ನವದೆಹಲಿ, ಮೇ 23: ಕಳೆದ ಐದು ವರ್ಷಗಳ ಕಾಲ ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದ ಪ್ರಧಾನಿ ನರೇಂದ್ರ ಮೋದಿ ದ್ವಿತೀಯ ಬಾರಿಗೆ ದೇಶವನ್ನು ನಡೆಸಲು ಭಾರತೀಯರು ಪೂರ್ಣಾವಕಾಶ ಕಲ್ಪಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಮೋದಿ ಅಲೆ ಕಂಡು ಬಂದಿದ್ದು, ಪ್ರಸಕ್ತ ಚುನಾವಣೆಯಲ್ಲಿ ಅದು ಸುನಾಮಿಯಾಗಿ ಪರಿವರ್ತನೆಗೊಂಡು 2014ರ ಫಲಿತಾಂಶಕ್ಕಿಂತ ಅಧಿಕವಾದ ಸ್ಥಾನಗಳೊಂದಿಗೆ ಕೇವಲ ಬಿಜೆಪಿ ಪಕ್ಷವೊಂದೆ ಕೇಂದ್ರದಲ್ಲಿ ಸರ್ಕಾರ ರಚಿಸುವ ಬಹುಮತ ದೊರಕಿದೆ. ಎನ್‍ಡಿಎ ಮಿತ್ರ ಪಕ್ಷಗಳೊಂದಿಗೆ ಸೇರಿದರೆ 543 ಕ್ಷೇತ್ರಗಳ ಪೈಕಿ ಬಿಜೆಪಿ ನಿಚ್ಚಳ ಬಹುಮತದೊಂದಿಗೆ ಅಡ್ಡಿ ಆತಂಕಗಳಿಲ್ಲದೆ ಮುಂದಿನ ಐದು ವರ್ಷಗಳ ಕಾಲ ದೇಶದ ಆಡಳಿತ ಯಂತ್ರವನ್ನು ಸುಸೂತ್ರವಾಗಿ ನಡೆಸುವ ಸದವಕಾಶ ಲಭ್ಯವಾಗಿದೆ.ಸರ್ಕಾರ ರಚಿಸಲು ಮ್ಯಾಜಿಕ್ ನಂಬರ್ 272 ಮಾತ್ರ ಅವಶ್ಯಕತೆಯಿದ್ದು, ಇದೀಗ ಬಿಜೆಪಿಯೊಂದೆ 303 ಸ್ಥಾನಗಳನ್ನು ಗಳಿಸಿದ್ದು, ಎನ್‍ಡಿಎ ಮಿತ್ರಪಕ್ಷಗಳು ಸೇರಿದರೆ ಒಟ್ಟು 353 ಸ್ಥಾನಗಳು ಲಭ್ಯವಾಗಿದೆ. ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವು ಕೆಲವೊಂದು ರಾಜ್ಯ ಹೊರತುಪಡಿಸಿ ಬಹುತೇಕ ಕಡೆ ತೀವ್ರ ಹಿನ್ನೆಡೆ ಅನುಭವಿಸಿದೆ. ಕಾಂಗ್ರೆಸ್ ಪಕ್ಷವೊಂದೆ 52 ಸ್ಥಾನಗಳನ್ನು ಪಡೆದಿದ್ದು, ಮಿತ್ರಪಕ್ಷಗಳ ಯುಪಿಎ ಕೂಟವೂ ಒಟ್ಟು 92 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಬಿಎಸ್‍ಪಿ, ಎಸ್‍ಪಿ ಮೊದಲಾಗಿ ಘಟ್‍ಬಂಧನ್ ಪಕ್ಷಗಳು ಸೇರಿದಂತೆ ಇತರರ ಸಂಖ್ಯೆ ಒಟ್ಟು 97 ಆಗಿದ್ದು, ವಿವರ ಹೀಗಿದೆ: ಬಿಜೆಡಿ -13, ಟಿಆರ್‍ಎಸ್ - 9, ಆಪ್ -1, ಬಿಎಸ್‍ಪಿ -10, ಎಸ್‍ಪಿ- 6, ವೈಎಸ್‍ಆರ್‍ಸಿಸಿ -24 ಹಾಗೂ ಇನ್ನಿತರರು ನಿರೀಕ್ಷಿತ ಸ್ಥಾನಗಳನ್ನು ಗಳಿಸದೆ ಈ ಮೈತ್ರಿ ಪಕ್ಷಗಳು ತೀವ್ರ ವಿಫಲಗೊಂಡಿವೆ. ಚುನಾವಣೆ ನಡೆಯುತ್ತಿದ್ದ ಸಂದರ್ಭ ವಿರೋಧ ಪಕ್ಷಗಳನ್ನು ಒಟ್ಟುಗೂಡಿಸಿ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಪ್ರಯತ್ನಿಸಿದ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು ಅವರು, ತಮ್ಮ ರಾಜ್ಯದಲ್ಲಿಯೇ ತಮ್ಮ ಪಕ್ಷದ ಬೆರಳೆಣಿಕೆ ಅಭ್ಯರ್ಥಿಗಳು ಆಯ್ಕೆಗೊಳ್ಳುವದರೊಂದಿಗೆ ಹೀನಾಯ ಪರಾಭವ ಕಂಡಿದ್ದಾರೆ. ಇದರಿಂದಾಗಿ ಅವರ ಪ್ರಯತ್ನ ಚಿಗುರಿನಲ್ಲಿಯೇ ಹೊಸಕಿ ಹಾಕಲ್ಪಟ್ಟಿದೆ. ಇತರ ಪಕ್ಷಗಳ ಪ್ರವೇಶವನ್ನು ತಡೆಗಟ್ಟುವ ಸತತ ಪ್ರಯತ್ನ ನಡೆಸಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಭಾರೀ ತಿರುಗೇಟು ಉಂಟಾಗಿದೆ. ತೃಣಮೂಲ ಕಾಂಗ್ರೆಸ್ 22 ಸ್ಥಾನಗಳನ್ನು ಪಡೆದಿದ್ದರೆ, ಪ್ರಥಮ ಬಾರಿಗೆ ಬಿಜೆಪಿಯು ಪಶ್ಚಿಮಬಂಗಾಳದಲ್ಲಿ 19 ಸ್ಥಾನಗಳನ್ನು ಗಳಿಸಿ ಸೆಡ್ಡು ಹೊಡೆದಿದೆ.
ಕಾಂಗ್ರೆಸ್ ಪಕ್ಷವನ್ನು ರಕ್ಷಿಸಿದ ಪ್ರಮುಖ ರಾಜ್ಯವೆಂದರೆ ಕೇರಳ. ಅಮೇಥಿಯಲ್ಲಿ ಕಾಂಗ್ರೆಸ್‍ನ ಸಾಂಪ್ರದಾಯಿಕ ಒಲವಿನಿಂದ ಹೊರಬಂದ ಜನತೆ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಪರಾಭವಗೊಳಿಸಿ ಬಿಜೆಪಿ ಅಭ್ಯರ್ಥಿ ಈ ಕ್ಷೇತ್ರದಲ್ಲಿ ದ್ವಿತೀಯ ಬಾರಿಗೆ ಸ್ಪರ್ಧಿಸಿದ್ದ ಕೇಂದ್ರ ಸಚಿವೆ ಸ್ಮøತಿ ಇರಾನಿಯವರನ್ನು ಅಲ್ಲಿನ ಮತದಾರರು ಆಯ್ಕೆ ಮಾಡಿದ್ದಾರೆ. ಆದರೆ ರಾಹುಲ್ ಗಾಂಧಿಯವರನ್ನು ಕೇರಳದ ವಯನಾಡಿನ ಜನತೆ ಕೈಹಿಡಿದಿದ್ದು, ಭಾರೀ ಅಂತರದೊಂದಿಗೆ ಗೆಲ್ಲಿಸಿದ್ದಾರೆ. ಜೊತೆಗೆ ಕೇರಳ ರಾಜ್ಯದ ಜನತೆ ಅಲ್ಲಿನ ಆಡಳಿತಾರೂಢ ಎಲ್‍ಡಿಎಫ್ ಅಭ್ಯರ್ಥಿಗಳನ್ನು ಕೇಂದ್ರಕ್ಕೆ ಕಳುಹಿಸಲು ನಿರಾಕರಿಸಿ ಕೈ ಕೊಟ್ಟಿದ್ದಾರೆ. ಆದರೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿ ಕೂಟವನ್ನು 19 ಸ್ಥಾನಗಳ ಮೂಲಕ ಆರಿಸಿ ಕಳುಹಿಸಿದ್ದಾರೆ.
