಖಗೊಂಡ ಕಾಮಧೇನು ಇದೀಗ ಹೆಣ್ಣು ಕರುವಿಗೆ ಜನ್ಮ ನೀಡುವ ಮೂಲಕ ಸಾವನ್ನೆ ಗೆದ್ದು ಬಂದಿದ್ದಾಳೆ.
ಈ ಹಸುವಿನಿಂದ ತನ್ನ ಬದುಕನ್ನು ಕಂಡುಕೊಂಡಿದ್ದ ಕಾರ್ಮಿಕ ವೆಂಕಟೇಶ್ ಕಳೆದ 12 ವರ್ಷಗಳಿಂದ ಈ ಹಸುವಿನೊಂದಿಗೆ ಒಡನಾಟವಿಟ್ಟುಕೊಂಡಿದ್ದು ತನ್ನ ಜೀವನ ಸಾಗಿಸಿ, ಇದರಿಂದ ಬಂದಂತಹ ಹಾಲನ್ನು ಇಡೀ ತೋಟದ ಕಾರ್ಮಿಕರಿಗೆ ನೀಡಿ ಹೆಚ್ಚಾಗಿದ್ದನ್ನು ಹೊಟೇಲ್‍ಗೆ ನೀಡಿ ಇದರಲ್ಲಿ ಬಂದ ಹಣದಿಂದ ಮನೆ ನಿರ್ಮಿಸಿಕೊಂಡು ಬದುಕು ಕಟ್ಟಿಕೊಂಡಿದ್ದ. ತನ್ನ ಕಣ್ಣ ಮುಂದೆಯೇ ಹಸುವಿನ ಮೇಲೆ ಹುಲಿ ದಾಳಿ ನಡೆಸಿದ್ದ ಸಂದರ್ಭ ವೆಂಕಟೇಶ್‍ಗೆ ತನ್ನ ಜಂಘ ಬಲವೇ ಉದುಗಿ ಹೋಗಿತ್ತು ಎಂದು ನೋವಿನಿಂದ ನುಡಿಯುತ್ತಾರೆ. ಈತನ ಆರೈಕೆಯಿಂದ ಹಸು ಸಂಪೂರ್ಣ ಚೇತರಿಕೆಗೊಂಡಿದ್ದು ಓಡಾಡಲು ಆರಂಭಿಸಿದೆ.