ಕೂಡಿಗೆ, ಮೇ 22: ಶಿರಂಗಾಲ, ತೊರೆನೂರು ವ್ಯಾಪ್ತಿಯಲ್ಲಿ ಭಾರೀ ಗಾಳಿ - ಮಳೆಯೊಂದಿಗೆ ಸಿಡಿಲು ಬಡಿದ ಪರಿಣಾಮ ಹತ್ತು ಆಡುಗಳು ಬಲಿಯಾದ ಘಟನೆ ನಡೆದಿದೆ.

ಶಿರಂಗಾಲ ಗ್ರಾ.ಪಂ ವ್ಯಾಪ್ತಿಯ ಚಿಕ್ಕನಾಯಕನ ಹೊಸಳ್ಳಿ ಗ್ರಾಮದ ಟಿ.ಸಿ.ರಂಗಸ್ವಾಮಿ ಎಂಬವರಿಗೆ ಸೇರಿದ ಹತ್ತು ಆಡುಗಳು ಸಿಡಿಲಿಗೆ ಬಲಿಯಾಗಿವೆ. ಚಿಕ್ಕನಾಯಕನಹಳ್ಳಿಯ ಟಿ.ಎ.ರಾಮಚಂದ್ರರವರ ಜಮೀನಿನ ಹತ್ತಿರವಿರುವ ಸಣ್ಣ ಮಂಟಿಯ ಹತ್ತಿರ ಮೇಯುತ್ತಿದ್ದ ಆಡುಗಳು ಬಲಿಯಾಗಿದ್ದು, ಜೊತೆಗೆ ಆಡು ಮೇಯಿಸುತ್ತಿದ್ದ ಆಡಿನ ಮಾಲೀಕ ರಂಗಸ್ವಾಮಿ ಸಿಡಿಲಿನ ರಭಸಕ್ಕೆ ಅಸ್ವಸ್ಥರಾಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದರು.

ಇದನ್ನು ಕಂಡ ಪಕ್ಕದ ಜಮೀನಿನವರು, ಸ್ಥಳಕ್ಕಾಗಮಿಸಿ ರಂಗಸ್ವಾಮಿಯರನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದು, ರಂಗಸ್ವಾಮಿಯವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ತೊರೆನೂರು ಸಹಕಾರ ಬ್ಯಾಂಕಿನ ಅಧ್ಯಕ್ಷ ಟಿ.ಕೆ.ಕೃಷ್ಣೇಗೌಡ, ನಿರ್ದೇಶಕ ಟಿ.ಕೆ.ಪಾಂಡುರಂಗ ಕಡುಬಡವನಾದ ರಂಗಸ್ವಾಮಿಯವರಿಗೆ ಆದಷ್ಟು ಬೇಗನೇ ಪರಿಹಾರ ಒದಗಿಸಬೇಕು ಎಂದು ಕಂದಾಯ ಇಲಾಖಾ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಸೋಮವಾರಪೇಟೆಗೆ ಸಾಧಾರಣ ಮಳೆ

ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಮರೀಚಿಕೆಯಾಗಿದ್ದ ಮಳೆ ಇಂದು ಸಂಜೆ ವೇಳೆಗೆ ಸಾಧಾರಣವಾಗಿ ಸುರಿದು ವಾತಾವರಣಕ್ಕೆ ತಂಪೆರೆಯಿತು.

ಪೂರ್ವ ಭಾಗದಿಂದ ದಟ್ಟ ಮೋಡಗಳು ಆವರಿಸಿ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದರೂ ಸಹ ನಿರೀಕ್ಷೆಯಂತೆ ಮಳೆ ಸುರಿಯದೇ ನಿರಾಸೆ ಮೂಡಿಸಿತು. ತಾಲೂಕು ಕೇಂದ್ರವನ್ನು ಹೊರತುಪಡಿಸಿದರೆ ಸುತ್ತಮುತ್ತಲಲ್ಲಿ ಉತ್ತಮ ಮಳೆಯಾಗಿದ್ದು ಕೃಷಿ ಕಾರ್ಯಗಳು ಪ್ರಗತಿಯಲ್ಲಿವೆ. ಆದರೆ ಸೋಮವಾರಪೇಟೆ ಪಟ್ಟಣದ ಏಳೆಂಟು ಕಿ.ಮೀ. ವ್ಯಾಪ್ತಿಯಲ್ಲಿ ಈವರೆಗೆ ನಿರೀಕ್ಷೆಯಂತೆ ಮಳೆಯಾಗದೇ ಕೃಷಿ ಕಾರ್ಯಕ್ಕೆ ತೀವ್ರ ಹಿನ್ನಡೆಯಾಗಿದೆ.

ಬಿರು ಬಿಸಿಲಿಗೆ ಕಾಫಿ ತೋಟದಲ್ಲಿನ ಕಾಫಿ ಗಿಡಗಳು ಒಣಗುತ್ತಿದ್ದು, ಗದ್ದೆ ಕೆಲಸಗಳೂ ಸಹ ಸ್ಥಗಿತಗೊಂಡಿವೆ. ಬಿಸಿಲಿನ ತಾಪಕ್ಕೆ ಕಾಫಿ ಗಿಡಗಳಿಗೆ ಬಿಳಿಕಾಂಡಕೊರಕ ಕೀಟ ಬಾಧೆ ಬಾಧಿಸಿದ್ದು, ಹತೋಟಿಗೆ ಬೆಳೆಗಾರರು ಪರದಾಡುತ್ತಿದ್ದಾರೆ.

