ಕೊಡಗು-ಮೈಸೂರು ಕ್ಷೇತ್ರದ 22 ಅಭ್ಯರ್ಥಿಗಳ ಮತಗಳಿಕೆ

ಮಡಿಕೇರಿ, ಮೇ 24: ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಅತ್ಯಧಿಕ ಮತಗಳಿಂದ ಗೆಲವು ದಾಖಲಿಸಿರುವ ಸಂಸದ ಪ್ರತಾಪ್ ಸಿಂಹ ಅವರು, ಈ ಬಾರಿಯ ಚುನಾವಣೆಯಲ್ಲಿ ಒಟ್ಟು 6,88,974 ಮತಗಳನ್ನು ಪಡೆದಿದ್ದಾರೆ. ಪ್ರತಿಸ್ಪರ್ಧಿ ಸಿ.ಹೆಚ್. ವಿಜಯಶಂಕರ್ ಅವರು ದ್ವಿತೀಯ ಸ್ಥಾನದೊಂದಿಗೆ 5,50327 ಮತಗಳಿಸಿ ಪರಾಭವಗೊಂಡಿದ್ದಾರೆ.

ತೃತೀಯ ಸ್ಥಾನದಲ್ಲಿ ಬಿ.ಎಸ್.ಪಿ. ಅಭ್ಯರ್ಥಿ ಡಾ. ಚಂದ್ರ ಎಂಬವರು 24,597 ಮತಗಳನ್ನು ಪಡೆದಿದ್ದಾರೆ. ಇನ್ನುಳಿದಂತೆ ಕಣದಲ್ಲಿದ್ದ ಇತರ 19 ಮಂದಿ ಅಭ್ಯರ್ಥಿಗಳಲ್ಲಿ ಮೂವರು ಮಹಿಳೆಯರು ಸಹಿತ ಎಲ್ಲರೂ ಠೇವಣಿ ಕಳೆದುಕೊಂಡಿದ್ದಾರೆ.

ಇಂಥವರ ಪೈಕಿ ಶ್ರೀನಿವಾಸಯ್ಯ 6,863, ವೆಂಕಟೇಶ್ ನಾಯಕ್ 4,504 ಮತಗಳಿಸಿದ್ದು, ವಿ. ಆಶಾರಾಣಿ 4,259 ಹಾಗೂ ಅಲಗೂಡು ಲಿಂಗರಾಜು 3,5,06 ಮತ ಪಡೆದಿದ್ದಾರೆ. ಅಂತೆಯೇ ಸಿ. ರಾಜು 2,515, ಜಿ. ಲೋಕೇಶ್‍ಕುಮಾರ್ 2,270 ಮತಗಳಿಸಿದ್ದಾರೆ. ಇನ್ನು ರವಿ ಎಂಬವರು 2,151, ಮಹದೇವ್ 1,949 ಮತ ಹಾಗೂ ಆರ್. ಮಹೇಶ್ 1,676 ಮತ ಪಡೆದಿದ್ದಾರೆ.

ಅಂತೆಯೇ ಪಿ.ಎಸ್. ಸಂದ್ಯಾ 1,473, ಸುರೇಶ್ ಗೌಡ 1,386, ಅಲಿಸನ್ 1,047, ಕಾವೇರಮ್ಮ 1,046 ಹಾಗೂ ಸೋಮಸುಂದರ್ ಎಂಬವರು 947 ಮತದೊಂದಿಗೆ ಎನ್. ನಾಗೇಶ್ 913 ಮತಗಳಿಸಿದ್ದಾರೆ.

ಮಾತ್ರವಲ್ಲದೆ ಈ ಬಾರಿಯ ಚುನಾವಣೆಯಲ್ಲಿಯೂ ಒಟ್ಟು 5,346 ಮಂದಿ ಅಭ್ಯರ್ಥಿಗಳಿಗೆ ತಮ್ಮ ಹಕ್ಕು ಚಲಾಯಿಸದೆ ನೋಟಾ ಮತದಾನ ಮಾಡಿರುವದು ಗೋಚರಿಸಿದೆ. ಆದರೆ ಇಡೀ ಕ್ಷೇತ್ರದಲ್ಲಿ ಈ ಚುನಾವಣೆಯಲ್ಲಿ ಮತಗಳು ತಿರಸ್ಕøತಗೊಂಡಿಲ್ಲ ಎನ್ನುವದು ವಿಶೇಷ.