ಆಶ್ಚರ್ಯವೆಂದರೆ ಸದಾ ಮೋದಿಯವರನ್ನು ಒಂದಲ್ಲ ಒಂದು ರೀತಿಯಲ್ಲಿ ಟೀಕೆ ಮಾಡುತ್ತಾ ಬಂದಿರುವ ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ಮೂಗಿನಡಿಯಲ್ಲಿಯೇ 7ಕ್ಕೆ 7 ಸ್ಥಾನಗಳನ್ನು ಬಿಜೆಪಿ ಗಳಿಸುವದರ ಮೂಲಕ ಕೇಜ್ರಿವಾಲ್ ಅವರಿಗೆ ತಿರುಗೇಟು ನೀಡಿದೆ. ತಮಿಳುನಾಡುವಿನಲ್ಲಿ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡು ಹೆಚ್ಚಿನ ಸ್ಥಾನ ಗಳಿಸುವ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ತೊಡಕುಂಟಾಗಿದೆ. ಅಲ್ಲಿನ ವಿರೋಧ ಪಕ್ಷವಾಗಿರುವ ಡಿಎಂಕೆ 36 ಸ್ಥಾನಗಳನ್ನು ಗಳಿಸಿ ಎಐಎಡಿಎಂಕೆ ಕೇವಲ 2 ಸ್ಥಾನಗಳಿಗೆ ತೃಪ್ತಿಪಡುವಂತಾಗಿವೆ.
ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ 28 ಸ್ಥಾನಗಳ ಪೈಕಿ 25 ಸ್ಥಾನ ಗಳಿಕೆ ಮೂಲಕ ವಿಜೃಂಭಿಸಿರುವ ರಾಜ್ಯದ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿಗೆ ದಕ್ಷಿಣದ ಇತರ ರಾಜ್ಯಗಳಲ್ಲಿ ನಿರಾಶೆ ಉಂಟಾಗಿದೆ. ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ರಾಜ್ಯಗಳಲ್ಲಿ ಬಿಜೆಪಿಗೆ ಯಾವದೇ ಲಾಭವಾಗಿಲ್ಲ. ಮಹಾರಾಷ್ಟ್ರದಲ್ಲಿ ಬಿಜೆಪಿ - ಶಿವಸೇನೆ ಮಿತ್ರಕೂಟ ಭಾರೀ ಯಶಸ್ಸುಗಳಿಸಿದೆ. ಒಟ್ಟು 41 ಸ್ಥಾನಗಳನ್ನು ಪಡೆದಿವೆ. ನರೇಂದ್ರ ಮೋದಿ ತವರು ರಾಜ್ಯವಾದ ಗುಜರಾತ್‍ನಲ್ಲಿ 26 ಕ್ಷೇತ್ರಗಳ ಪೈಕಿ ಎಲ್ಲಾ ಕ್ಷೇತ್ರಗಳನ್ನು ಬಿಜೆಪಿ ದೋಚಿಕೊಂಡಿದ್ದು, ವಿರೋಧ ಪಕ್ಷಗಳಿಗೆ ಪ್ರವೇಶವೇ ಇಲ್ಲದಂತೆ ಭದ್ರಕೋಟೆ ನಿರ್ಮಾಣಗೊಂಡಿದೆ.
