ಬೆಂಗಳೂರು, ಮೇ 23: ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಕರ್ನಾಟಕ ರಾಜ್ಯ ಸೇರಿದಂತೆ ದೇಶದಲ್ಲಿ ಬಿಜೆಪಿ ಬಹುಮತದೊಂದಿಗೆ ಜಯ ಗಳಿಸಿದೆ. ಮತದಾರರು ನೀಡಿರುವ ತೀರ್ಪಿನ ಬಗ್ಗೆ ರಾಜ್ಯ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್ಲೋ ಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಗೆ ಎದುರಾಗಿರುವ ಹೀನಾಯ ಸೋಲಿನ ಕುರಿತು ಸಿಎಂ ಕುಮಾರಸ್ವಾಮಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಲೋಕಸಭಾ ಚುನಾವಣೆಯ ಫಲಿತಾಂಶ ಅನಿರೀಕ್ಷಿತ. ಈ ಫಲಿತಾಂಶವನ್ನು ಗೌರವಿಸುತ್ತೇನೆ ಹಾಗೂ ಮತ್ತೊಮ್ಮೆ ಜನಾದೇಶ ಪಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ. ಚುನಾವಣೆ ಸೋಲಿನ ಬಗ್ಗೆಯೂ ಪ್ರತಿಕ್ರಿಯಿಸಿರುವ ಅವರು, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗಳ ಸೋಲಿನ ಕುರಿತು ಎರಡೂ ಪಕ್ಷಗಳ ನಾಯಕರು ಚರ್ಚಿಸುತ್ತೇವೆ ಎಂದಿದ್ದಾರೆ.ಸೋಲು ಸ್ವೀಕರಿಸಿದ ಸಿದ್ದರಾಮಯ್ಯ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ಮೈಸೂರಿನಲ್ಲಿ ಕೂಡ ಮತ್ತೊಮ್ಮೆ ಬಿಜೆಪಿ (ಮೊದಲ ಪುಟದಿಂದ) ಅಭ್ಯರ್ಥಿ ಗೆಲವು ಸಾಧಿಸಿದ್ದಾರೆ. ಈ ಸೋಲನ್ನು ವಿನಯಪೂರ್ವಕವಾಗಿ ಸ್ವೀಕರಿಸಿರುವದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯದ ಪರವಾಗಿ ಕೆಲಸ ಮಾಡಲಿ ರಾಜ್ಯದಿಂದ ಆಯ್ಕೆಯಾದ ಎಲ್ಲ ಸಂಸದರೂ ಚುನಾವಣೆ ಮುಗಿದ ಮೇಲೆ ಪಕ್ಷಾತೀತವಾಗಿ ನಮ್ಮ ರಾಜ್ಯದ ಪ್ರತಿನಿಧಿಗಳಾಗಿರುತ್ತಾರೆ. ಲೋಕಸಭೆಯಲ್ಲಿ ರಾಜ್ಯದ ದನಿ ಕೇಳಿಸುವಂತೆ ಮತ್ತು ಹಿತರಕ್ಷಿಸುವಂತೆ ಅವರೆಲ್ಲರೂ ಕೆಲಸ ಮಾಡಲಿ ಎಂದು ಹಾರೈಸುತ್ತೇನೆ. ಜನರ ತೀರ್ಪು ರಾಜ್ಯ ಸರ್ಕಾರಕ್ಕಲ್ಲ ಸೋಲಿನ ಬಗ್ಗೆ ಎಲ್ಲ ಜಿಲ್ಲೆಗಳಿಂದ ಮಾಹಿತಿ ತರಿಸಿಕೊಂಡು ಚರ್ಚೆ ನಡೆಸಬೇಕು. ವರದಿ ಬಂದ ಬಳಿಕ ವಿಶ್ಲೇಷಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಹೇಳಿದ್ದನ್ನು ಸಾಧಿಸಿದ್ದೇವೆ : ಯಡಿಯೂರಪ್ಪ
ಚುನಾವಣೆಗೆ ಮುನ್ನವೇ ಪ್ರಚಾರ ಸಂದರ್ಭದಲ್ಲಿಯೇ ಈ ಬಾರಿ 22ಕ್ಕಿಂತಲೂ ಹೆಚ್ಚಿಗೆ ಸ್ಥಾನ ಗಳಿಸುವದಾಗಿ ಹೇಳಿದ್ದೆವು. ಆದರೆ ಈಗ 25 ಸ್ಥಾನಗಳನ್ನು ಗೆದ್ದಿದ್ದೇವೆ. ಹೇಳಿದ್ದನ್ನು ಸಾಧಿಸಿದ್ದೇವೆ. ಅಪವಿತ್ರ ಮೈತ್ರಿ ಸರಕಾರದ ಧೋರಣೆಯಿಂದ ಬೇಸತ್ತ ಮತದಾರರು ಬಿಜೆಪಿ ಕೈ ಹಿಡಿದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಸರಕಾರ ರಚನೆ ಬಗ್ಗೆ ಹೈಕಮಾಂಡ್ ತೀರ್ಮಾನಕ್ಕೆ ಬಿಡಲಿದ್ದು, ಹೈಕಮಾಂಡ್ ಆದೇಶದಂತೆ ಮುಂದಡಿಯಿಡುವದಾಗಿ ಹೇಳಿದ್ದಾರೆ.