ಬದಲಾಗಿ ಒಟ್ಟು ಚಲಾವಣೆಗೊಂಡಿರುವ 5,625 ಅಂಚೆ ಮತಗಳ ಪೈಕಿ 62 ಮತಗಳು ತಿರಸ್ಕøತಗೊಂಡಿವೆ. ಅಲ್ಲದೆ 27 ಮಂದಿ ಅಂಚೆ ಮೂಲಕವೂ ನೋಟಾ ಮತ ಚಲಾಯಿಸಿದ್ದಾರೆ.ರಾಜೀನಾಮೆಗೆ ಪ್ರಜ್ವಲ್ ರೇವಣ್ಣ ನಿರ್ಧಾರ..!

ಹಾಸನ, ಮೇ 24: ನಾಟಕೀಯ ಬೆಳವಣಿಗೆಯೊಂದರಲ್ಲಿ ಹಾಸನದಲ್ಲಿ ನೂತನವಾಗಿ ಚುನಾಯಿತರಾಗಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ, ಫಲಿತಾಂಶದ ಮರುದಿನವೇ ರಾಜೀನಾಮೆಗೆ ಮುಂದಾಗಿದ್ದಾರೆ. ತಾತ, ಮಾಜಿ ಪ್ರಧಾನಿ ದೇವೇಗೌಡ ಅವರ ಸೋಲಿನಿಂದ ತೀವ್ರ ನೋವಾಗಿದೆ. ಹೀಗಾಗಿ ರಾಜೀನಾಮೆ ನೀಡುತ್ತಿರುವದಾಗಿ ಅವರು ಹೇಳಿದ್ದಾರೆ. ಚೊಚ್ಚಲ ಪ್ರಯತ್ನದಲ್ಲೇ ಸಂಸತ್ತಿಗೆ ಆಯ್ಕೆಯಾದ ದೇವೇಗೌಡರ ಮೊಮ್ಮಗ ಪ್ರಜ್ವಲ್ ಈ ಮೂಲಕ ಅವರು ತಮಗೆ ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ ದೇವೇಗೌಡರಿಗಾಗಿ ತಮ್ಮ ಕ್ಷೇತ್ರವನ್ನು ತ್ಯಾಗ ಮಾಡಲು ಮುಂದಾಗಿದ್ದಾರೆ. ತಮ್ಮ ರಾಜೀನಾಮೆ ಕುರಿತಂತೆ ತಂದೆ ಹೆಚ್.ಡಿ. ರೇವಣ್ಣ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿಲ್ಲ. ಕುಟುಂಬದವರಿಂದ ನನ್ನ ಮೇಲೆ ಯಾವದೇ ಒತ್ತಡ ಬಂದಿಲ್ಲ. ಯಾರಿಗೂ ಈ ಬಗ್ಗೆ ಕೇಳಿಲ್ಲ. ನನ್ನ ಮನಸ್ಸಿನಲ್ಲಿರುವ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಕಾಂಗ್ರೆಸ್ ಮತ್ತು ಜೆಡಿಎಸ್ ಹಿರಿಯ ನಾಯಕರೊಂದಿಗೆ ಚರ್ಚಿಸಿ ಎಲ್ಲರೂ ಹೋಗಿ ದೇವೇಗೌಡರ ಮನವೊಲಿಸಲಾಗುವದು ಎಂದು ಪ್ರಜ್ವಲ್ ತಿಳಿಸಿದ್ದಾರೆ. ಹೋರಾಟವೇ ಜೀವನ ಎಂದುಕೊಂಡಿದ್ದ ದೇವೇಗೌಡರಿಗೆ ಸೋಲಾಗಿದೆ. ದೇವೇಗೌಡರಿಗೆ ಮತ್ತೆ ಶಕ್ತಿ ತುಂಬುವದು ನನ್ನ ಉದ್ದೇಶ. ಇದರ ಕುರಿತು ಹಾಸನದ ಜನತೆ ತಪ್ಪು ತಿಳಿಯಬಾರದು ಎಂದು ಅವರು ಹೇಳಿದ್ದಾರೆ. ರಾಜ್ಯಕ್ಕೆ ದೇವೇಗೌಡರ ಅಗತ್ಯವಿದೆ. ಬಡವರು, ರೈತರ ಕೆಲಸಕ್ಕಾಗಿ ದೇವೇಗೌಡರು ಸಂಸತ್‍ನಲ್ಲಿ ಇರಬೇಕಿದೆ. ಅವರಿಗೆ ಹೋರಾಟದ ಶಕ್ತಿ ಇನ್ನೂ ಇದೆ. ಎಲ್ಲರಿಗೂ ಅವರು ಬೇಕಾಗಿದ್ದಾರೆ. ಅವರಿಗೆ ನನ್ನ ಸ್ಥಾನವನ್ನು ಬಿಟ್ಟುಕೊಡುತ್ತೇನೆ ಎಂದು ಪ್ರಜ್ವಲ್ ಬಹಿರಂಗ ಪಡಿಸಿದ್ದಾರೆ. ಈ ಬಗ್ಗೆ ದುಡುಕಿನ ತೀರ್ಮಾನ ಬೇಡವೆಂದು ವರಿಷ್ಠರು ಸೂಚಿಸಿದ್ದಾರೆ.