ಇನ್ನು ಸಣ್ಣಪುಟ್ಟ ತೊರೆ, ಹೊಳೆಗಳಲ್ಲಿ ನೀರು ಬತ್ತಿ ಹೋಗಿದ್ದು, ಕೃಷಿ ಕಾರ್ಯಕ್ಕೆ ಹಿನ್ನಡೆಯಾಗಿದೆ. ಪಟ್ಟಣದ ಕಕ್ಕೆಹೊಳೆಯಲ್ಲಿ ನೀರು ಇಂಗಿ ಹೋಗಿದೆ. ದುದ್‍ಗಲ್ ಹೊಳೆಯಲ್ಲೂ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿದೆ. ಈ ಭಾಗದಲ್ಲಿ ದಟ್ಟ ಮೋಡಗಳು ಆವರಿಸುತ್ತಿದ್ದರೂ ಮಳೆ ಮಾತ್ರ ಬೀಳುತ್ತಿಲ್ಲ. ಪರಿಣಾಮ ಕೃಷಿ ಕಾರ್ಯ ಕೈಗೊಳ್ಳಬೇಕಾದ ರೈತರು ಮಳೆಗಾಗಿ ಆಗಸದತ್ತ ಮುಖ ಮಾಡುವಂತಾಗಿದೆ.

ಮಧ್ಯೆ ಮಧ್ಯೆ ಕೇವಲ ಐದಾರು ಸೆಂಟ್ಸ್‍ನಷ್ಟು ಮಾತ್ರ ಮಳೆಯಾಗುತ್ತಿರುವದರಿಂದ ವಾತಾವರಣದಲ್ಲೂ ಏರುಪೇರಾಗುತ್ತಿದೆ. ಕ್ರಿಮಿ ಕೀಟ, ಸೊಳ್ಳೆಗಳ ಹಾವಳಿಯೂ ಹೆಚ್ಚುತ್ತಿದ್ದು, ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಕನಿಷ್ಟ 2 ರಿಂದ 3 ಇಂಚಿನಷ್ಟಾದರೂ ಮಳೆ ಸುರಿದರೆ ವಾತಾವರಣದಲ್ಲಿ ತಾಪದ ಪ್ರಮಾಣ ಕಡಿಮೆಯಾಗುತ್ತದೆ. ಇದರೊಂದಿಗೆ ಕೃಷಿ ಕಾರ್ಯಕ್ಕೂ ಅನುಕೂಲವಾಗುತ್ತದೆ ಎಂದು ತೋಳೂರುಶೆಟ್ಟಳ್ಳಿಯ ಕೃಷಿಕ ಸುಧಾಕರ್ ಅಭಿಪ್ರಾಯಿಸಿದ್ದಾರೆ.

ಮಳೆಯಿಂದ ಸಂಚಾರಕ್ಕೆ ಅಡ್ಡಿ

ಕುಶಾಲನಗರ : ಕುಶಾಲನಗರ ವ್ಯಾಪ್ತಿಯಲ್ಲಿ ಬುಧವಾರ ಮಧ್ಯಾಹ್ನ ಗುಡುಗು ಸಹಿತ ಮಳೆಯಾಯಿತು. ಪಟ್ಟಣದ ಕೆಲವೆಡೆ ಅಲ್ಲಲ್ಲಿ ಅಲ್ಪ ಪ್ರಮಾಣದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದ್ದು ಸರಕಾರಿ ಪಾಲಿಟೆಕ್ನಿಕ್ ಮುಂಭಾಗದ ಮರದ ಬೃಹತ್ ಕೊಂಬೆಯೊಂದು ತುಂಡರಿಸಿ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಕಿಮೀ ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು. ಡಿವೈಎಸ್ಪಿ ದಿನಕರ ಶೆಟ್ಟಿ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಸುಂಟಿಕೊಪ್ಪ : ಸುಂಟಿಕೊಪ್ಪ ಸುತ್ತ ಮುತ್ತಲ್ಲ ಕಡೆಗಳಲ್ಲಿ ಮಳೆಯಾಗಿದ್ದು ಕಳೆದ ಕೆಲವು ದಿನಗಳಿಂದ ಬಿಸಿಲ ಧಗೆಯಲ್ಲಿ ಬಳಲಿದ ಜನತೆಗೆ ಬುಧವಾರ ಸಂಜೆ ಸುರಿದ ಮಳೆಯಿಂದ ಕೊಂಚ ತಂಪಾಯಿತು.

ಸುಂಟಿಕೊಪ್ಪ ಭಾಗದಲ್ಲಿ ಕಳೆದ ಹಲವು ದಿನಗಳಿಂದ ಸುಡು ಬಿಸಿಲಿನಿಂದ ಬಸವಳಿದ ಜನತೆಗೆ ಮಳೆಯಿಂದ ಕೊಂಚ ನಿಟ್ಟುಸಿರು ಬಿಡುವಂತಾಯಿತು. ಮಳೆಯಿಂದ ಭೂಮಿ ತಂಪಾಯಿತು.