ಅಭಿವೃದ್ಧಿಗೆ ಶ್ರಮಿಸಲು ಸಿದ್ಧ : ದೇವೇಗೌಡ
ಸಮಾಜದ ಅಭಿವೃದ್ಧಿಗಾಗಿ ಎಂದಿಗೂ ಶ್ರಮಿಸಲು ನಾವು ಸಿದ್ಧ ಅದಕ್ಕೆ ಅಧಿಕಾರದ ಅವಶ್ಯಕತೆ ಇಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ. ಸೋಲಿನ ಬಳಿಕ ಟ್ವೀಟ್ ಮಾಡಿರುವ ಅವರು, ನನಗೆ ಬೆಂಬಲ ನೀಡಿದ ಮತದಾರರು, ಜನತಾದಳ, ಕಾಂಗ್ರೆಸ್ ಕಾರ್ಯಕರ್ತರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಕೆಲಸ ಸಮಾಜವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವದು; ಅದಕ್ಕೆ ಅಧಿಕಾರ ಬೇಕಿಲ್ಲ ಎಂದರು. ನರೇಂದ್ರ ಮೋದಿಯ ದೊಡ್ಡ ಗೆಲವಿಗೆ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.
ಮಂಡ್ಯ ಸ್ವಾಭಿಮಾನದ ಗೆಲವು: ಸುಮಲತಾ
ಮಂಡ್ಯದ ಜನತೆ ಪ್ರಜಾಪ್ರಭುತ್ವದ ಕಿರೀಟವನ್ನು ಎತ್ತಿ ಹಿಡಿದಿದ್ದಾರೆ. ಹಣಬಲ, ತೋಳ್ಬಲ ಎಲ್ಲವನ್ನೂ ಮೀರಿ ಆಮಿಷಗಳನ್ನು ಮೀರಿ ಪ್ರಜಾಪ್ರಭುತ್ವವನ್ನು ಗೆಲ್ಲಿಸಿದ್ದಾರೆ ಕೋಟಿ ಕೋಟಿ ಅಭಿನಂದನೆಗಳು ಎಂದು ಮಂಡ್ಯದ ಜನತೆಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಶುಭಕೋರಿದ್ದಾರೆ.
‘ನನಗೆ ಆತ್ಮವಿಶ್ವಾಸ ಇತ್ತು, ನಂಬಿಕೆ ಇತ್ತು, ನನ್ನ ಜೊತೆಗಿದ್ದ ಹಿತೈಷಿಗಳು, ಬೆಂಬಲಿಗರು ಕೂಡಾ ಸರ್ಕಾರ ಎದುರು ಹಾಕಿಕೊಂಡು ಧೈರ್ಯವಾಗಿ ನಿಂತಿದ್ದರು, ಎಂದಿದ್ದಾರೆ.
ಕುಮಾರಸ್ವಾಮಿಗೆ ಅನಂತ್ ತಿರುಗೇಟು
ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ಕುಮಟಾಕ್ಕೆ ಬಂದಾಗ, ಮೇ 23ರ ನಂತರ ಅನಂತಕುಮಾರ ಹೆಗಡೆ ಎಲ್ಲಿರ್ತಾರಪ್ಪಾ ಅಂತ ಕೇಳಿದ್ದರು. ಈಗ ‘ನಿಮ್ಮ ಮಗ ಮತ್ತು ಅಪ್ಪ ಎಲ್ಲಿದ್ದಾರೆ ಎಂದು ಹುಡ್ಕೊಂಡ್ ಬನ್ನಿ’ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿಯ ಗೆದ್ದ ಅಭ್ಯರ್ಥಿ ಅನಂತಕುಮಾರ ಹೆಗಡೆ ವ್ಯಂಗ್ಯವಾಡಿದ್ದಾರೆ.
ಕುಮಟಾ ಮತ ಎಣಿಕೆ ಕೇಂದ್ರ ಸಮೀಪ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿರುವ ಅವರು, ನಾವು ಜನರ ಮಧ್ಯೆಯೇ ಇದ್ದೇವೆ. ನಿಮ್ಮ ಮಗ ನಿಖಿಲ್ ಹಾಗೂ ಮಾಜಿ ಪ್ರಧಾನಿಯವರು ಎಲ್ಲಿದ್ದಾರೆ ಎಂದು ಹುಡುಕಿಕೊಂಡು ಬರಬೇಕು ಎಂದು ಹೇಳಿದ್ದಾರೆ.
ಸುನಿಲ್ ಹರ್ಷ
ಪ್ರಧಾನಿ ಮೋದಿ ಅವರ ದೇಶ ಭಕ್ತಿ, ದೈವಭಕ್ತಿ ಮತ್ತು ಅವಿರತ ಕೆಲಸಕ್ಕೆ ಸಿಕ್ಕಿದ ಜಯ. ಬಿಜೆಪಿಗೆ ಕೊಡಗಿನಲ್ಲಿಯೂ ಬಹುಮತ ಸಿಕ್ಕಿದ್ದು, ಬಿಜೆಪಿಯ ಮೇಲೆ ವಿಶ್ವಾಸವಿರಿಸಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಹರ್ಷ ವ್ಯಕ್ತಪಡಿಸಿದ್ದಾರೆ.
- ಬಿ.ಜಿ ರವಿಕುಮಾರ್