ಆಂಧ್ರದಲ್ಲಿ ನಾಯ್ಡು ಯುಗಾಂತ್ಯ!

ನವದೆಹಲಿ, ಮೇ 24: ಮೋದಿಯವರನ್ನು ಮತ್ತೆ ಪ್ರಧಾನಿ ಕುರ್ಚಿ ಏರದಂತೆ ತಡೆಯಲು ದೇಶವೆಲ್ಲಾ ಸುತ್ತಿ ಆಂಧ್ರಪ್ರದೇಶಕ್ಕೆ ಚಂದ್ರಬಾಬು ನಾಯ್ಡು ಬಂದಾಗ, ಅವರ ಕುರ್ಚಿಯನ್ನು ಮತದಾರ ಜಗನ್ಮೋಹನ್ ರೆಡ್ಡಿಗೆ ನೀಡಿದ್ದರು. ಆಂಧ್ರದಲ್ಲಿ ಚಂದ್ರಬಾಬು ನಾಯ್ಡುಗೆ ಇದು ಅಂತಿಂಥ ಮುಖಭಂಗವಲ್ಲ! ಮೋದಿ ಮತ್ತೆ ಪ್ರಧಾನಿಯಾಗದಂತೆ ತಡೆಯಲು ವಿಪಕ್ಷಗಳು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ನಡೆಸಿದ್ದವು. ಅದರಲ್ಲಿ ರಾಹುಲ್, ಶರದ್ ಪವಾರ್, ಸ್ಟಾಲಿನ್, ಅಖಿಲೇಶ್, ಮಾಯಾವತಿ ಎಲ್ಲರೂ ಇದ್ದರು. ಆದರೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತೆಲುಗುದೇಶಂ ಮುಖ್ಯಸ್ಥ ಚಂದ್ರಬಾಬು ನಾಯ್ಡು ಪಟ್ಟ ಪರಿಶ್ರಮ ಅಂತಿಂದ್ದದ್ದಲ್ಲ. ಅತ್ತ, ವಿಪಕ್ಷಗಳು ಇವರ ಪ್ರಯತ್ನಕ್ಕೆ ಸಾಥ್ ನೀಡಲಿಲ್ಲ, ಇತ್ತ ತಮ್ಮ ತಮ್ಮ ರಾಜ್ಯದ ಚುನಾವಣೆಯಲ್ಲೂ ಬಹುತೇಕ ಅವಮಾನ ಎದುರಿಸುವಂತಾಯಿತು.