ಇತ್ತೀಚಿಗಿನ ವಿಧಾನಸಭಾ ಚುನಾವಣೆಗಳಲ್ಲಿ ಆಡಳಿತವನ್ನು ಕಳೆದುಕೊಂಡು ಕಾಂಗ್ರೆಸ್ ತೆಕ್ಕೆಗೆ ಅಧಿಕಾರ ಹಸ್ತಾಂತರಗೊಂಡಿದ್ದ ರಾಜ್ಯಗಳಾದ ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಬಿಜೆಪಿ ಅಧಿಕ ಸ್ಥಾನಗಳನ್ನು ಗಳಿಸಿ ಕೆಲವೇ ಅವಧಿಯಲ್ಲಿ ಮತ್ತೆ ಚೇತರಿಸಿಕೊಂಡಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ಈಶಾನ್ಯ ಭಾರತದ ಅನೇಕ ರಾಜ್ಯಗಳಲ್ಲಿ ಬಿಜೆಪಿ ಹಾಗೂ ಎನ್‍ಡಿಎ ಮೈತ್ರಿಕೂಟ ಅಧಿಕ ಸ್ಥಾನ ಪಡೆದು ಭಾರೀ ಜಯಭೇರಿ ಬಾರಿಸಿದೆ. ಅಲ್ಲದೆ ಬಿಹಾರದಲ್ಲಿ ನಿತೀಶ್‍ಕುಮಾರ್ ನೇತೃತ್ವದ ಜೆಡಿಯು ಮಿತ್ರತ್ವದೊಂದಿಗೆ ಬಿಜೆಪಿ ಒಟ್ಟು 39 ಸ್ಥಾನಗಳನ್ನು ಗಳಿಸುವ ಮೂಲಕ ಭಾರೀ ಯಶಸ್ಸು ಸಾಧಿಸಿದೆ. ಅಲ್ಲದೆ ದೇಶದ ಅತ್ಯಧಿಕ ಲೋಕಸಭಾ ಕ್ಷೇತ್ರಗಳಾದ 80 ನ್ನು ಹೊಂದಿರುವ ವಿಶಾಲ ರಾಜ್ಯ ಉತ್ತರ ಪ್ರದೇಶದಲ್ಲಿ ಮಾಯಾವತಿ ನೇತೃತ್ವದ ಬಿಎಸ್‍ಪಿ ಹಾಗೂ ಅಖಿಲೇಶ್ ಯಾದವ್ ನೇತೃತ್ವದ ಎಸ್‍ಪಿ ಪಕ್ಷಗ ಘಟ್‍ಬಂಧನ್ ಪ್ರಭಾವ ಎದುರಿಸಿ ಬಿಜೆಪಿ ಅತ್ಯಧಿಕವಾಗಿ 61 ಸ್ಥಾನಗಳನ್ನು ಗಳಿಸಿ ಮತ್ತೆ ತನ್ನ ನೆಲೆಯನ್ನು ಭದ್ರಪಡಿಸಿಕೊಂಡಿದೆ.
ವಿದೇಶಿ ಪ್ರಮುಖರ ಶುಭ ಹಾರೈಕೆ
ನರೇಂದ್ರ ಮೋದಿ ಅವರ ಪ್ರಚಂಡ ಚುನಾವಣಾ ವಿಜಯಕ್ಕಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಅಭಿನಂದಿಸಿದ್ದಾರೆ. ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಸಮೃದ್ಧಿಗಾಗಿ ಜೊತೆಗೂಡಿ ಶ್ರಮಿಸುವ ಹಂಬಲವನ್ನು ಅವರು ತಮ್ಮ ಸಂದೇಶದಲ್ಲಿ ವ್ಯಕ್ತಪಡಿಸಿದ್ದಾರೆ.
