ಮಡಿಕೇರಿ, ಮೇ 23: ಕರ್ನಾಟಕ ರಾಜ್ಯದಲ್ಲಿ 17ನೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯಗಳಿಸಿದೆ. ರಾಜ್ಯದ ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ ಭಾರತೀಯ ಜನತಾ ಪಕ್ಷ ನಿರೀಕ್ಷೆಗೂ ಮೀರಿದ ಸಾಧನೆಯೊಂದಿಗೆ ರಾಜ್ಯದ ದೋಸ್ತಿ ಸರಕಾರದ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಅನ್ನು ಧೂಳೀಪಟ ಮಾಡಿದೆ.28 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಬಿಜೆಪಿಯ ಹುರಿಯಾಳುಗಳು ಅತ್ಯಮೋಘ ಜಯ ಸಾಧಿಸಿದ್ದರೆ, ಕಾಂಗ್ರೆಸ್ ಪಕ್ಷಕ್ಕೆ ಕೇವಲ 1 ಹಾಗೂ ಜೆಡಿಎಸ್‍ಗೆ ತಮ್ಮ ಮರ್ಯಾದೆ ಉಳಿಸಿಕೊಳ್ಳಲು ಕೇವಲ ಒಂದೇ ಒಂದು ಕ್ಷೇತ್ರ ಮಾತ್ರ ಲಭ್ಯವಾಗಿದೆ.ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಬಿಜೆಪಿ ಬೆಂಬಲ ನೀಡಿದ್ದರಿಂದ, ಅವರ ಗೆಲವಿನ ಬಳಿಕ ಒಟ್ಟು ಬಿಜೆಪಿ 28 ಕ್ಷೇತ್ರಗಳ ಪೈಕಿ 26 ಸ್ಥಾನಗಳನ್ನು ಭದ್ರಪಡಿಸಿ ಪಕ್ಷದ ನಾಯಕರೇ ನಿರೀಕ್ಷಿಸದಿದ್ದಷ್ಟು ಪ್ರಮಾಣದಲ್ಲಿ ತನ್ನ ಬಲವನ್ನು ಪ್ರದರ್ಶಿಸಿದೆ.ಜೆಡಿಎಸ್ ಮತ್ತು ಕಾಂಗ್ರೆಸ್‍ನ ಮೈತ್ರಿಯಿಂದ ಹಾಸನದಲ್ಲಿ ಸ್ಪರ್ಧಿಸಿದ್ದ ಮಾಜೀ ಪ್ರಧಾನಿ ಹೆಚ್.ಡಿ. ದೇವೇಗೌಡರ ಪುತ್ರ ರಾಜ್ಯ ಸಚಿವ ಹೆಚ್.ಡಿ. ರೇವಣ್ಣ ಅವರ ಮಗ ಹೆಚ್.ಆರ್. ಪ್ರಜ್ವಲ್ ಮಾತ್ರ ಗೆಲವು ಪಡೆದಿದ್ದು, ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಕಾಂಗ್ರೆಸ್‍ನ ಡಿ.ಕೆ. ಸುರೇಶ್ ಜಯಗಳಿಸಿ ಕಾಂಗ್ರೆಸ್‍ನ ಮರ್ಯಾದೆ ಉಳಿಸಿದ್ದಾರೆ.

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೆಚ್ಚಿನ ಬಲವಿರುವದು ಕರ್ನಾಟಕ ರಾಜ್ಯದಲ್ಲಿ ಮಾತ್ರ. ಇದು ಈ ಬಾರಿಯ ಚುನಾವಣೆಯಲ್ಲಿಯೂ ಮತ್ತೊಮ್ಮೆ ಪ್ರತಿಬಿಂಬಿತವಾಗಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಭರ್ಜರಿ ಪ್ರದರ್ಶನ ತೋರಿದ್ದು, ಕರ್ನಾಟಕ ಕಮಲಮಯವಾಗಿದೆ. ದೇಶದ ಮಾಜೀ ಪ್ರಧಾನಿ ಜೆಡಿಎಸ್‍ನ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರತ್ತಲೂ ಈ ಬಾರಿ ಜನರು ಮಣೆ ಹಾಕಿಲ್ಲ. ರಾಜ್ಯದ ಮತ್ತೋರ್ವ ಮಾಜೀ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಕಳೆದ ಅವಧಿಯಲ್ಲಿ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿದ್ದ ಸೋಲಿಲ್ಲದ ಸರದಾರರಾಗಿದ್ದ, 11 ಬಾರಿ ಸಂಸದರಾಗಿದ್ದ ಕಾಂಗ್ರೆಸ್‍ನ ಮಲ್ಲಿಕಾರ್ಜುನ ಖರ್ಗೆ, ಬಳ್ಳಾರಿಯಲ್ಲಿ ವಿ.ಎಸ್. ಉಗ್ರಪ್ಪ

(ಮೊದಲ ಪುಟದಿಂದ) ಕೂಡ ಈ ಬಾರಿ ಸೋಲು ಕಂಡಿರುವದು ವಿಶೇಷ. ಇವರೊಂದಿಗೆ 7 ಬಾರಿಯ ಸಂಸದ, ರೈಲ್ವೆ ಖಾತೆಯ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ, ರಾಜ್ಯಸಭಾ ಸದಸ್ಯರಾಗಿದ್ದ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿಯ ಕಾರ್ಯಾಧ್ಯಕ್ಷ ಭೀಮಣ್ಣ ಖಂಡ್ರೆ ಅವರಂತಹ ಘಟಾನುಘಟಿ ನಾಯಕರು ತೆರೆಮರೆಗೆ ಸರಿದಿದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಅನಿರೀಕ್ಷಿತವಾಗಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಿರಿಯ ವಯಸ್ಸಿನ 28 ವರ್ಷದ ತೇಜಸ್ವಿ ಸೂರ್ಯ ಗೆಲವು ಸಾಧಿಸಿದ್ದರೆ, ಪ್ರಮುಖರಾದ ಪ್ರತಾಪ್ ಸಿಂಹ, ರಮೇಶ್ ಜಿಗಜಿಗಣಿ, ಶೋಭಾಕರಂದ್ಲಾಜೆ, ಅನಂತ್‍ಕುಮಾರ್ ಹೆಗಡೆ, ಶ್ರೀನಿವಾಸ್ ಪ್ರಸಾದ್, ನಳೀನ್‍ಕುಮಾರ್ ಕಟೀಲ್, ಬಿ.ಎನ್. ಬಚ್ಚೇಗೌಡ, ಪ್ರಹ್ಲಾದ್ ಜೋಷಿ, ಡಿ.ವಿ. ಸದಾನಂದಗೌಡ, ಕಾಂಗ್ರೆಸ್‍ನಿಂದ ಏಕೈಕ ಡಿ.ಕೆ. ಸುರೇಶ್ ಜಯಶಾಲಿಗಳಾಗಿದ್ದಾರೆ. ಮಾಜೀ ಸಚಿವ ವಿಜಯಶಂಕರ್, ಬಿ.ಕೆ. ಹರಿಪ್ರಸಾದ್, ಎ. ಮಂಜು, ಮಧು ಬಂಗಾರಪ್ಪ, ಧ್ರುವನಾರಾಯಣ, ಹಾಲಿ ಸಚಿವ ಕೃಷ್ಣ ಭೈರೇಗೌಡ ಇವರುಗಳು ಸೋಲಿನ ಮನೆ ಸೇರಿದ್ದಾರೆ.