ಕುಪ್ಪಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಚಂದ್ರಬಾಬು ನಾಯ್ಡು, ಕೆಲವು ಸುತ್ತು ಮತ ಎಣಿಕೆಯಲ್ಲಿ ತಮ್ಮ ಸಮೀಪದ ಪ್ರತಿಸ್ಪರ್ಧಿ ವೈಎಸ್‍ಆರ್ ಕಾಂಗ್ರೆಸ್ಸಿನ ಕೃಷ್ಣಚಂದ್ರ ಮೌಳಿ ವಿರುದ್ಧ ಹಿನ್ನಡೆಯನ್ನು ಅನುಭವಿಸಿದ್ದರು. ಕೊನೆಗೆ, ಸುಮಾರು ಮೂವತ್ತು ಸಾವಿರ ಮತಗಳ ಅಂತರದಿಂದ ವಿಜಯ ಸಾಧಿಸಿದರು. ಇನ್ನು ಆಂಧ್ರದ ಮಂಗಳಗಿರಿ ವಿಧಾನಸಭಾ ಕ್ಷೇತ್ರದಲ್ಲಿ ನಾಯ್ಡು ಪುತ್ರ ನಾರಾ. ಲೋಕೇಶ್ ಸೋಲು ಅನುಭವಿಸಿದ್ದು, ಟಿಡಿಪಿಗೆ ಆದ ಇನ್ನೊಂದು ಹಿನ್ನಡೆ.

ಬಿಜೆಪಿಗೆ ಬಹುಮತ ಬರದೇ ಇದ್ದಲ್ಲಿ, ಎಲ್ಲಾ ವಿಪಕ್ಷಗಳನ್ನು ಒಗ್ಗೂಡಿಸಿ, ಏನು ಮಹತ್ವಾಕಾಂಕ್ಷೆಯ ಹುದ್ದೆಯನ್ನು ಪಡೆಯಬೇಕೆಂದು ಚಂದ್ರಬಾಬು ನಾಯ್ಡು ಇಟ್ಟುಕೊಂಡಿದ್ದರೋ, ಅದು ಹುಸಿಯಾಗಿದ್ದು ನಾಯ್ಡು ಅವರು ಸುಸ್ತಾಗಿ ಹೋಗಿದ್ದಾರೆ.

16 ರಾಜ್ಯಗಳಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ!

ನವದೆಹಲಿ, ಮೇ 24: ಲೋಕಸಭೆ ಚುನಾವಣೆ ಯಲ್ಲಿ ಮತ್ತೊಮ್ಮೆ ಮುಖಭಂಗ ಅನುಭವಿಸಿರುವ ಯುಪಿಎ ಮೈತ್ರಿಕೂಟ ಶತಕವನ್ನೂ ಬಾರಿಸಲಾಗದೆ ಹೀನಾಯ ಸ್ಥಿತಿ ತಲಪಿದೆ. ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ 2014 ರ ಲೋಕಸಭೆ ಚುನಾವಣೆಗಿಂತಲೂ ಅಧಿಕ ಸ್ಥಾನಗಳಲ್ಲಿ ಗೆಲ್ಲುವ ಮೂಲಕ ದಾಖಲೆ ಬರೆದಿದೆ. ಅಷ್ಟೇ ಅಲ್ಲ, ಕೇವಲ ಬಿಜೆಪಿ ಏಕಾಂಗಿಯಾಗಿ 302 ಸ್ಥಾನಗಳಲ್ಲಿ ಗೆದ್ದು ಅನಿರೀಕ್ಷಿತ ಫಲಿತಾಂಶ ಪಡೆದಿದೆ. ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಕೇವಲ 52 ಸ್ಥಾನಗಳಲ್ಲಿ ಗೆದ್ದ ಕಾಂಗ್ರೆಸ್ ಸುಮಾರು 16 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಶೂನ್ಯ ಸಾಧನೆ ಮಾಡಿದೆ. ಹದಿನಾರು ರಾಜ್ಯಗಳಲ್ಲಿ ಶೂನ್ಯ ಸಾಧನೆ ಮಾಡುವ ಮೂಲಕ ಕಾಂಗ್ರೆಸ್, ಸೊನ್ನೆಯನ್ನು ಕಂಡು ಹಿಡಿದ ಆರ್ಯಭಟನಿಗೆ ಗೌರವ ಸಲ್ಲಿಸಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಹರಿದಾಡುತ್ತಿದೆ. ಮೂರು ರಾಜ್ಯಗಳು ‘ಕೈ’ ಹಿಡಿಯದಿದ್ದರೆ ಕಾಂಗ್ರೆಸ್ ಕಥೆ ಏನಾಗುತ್ತಿತ್ತು? ಅಷ್ಟಕ್ಕೂ ಕಾಂಗ್ರೆಸ್ ಶೂನ್ಯ ಸಾಧÀನೆ ಮಾಡಿದ ಹದಿನಾರು ರಾಜ್ಯಗಳೆಂದರೆ: ಗುಜರಾತ್, ದೆಹಲಿ, ಆಂಧ್ರಪ್ರದೇಶ ರಾಜಸ್ಥಾನ, ಹಿಮಾಚಲ ಪ್ರದೇಶ, ಹರ್ಯಾಣ, ಉತ್ತರಾಖಂಡ, ಅರುಣಾಚಲ ಪ್ರದೇಶ, ತ್ರಿಪುರ, ಒಡಿಶಾ, ಮಣಿಪುರ, ಮಿಜೋರಾಂ, ಅಂಡಮಾನ್, ದಮನ್, ದಿಯು, ದಾದ್ರಾ ಮತ್ತು ನಾಗರಹವೇಲಿ.