ಚೀನಾದ ಅಧ್ಯಕ್ಷ ಕ್ಸಿಜಿನ್‍ಪಿಂಗ್ ಅವರು ಸಹ ಅಭಿನಂದನೆ ಸಲ್ಲಿಸಿದ್ದಾರೆ. ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯಗಳನ್ನು ಹೊಸ ಎತ್ತರಕ್ಕೆ ಒಯ್ಯಲು ಜೊತೆಗೂಡಿ ಶ್ರಮಿಸುವದಾಗಿ ಚೀನಾ ಅಧ್ಯಕ್ಷ ಅಭಿಪ್ರಾಯಪಟ್ಟಿದ್ದಾರೆ.
ಇಸ್ರೇಲ್‍ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ಸಂದೇಶದಲ್ಲಿ ‘ಈ ಪ್ರಚಂಡ ವಿಜಯದಿಂದ ಉಭಯತರ ನಡುವಿನ ಸ್ನೇಹ ಸೌಹಾರ್ದದ ಸಂಬಂಧ ಇನ್ನಷ್ಟು ಗಟ್ಟಿಯಾಗುವದೆಂಬ’ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ನನ್ನ ಸ್ನೇಹಿತರಿಗೆ ಹೃದಯದಾಳದ ಅಭಿನಂದನೆ ಎಂದು ಟ್ವೀಟ್‍ನಲ್ಲಿ ಹಾರೈಸಿದ್ದಾರೆ. ಬಾಂಗ್ಲಾ ದೇಶದ ಪ್ರಧಾನಿ ಶೇಕ್ ಹಸೀನಾ ಅವರು ಕೂಡ ಪ್ರಧಾನಿ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ರಾಹುಲ್ ಅಭಿನಂದನೆ
ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಈ ಪ್ರಚಂಡ ವಿಜಯಕ್ಕಾಗಿ ಪ್ರಧಾನಿ ಮೋದಿಯವರನ್ನು ಅಭಿನಂದಿಸಿ ದ್ದಾರೆ. ಅಲ್ಲದೇ ಅಮೇಥಿಯಲ್ಲಿ ತನ್ನನ್ನು ಪರಾಭವಗೊಳಿಸಿದ ಸ್ಮøತಿ ಇರಾನಿಯವರಿಗೂ ಅಭಿನಂದಿಸಿದ್ದು, ಕ್ಷೇತ್ರದ ಬಗ್ಗೆ ಗಮನ ಹರಿಸಿ ಎಂದು ಸಲಹೆಯಿತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಸಂದೇಶ ರವಾನಿಸಿರುವ ರಾಹುಲ್ ಗಾಂಧಿಯವರು ‘ಆತ್ಮವಿಶ್ವಾಸ ಕಳೆದುಕೊಳ್ಳದಿರಿ ಇನ್ನೂ ಬಲವಾಗಿ ಹೋರಾಟ ಮಾಡೋಣ; ಹೆಚ್ಚಿನ ಶ್ರಮವಹಿಸೋಣ ನಮ್ಮ ತತ್ವಗಳನ್ನು ಜಾರಿಗೊಳಿಸಲು ಯಶಸ್ಸು ಸಾಧಿಸೋಣ’ ಎಂದಿದ್ದಾರೆ.
