ಮಡಿಕೇರಿ, ಮೇ 24: ಮಾದಾಪುರ ಪಟ್ಟಣದಿಂದ ನಂದಿಮೊಟ್ಟೆಗೆ ತೆರಳುವ ರಸ್ತೆಯಲ್ಲಿ ಕಳೆದ ಮಳೆಗಾಲದಲ್ಲಿ ಭೂಕುಸಿತದಿಂದ ಹಾನಿಗೊಂಡಿರುವ ಮಾರ್ಗಬದಿ ಮರಳು ಮೂಟೆಗಳನ್ನು ಅಳವಡಿಸಿ ಅಪೂರ್ಣ ಕೆಲಸ ಕೈಗೊಂಡಿದ್ದು, ಈ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅಲ್ಲಿನ ನಾಗರಿಕರು ಆಗ್ರಹಿಸಿದ್ದಾರೆ.
ಭೂಕುಸಿತದಿಂದ ಹಾನಿಯುಂಟಾಗಿರುವ ಮಾರ್ಗಬದಿ ಸರಿಯಾಗಿ ಕೆಲಸ ನಿರ್ವಹಿಸದ ಪರಿಣಾಮ ಮತ್ತೆ ಈ ಬಾರಿಯ ಮಳೆಗಾಲದಲ್ಲು ಅಪಾಯ ಎದುರಾಗಲಿದೆ ಎಂದು ಪ್ರಮುಖರಾದ ಎಂ.ಎಸ್. ದೇವಯ್ಯ, ಪಿ.ಎಸ್. ರತೀಶ್ ಹಾಗೂ ಇತರರು ಆತಂಕ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಮಳೆಗಾಲಕ್ಕೆ ಮುನ್ನ ಹಿಂದಿನ ಕಾಮಗಾರಿ ವ್ಯರ್ಥವಾಗದಂತೆ ತುರ್ತು ಕ್ರಮ ಕೈಗೊಳ್ಳುವಂತೆ ಅವರುಗಳು ‘ಶಕ್ತಿ’ಗೆ ನೀಡಿರುವ ಹೇಳಿಕೆಯೊಂದಿಗೆ ಒತ್ತಾಯಿಸಿದ್ದಾರೆ.