ವಿರೋಧ ಪಕ್ಷ ಸ್ಥಾನವೂ ಇಲ್ಲ: ಕಡಿಮೆ ಸ್ಥಾನ ಗಳಿಸಿರುವ ಹಿನ್ನೆಲೆ ಕಾಂಗ್ರೆಸ್ ಪಕ್ಷವು ಸಂಸತ್‍ನಲ್ಲಿ ವಿರೋಧ ಪಕ್ಷ ಸ್ಥಾನವನ್ನೂ ಕಳೆದುಕೊಳ್ಳಲಿದೆ.

ಬಹುನಿರೀಕ್ಷಿತ ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶದಂತೆಯೇ ಎನ್‍ಡಿಎ ಬಹುಮತ ಪಡೆದು ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಐದು ಮತ ಪಡೆದ ಅಭ್ಯರ್ಥಿ!

ಜಲಂಧರ್, ಮೇ 24: ಪಂಜಾಬಿನ ಜಲಂಧರ್‍ನಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನೀತು ಶಟ್ಟರ್ನ್ ವಾಲಾ ಅವರು ಕೇವಲ 5 ಮತಗಳನ್ನು ಪಡೆಯುವ ಮೂಲಕ ಅತೀ ಕಡಿಮೆ ಮತ ಪಡೆದ ದಾಖಲೆ ಬರೆದಿದ್ದಾರೆ!

ಈ ಬಗ್ಗೆ ಅವರನ್ನು ಮಾಧ್ಯಮಗಳು ಪ್ರಶ್ನಿಸುತ್ತಿದ್ದಂತೆಯೇ ಅಳುವದಕ್ಕೆ ಆರಂಭಿಸಿದ ವಾಲಾ, “ನನಗೆ ಅತೀ ಕಡಿಮೆ ಮತ ಬಂದಿದೆ ಎಂಬುದಕ್ಕಿಂತ, ನನ್ನ ಕುಟುಂಬದಲ್ಲಿ 9 ಜನರಿದ್ದರೂ, ನನಗೆ ಕೇವಲ ಐದೇ ಮತ ಬಿದ್ದಿದೆಯಲ್ಲ! ಎಂಬದೇ ನೋವಿನ ಸಂಗತಿ ಎನ್ನಿಸಿದೆ” ಎಂದರು.

ಮೂರು ರಾಜ್ಯಗಳಲ್ಲಿ ಕಾಂಗ್ರೆಸ್

ನವದೆಹಲಿ, ಮೇ 24: ದೇಶದ ಅತಿ ಹಳೆಯ ರಾಜಕೀಯ ಪಕ್ಷ ಕಾಂಗ್ರೆಸ್‍ಗೆ ಮೂರು ರಾಜ್ಯಗಳಲ್ಲಿ ಸೀಟುಗಳು ಬರದಿದ್ದರೆ ಹೀನಾಯ ಸ್ಥಿತಿ ತಲುಪುತ್ತಿತ್ತು.

ಕೇರಳ, ಪಂಜಾಬ್ ಹಾಗೂ ತಮಿಳುನಾಡಿನಲ್ಲಿ ಮತದಾರರು ಕಾಂಗ್ರೆಸ್ ಜೊತೆ ನಿಲ್ಲದಿದ್ದರೆ ಒಟ್ಟು ಕಾಂಗ್ರೆಸ್ ಸೀಟುಗಳ ಸಂಖ್ಯೆ 20ರ ಆಸುಪಾಸಿನಲ್ಲಿರುತ್ತಿತ್ತು.ಈಗ ಒಟ್ಟು 52 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುಂದಿದೆ.

