ಸೋಮವಾರಪೇಟೆ, ಮೇ 22: ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಬೀಡು ಗ್ರಾಮದ ಕಾಲೋನಿಯಲ್ಲಿ ನಿರ್ಮಿಸಿರುವ ಕಾಂಕ್ರೀಟ್ ರಸ್ತೆ ಕಾಮಗಾರಿ ಕಳಪೆಯಾಗಿರುವ ಬಗ್ಗೆ ದೂರು ಸಲ್ಲಿಕೆಯಾದ ಹಿನ್ನೆಲೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಪ್ರಿಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮುಂದಿನ ಒಂದು ವಾರದೊಳಗೆ ಕಾಮಗಾರಿಯನ್ನು ಪುನರ್‍ನಿರ್ಮಿಸ ಬೇಕು. ಕಾಮಗಾರಿಯ ಗುಣಮಟ್ಟ ವನ್ನು ಕಾಪಾಡಬೇಕು. ತಪ್ಪಿದ್ದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸುವದಾಗಿ ಸ್ಥಳದಲ್ಲಿದ್ದ ಜಿ.ಪಂ. ಅಭಿಯಂತರರಿಗೆ ಎಚ್ಚರಿಸಿದರು.

ಹೊಸಬೀಡು ಗ್ರಾಮದ ಕಾಲೋನಿ ರಸ್ತೆ ತೀರಾ ಹದಗೆಟ್ಟಿದ್ದ ರಿಂದ ಜಿ.ಪಂ. ಮೂಲಕ ಮಳೆಹಾನಿ ಪರಿಹಾರ ನಿಧಿಯಡಿ ಕಾಂಕ್ರೀಟ್ ರಸ್ತೆ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ ನಿರ್ಮಾಣವಾದ ಕೆಲ ತಿಂಗಳುಗಳಲ್ಲೇ ರಸ್ತೆ ಗುಂಡಿ ಬಿದ್ದಿದ್ದು, ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದರು. ಈ ಬಗ್ಗೆ ತಾಲೂಕು ತಹಶೀಲ್ದಾರ್ ಮೂಲಕ ಮನವಿಯನ್ನೂ ಸಲ್ಲಿಸಿ, ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವ ಬಗ್ಗೆ ಎಚ್ಚರಿಸಿದ್ದರು.

ಈ ಹಿನ್ನೆಲೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಯನ್ನು ಖುದ್ದು ವೀಕ್ಷಿಸಿದರಲ್ಲದೇ, ಮುಂದಿನ ಒಂದು ವಾರದೊಳಗೆ ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳಬೇಕು. ತಪ್ಪಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವದಾಗಿ ಅಭಿಯಂತರರಿಗೆ ಎಚ್ಚರಿಸಿದರು.

ಈ ಸಂದರ್ಭ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿ ಕಾರಿ ಸುನಿಲ್‍ಕುಮಾರ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರವೀಶ್, ಜಿ.ಪಂ. ಇಂಜಿನಿಯರ್ ವೀರೇಂದ್ರ ಸೇರಿದಂತೆ ಸ್ಥಳೀಯರಾದ ವಸಂತ್, ರಮ್ಯ, ಸಂತೋಷ್, ಪುನೀತ್, ಪಾರ್ವತಿ, ಭಾನು ಸೇರಿದಂತೆ ಇತರರು ಉಪಸ್ಥಿತರಿದ್ದರು.