ಪ್ರಿಯಾಂಕ ಗಾಂಧಿ ವಾದ್ರಾ ಅವರೂ ಕೂಡ ಜತನೆಯ ತೀರ್ಪಿಗೆ ಗೌರವಿಸುವದಾಗಿ ತಿಳಿಸಿದ್ದು, ಪ್ರಧಾನಿ ಮೋದಿ ಹಾಗೂ ಬಿಜೆಪಿ ಪಕ್ಷಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
(ಮೊದಲ ಪುಟದಿಂದ)
ಪ್ರಧಾನಿ ಮೋದಿ ಅನಿಸಿಕೆ
ಜನತೆಯ ಈ ತೀರ್ಪಿನಿಂದ ಚೌಕಿದಾರ್ ಉತ್ಸಾಹವನ್ನು ಇನ್ನೊಂದು ಮಟ್ಟಕ್ಕೆ ಒಯ್ಯಲು ಸಾಧ್ಯವಾಗಿದೆ. ಚೌಕಿದಾರ್ ಹೆಸರು ನನ್ನ ಟ್ವಿಟರ್‍ನಿಂದ ಅಳಿಸಲ್ಪಡುತ್ತದೆ. ಆದರೆ ನನ್ನ ಅವಿಭಾಜ್ಯ ಅಂಗವಾಗಿ ಮುಂದುವರೆಯುತ್ತದೆ ನನ್ನ ಆತ್ಮೀಯ ದೇಶವಾಸಿಗಳಾದ ನೀವೂ ಕೂಡ ಚೌಕಿದಾರರೆ ಆಗುತ್ತೀರಿ. ಆ ಮೂಲಕ ದೇಶಕ್ಕೆ ಉತ್ತಮ ಸೇವೆ ಸಲ್ಲಿಸೋಣ. ಚೌಕಿದಾರರಾಗುವ ಮೂಲಕ ದೇಶವನ್ನು ರಕ್ಷಿಸೋಣ. ಜಾತೀಯತೆ, ಮತೀಯತೆ, ಭ್ರಷ್ಟಾಚಾರವನ್ನು ಅಳಿಸೋಣ ಎಂದು ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ಸಂಪುಟ ಸಭೆ
ತಾ. 24 ರಂದು (ಇಂದು) ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರ ಸಚಿವ ಸಂಪುಟ ಸಭೆ ನಡೆಸಲಿದ್ದಾರೆ. 16ನೆಯ ಲೋಕಸಭೆ ವಿಸರ್ಜನೆಗೆ ಸಂಪುಟವು ಶಿಫಾರಸು ಮಾಡಲಿದೆ. ಲೋಕಸಭೆಯ ಅವಧಿಯು ಜೂನ್ 3ಕ್ಕೆ ಕೊನೆಗೊಳ್ಳುತ್ತದೆ. 16ನೇ ಲೋಕಸಭೆಯನ್ನು ವಿಸರ್ಜಿಸುವ ಶಿಫಾರಸಿನ ಠರಾವನ್ನು ಸಂಪುಟವು ಕೈಗೊಂಡು ಅದನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸಲ್ಲಿಸಲಿದೆ. ಜೂನ್ 3ನೇ ತಾರೀಕಿನಂದು ನೂತನವಾಗಿ 17ನೇ ಲೋಕಸಭೆಯನ್ನು ರೂಪಿಸಲಾಗು ತ್ತದೆ. ಲೋಕಸಭೆಗೆ ನೂತನವಾಗಿ ಚುನಾಯಿತರಾಗಿರುವವರ ಪಟ್ಟಿ ಯನ್ನು ಚುನಾವಣಾ ಆಯುಕ್ತರುಗಳು ರಾಷ್ಟ್ರಪತಿಗೆ ಸಲ್ಲಿಸಿದ ಬಳಿಕ 17ನೇ ಲೋಕಸಭೆ ರೂಪುಗೊಳ್ಳುತ್ತದೆ.
1 ಕ್ಷೇತ್ರದಲ್ಲಿ ಸ್ಥಗಿತ
ಲೋಕಸಭಾ ಒಟ್ಟು 543 ಕ್ಷೇತ್ರಗಳ ಪೈಕಿ 542 ಕ್ಷೇತ್ರಗಳಿಗೆ ಮಾತ್ರ ಚುನಾವಣೆ ನಡೆದಿದೆ. ತಮಿಳುನಾಡುವಿನ ವೆಲ್ಲೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಸಂದರ್ಭ ಡಿಎಂಕೆ ನಾಯಕರೊಬ್ಬರ ಮನೆಗೆ ವರಮಾನ ತೆರಿಗೆ ಅಧಿಕಾರಿಗಳು ಧಾಳಿ ನಡೆಸಿದಾಗ ರೂ. 11.48 ಕೋಟಿ ಅನಧಿಕೃತ ಹಣ ವಶಪಡಿಸಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಆ ಕ್ಷೇತ್ರದ ಚುನಾವಣೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದ್ದು, ಇನ್ನಷ್ಟೆ ಚುನಾವಣೆ ನಡೆಯಬೇಕಿದೆ.