ಅದರಲ್ಲಿ 31 ಸೀಟುಗಳು ತಮಿಳುನಾಡು, ಕೇರಳ ಹಾಗೂ ಪಂಜಾಬ್‍ನಿಂದ ಬಂದಿರುವದು ವಿಶೇಷವಾಗಿದೆ. ಉಳಿದ 33 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಗಳಿಸಿರುವದು ಕೇವಲ 19 ಸೀಟುಗಳು, ಕೇರಳ ಹೊರತುಪಡಿಸಿದರೆ ಬೇರೆ ಯಾವದೇ ರಾಜ್ಯದಲ್ಲಿ ಕಾಂಗ್ರೆಸ್ ಎರಡಂಕಿಯ ಸೀಟುಗಳನ್ನೇ ಪಡೆಯಲಿಲ್ಲ.

ಇನ್ನು ಪಂಜಾಬ್‍ನಲ್ಲಿ ಕ್ಯಾಪ್ಟನ್ ಅಮರೇಂದರ್ ಸಿಂಗ್ ವೈಯಕ್ತಿಕ ಚರಿಷ್ಮಾದಿಂದ ಕಾಂಗ್ರೆಸ್ ಎಂಟು ಸೀಟುಗಳನ್ನು ಉಳಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಯಿತು. ಈ ಮೂರೂ ರಾಜ್ಯಗಳ ಅಂಕಿ ಸಂಖ್ಯೆ ಸೇರಿಸಿದರೂ ಕಾಂಗ್ರೆಸ್‍ನ ಒಟ್ಟು 52 ಸೀಟುಗಳು ಬಿಜೆಪಿಯ ಉತ್ತರ ಪ್ರದೇಶದ ಒಟ್ಟು ಸೀಟುಗಳಿಗೂ ಸಮನಾಗದಿರುವದು ರಾಹುಲ್ ಗಾಂಧಿ ತಂಡದ ರಾಜಕೀಯ ದುರಂತವಾಗಿದೆ. ಈ ಮೂರೂ ರಾಜ್ಯಗಳು ಕೈಹಿಡಿಯದಿದ್ದರೆ ಕಾಂಗ್ರೆಸ್ ಸ್ಥಿತಿಯೂ 2014ರ ಫಲಿತಾಂಶಕ್ಕಿಂತ ಇನ್ನಷ್ಟು ಕೆಟ್ಟದಾಗಿರುತ್ತಿತ್ತು. ಅಂದಹಾಗೆ 16ನೇ ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರಾಗಿದ್ದ 27 ಜನರು ಸೋತಿರುವದು ಗಮನಾರ್ಹ ಅಂಶವಾಗಿದೆ.

“ಅಪ್ಪ-ಮಕ್ಕಳು ಕಾಂಗ್ರೆಸ್ ಅಸ್ತಿತ್ವವನ್ನು ಇಲ್ಲವಾಗಿಸುತ್ತಾರೆ”

ನಿಜವಾಯ್ತು ಬಿಎಸ್‍ವೈ ಭವಿಷ್ಯ, ವೀಡಿಯೋ ವೈರಲ್!

ಬೆಂಗಳೂರು, ಮೇ 24: 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 9 ಕ್ಷೇತ್ರದಲ್ಲಿ ಜಯಗಳಿಸಿದ್ದು 2019ರಲ್ಲಿ ಕೇವಲ 1 ಕ್ಷೇತ್ರ ಗೆಲ್ಲುವಲ್ಲಿ ಮಾತ್ರ ಯಶಸ್ವಿಯಾಗಿದ್ದು, ಈ ಹಿಂದೆಯೇ ಬಿಎಸ್ ಯಡಿಯೂರಪ್ಪ ಅವರು ಅಪ್ಪ-ಮಕ್ಕಳು ಸೇರಿಕೊಂಡು ಕಾಂಗ್ರೆಸ್ ಹೆಸರನ್ನು ಇಲ್ಲದಂತೆ ಮಾಡುತ್ತಾರೆ ಎಂದು ಹೇಳಿದ್ದು ಈ ವೀಡಿಯೋ ಸದ್ಯ ವೈರಲ್ ಆಗಿದೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಗ್ಗೆ ಬಿಎಸ್‍ವೈ ಅವರು, ನಾನು ಈಗ ಏನನ್ನೂ ಹೇಳುವದಿಲ್ಲ. ನೀವು ಮಾಡಿಕೊಂಡ ಈ ಮೈತ್ರಿ ಬಗ್ಗೆ ಮುಂದೊಂದು ದಿನ ಪಶ್ಚಾತ್ತಾಪ ಪಡುತ್ತೀರಿ. ಅಪ್ಪ-ಮಕ್ಕಳು ಸೇರಿ ಕೆಲವೇ ತಿಂಗಳಲ್ಲಿ ಕಾಂಗ್ರೆಸ್ ಹೆಸರನ್ನು ಇಲ್ಲದಂತೆ ಮಾಡಿ ಹಾಕುತ್ತಾರೆ. ಒಂದು ವೇಳೆ ಹಾಗೆ ಆಗದೆ ಇದ್ದರೆ ನನ್ನನ್ನು ಯಡಿಯೂರಪ್ಪ ಎಂದು ಕರೆಯಬೇಡಿ ಎಂದು ಡಿಕೆ ಶಿವಕುಮಾರ್ ಅವರಿಗೆ ಸವಾಲು ಹಾಕಿದ್ದರು.

ಅಂದು ಬಿಎಸ್ ವೈ ಹೇಳಿದ್ದ ಮಾತು ಇಂದು ನಿಜವಾಗಿದೆ. 2014ರಲ್ಲಿ 9 ಕ್ಷೇತ್ರ ಗೆದ್ದಿದ್ದ ಕಾಂಗ್ರೆಸ್ 2019ರಲ್ಲಿ ಕೇವಲ 1 ಕ್ಷೇತ್ರ ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅಲ್ಲಿಗೆ ಯಡಿಯೂರಪ್ಪ ಮಾತು ನಿಜವಾಗಿದೆ ಎಂದು ನೆಟ್ಟಿಗರು ಇಂದು ಹಳೆಯ ವೀಡಿಯೋವನ್ನು ವೈರಲ್ ಮಾಡಿದ್ದಾರೆ.

ಆಂಧ್ರ ಸಿಎಂ ರಾಜೀನಾಮೆ

ಅಮರಾವತಿ, ಮೇ 24: ಲೋಕಸಭಾ ಚುನಾವಣೆ ಜೊತೆ ಜೊತೆಯಲ್ಲೇ ಆಂಧ್ರ ಪ್ರದೇಶ ವಿಧಾನಸಭೆಗೂ ಚುನಾವಣಾ ಫಲಿತಾಂಶವೂ ಪ್ರಕಟಗೊಂಡಿದ್ದು, ಆಡಳಿತಾರೂಢ ಟಿಡಿಪಿ ಕಳಪೆ ಸಾಧನೆಗೈದ ಹಿನ್ನೆಲೆ ಸಿಎಂ ಚಂದ್ರಬಾಬು ನಾಯ್ಡು ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ ಹೀನಾಯ ಸೋಲಿನತ್ತ ಆಂಧ್ರ ಪ್ರದೇಶದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ರಚನೆಯಾಗಲಿದೆ. ತಾ. 30 ರಂದು ಜಗನ್ ಮೋಹನ್ ರೆಡ್ಡಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಮೂಲಗಳ ಪ್ರಕಾರ ರಾಜಧಾನಿ ಅಮರಾವತಿ ನಿರ್ಮಾಣದ ಕಾರ್ಯ ಪ್ರಗತಿಯಲ್ಲಿರುವದರಿಂದ ತಿರುಪತಿಯಲ್ಲಿ ಜಗನ್ ಮೋಹನ್ ರೆಡ್ಡಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗಿದೆ.

9 ಕಾಂಗ್ರೆಸ್‍ನ ಮಾಜಿ ಸಿಎಂಗಳಿಗೆ ಸೋಲಿನ ರುಚಿ

ನವದೆಹಲಿ, ಮೇ 24: ಲೋಕಸಭೆ ಚುನಾವಣೆಯ ಫಲಿತಾಂಶದ ಬಳಿಕ ಮೋದಿ ಅಲೆಯಲ್ಲಿ ವಿವಿಧ ರಾಜ್ಯಗಳ 9 ಮಾಜಿ ಮುಖ್ಯಮಂತ್ರಿಗಳು ಕೊಚ್ಚಿ ಹೋಗಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ, ಭೋಪಾಲ್‍ನಲ್ಲಿ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್, ಈಶಾನ್ಯ ದೆಹಲಿಯಲ್ಲಿ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್, ಹರಿಯಾಣ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ, ಉತ್ತರಾಖಂಡ್ ಮಾಜಿ ಮುಖ್ಯಮಂತ್ರಿ ಹರಿಶ್ ರಾವತ್, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿಗಳಾದ ಅಶೋಕ್ ಚವಾಣ್, ಸುಶೀಲ್ ಕುಮಾರ್ ಶಿಂಧೆ, ಮೇಘಾಲಯ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗಮ್, ಅರುಣಾಚಲ ಮಾಜಿ ಮುಖ್ಯಮಂತ್ರಿ ನಬಮ್ ಟುಕಿ ಅವರುಗಳು ಸೋಲು ಅನುಭವಿಸಿದ್ದಾರೆ.ಮೈಸೂರು ಕಾರ್ಯಕರ್ತರೇ ಹೊಣೆ ಆರೋಪ

ಮಡಿಕೇರಿ, ಮೇ 24: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್‍ಕುಮಾರ್ ಮಾತನಾಡಿ, ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿಯ ಸೋಲಿಗೆ ಕೊಡಗು ಕಾರಣವಾಗಿತ್ತು. ಆದರೆ ಈ ಬಾರಿ ಕೊಡಗು ಕಾರಣವಲ್ಲ, ಈ ಸೋಲಿಗೆ ಮೈಸೂರು ಜಿಲ್ಲೆಯ ಕಾರ್ಯಕರ್ತರೇ ಹೊಣೆ ಎಂದು ದೂರಿದ್ದಾರೆ.

ಕೊಡಗಿನಲ್ಲಿ ಮೈತ್ರಿಯಿಂದಾಗಿ ಯಾವದೇ ತೊಂದರೆಯಾಗಿಲ್ಲ. ಮಡಿಕೇರಿ ವಿಧಾನಸಭಾ ಕ್ಷೇತ್ರದ ಸೋಮವಾರಪೇಟೆ ತಾಲೂಕಿನಲ್ಲಿ ಮಾತ್ರ ಜೆ.ಡಿ.ಎಸ್.ಗೆ ಮತಗಳಿದ್ದು, ವೀರಾಜಪೇಟೆ ಕ್ಷೇತ್ರದಲ್ಲಿ ಆ ಪಕ್ಷಕ್ಕೆ ಹೇಳಿಕೊಳ್ಳುವಷ್ಟು ಮತದಾರರಿಲ್ಲ. ಆದರೆ ಸೋಮವಾರಪೇಟೆ ತಾಲೂಕಿನಲ್ಲಿ ಶೇ. 60-70 ರಷ್ಟು ಮತದಾರರು ಮೈತ್ರಿ ಅಭ್ಯರ್ಥಿಗೆ ಮತ ಚಲಾಯಿಸಿದ್ದು, ಶೇ. 30 ರಷ್ಟು ಮತಗಳು ಬಿ.ಜೆ.ಪಿ.ಗೆ ಹೋಗಿರುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಿದ್ದಾರೆ.

ಒಟ್ಟಾರೆಯಾಗಿ ದೇಶದ ಮತದಾರರೇ ಬದಲಾಗಿದ್ದು, ಭಾವನಾತ್ಮಕವಾದ ವಿಚಾರಗಳನ್ನು ಮುಂದಿಟ್ಟು ಚುನಾವಣೆ ಎದುರಿಸುವ ಪಕ್ಷಗಳನ್ನು ಬೆಂಬಲಿಸುತ್ತಿರುವದು ಮಾತ್ರ ವಿಷಾದನೀಯ ಎಂದು ಹೇಳಿದರು.