ಜಿಲ್ಲೆಯಲ್ಲಿ ಪ್ರಾರಂಭಗೊಳ್ಳಲಿದೆ ಹೊಸ ಪರಿಕಲ್ಪನೆಯ ಕೇಂದ್ರ

ಮಡಿಕೇರಿ, ಮೇ 21: ಪ್ರಸ್ತುತ 21ನೇ ಶತಮಾನದಲ್ಲಿ ಶೈಕ್ಷಣಿಕ ವ್ಯವಸ್ಥೆ ತೀರಾ ಸ್ಪರ್ಧಾತ್ಮಕವಾಗಿದ್ದು ಕೇವಲ ಮಕ್ಕಳು ಗಳಿಸುವ ಅಂಕ - ಶೈಕ್ಷಣಿಕ ಸಂಸ್ಥೆಗಳಿಗೆ ವಾರ್ಷಿಕವಾಗಿ ಬರುವ ಫಲಿತಾಂಶದತ್ತಲೇ ಹೆಚ್ಚಿನ ಆದ್ಯತೆ ಕಂಡು ಬರುತ್ತಿರುವದು ಸಾಮಾನ್ಯವಾಗಿದೆ.

ವಿದ್ಯಾರ್ಥಿಗಳ ಆಸಕ್ತಿಯನ್ನಾಗಲಿ... ಅವರ ಕಲಿಕಾ ಸಾಮಥ್ರ್ಯವನ್ನಾಗಲಿ ಗಮನಿಸಲಾಗುತ್ತಿಲ್ಲ. ಇದೊಂದು ರೀತಿಯಲ್ಲಿ ಹೇರಿಕೆ. ಒತ್ತಡದ ಸನ್ನಿವೇಶವೇ ಸರಿ. ಕೇವಲ ಮಕ್ಕಳು ಮಾತ್ರವಲ್ಲ ಪೋಷಕರು - ಶಿಕ್ಷಕರು ಇಲಾಖೆಗಳು ಇದರಿಂದ ಹೊರತಾಗಿಲ್ಲ.

ಈ ಜಂಜಾಟ ನಡುವೆ ಮಕ್ಕಳಿಗೆ ಭಾರತೀಯ ಸಂಸ್ಕøತಿಗೆ ಒಳಪಟ್ಟಂತೆ ಸಂಸ್ಕøತಿಯ ಪರಿಚಯ, ವಿವಿಧತೆಯಲ್ಲಿ ಏಕತೆ ಸೇರಿದಂತೆ ಅವರವರ ಆಸಕ್ತಿ - ಸಾಮಥ್ರ್ಯಕ್ಕೆ ತಕ್ಕಂತೆ ಶಿಕ್ಷಣ ನೀಡಿ ಅವರನ್ನು ದೇಶಕ್ಕೆ ಸತ್ಪ್ರಜೆಗಳನ್ನಾಗಿ ರೂಪುಗೊಳಿಸುವ ನಿಟ್ಟಿನಲ್ಲಿ ಸೇವಾ ಸಂಸ್ಥೆಯೊಂದು ಪ್ರಯತ್ನದಲ್ಲಿದೆ. ಇದೀಗ ಈ ಸಂಸ್ಥೆ ಕೊಡಗು ಜಿಲ್ಲೆಯಲ್ಲಿಯೂ ಈ ಹಿಂದಿನಂತೆ ಗುರುಕುಲ ಮಾದರಿಯಲ್ಲಿ ಶಿಕ್ಷಣ ಕೇಂದ್ರವೊಂದನ್ನು ಪ್ರಸಕ್ತ ವರ್ಷದಿಂದ ಪ್ರಾರಂಭಿಸಲು ಮುಂದಾಗಿದೆ.

ಇಂಡಸ್ ಕ್ವಾಲಿಟಿ ಫೌಂಡೇಶನ್ (ಐ.ಕ್ಯೂ.ಎಫ್.)ನ ಅಂಗ ಸಂಸ್ಥೆಯಾಗಿರುವ ಜಿ.ಜಿ.ಎಸ್.ಐ.ಇ.ಎಸ್. ವತಿಯಿಂದ ಮಡಿಕೇರಿ ಸನಿಹದ ಹೆರವನಾಡುವಿನಲ್ಲಿರುವ ರಾಕ್‍ವುಡ್ ಎಸ್ಟೇಟ್‍ನಲ್ಲಿ ‘ಹರ್ ಮಂದಿರ್’ ಹೆಸರಿನಲ್ಲಿ ಈ ವರ್ಷ ಇದಕ್ಕಾಗಿ ಮೂರವರೆ ವರ್ಷದಿಂದ ಐದೂವರೆ ವರ್ಷದವರೆಗಿನ 20 ರಿಂದ 25 ಮಕ್ಕಳನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲು ಮುಂದಾಗಿದೆ.

ಶಿಕ್ಷಣ ವ್ಯವಸ್ಥೆಯಲ್ಲಿ ಅಂಕಗಳಿಕೆ - ಫಲಿತಾಂಶವೊಂದೇ ಮುಖ್ಯವಾಗಿರಬಾರದು. ಭಾರತೀಯತೆ, ಇಲ್ಲಿನ ಶ್ರೀಮಂತಿಕೆ ಸಂಪ್ರದಾಯವೂ ಉಳಿಯಬೇಕು. ಈ ನಿಟ್ಟಿನಲ್ಲಿ ಮಹತ್ತರ ಬದಲಾವಣೆ ಇಂದಿನ ಅಗತ್ಯವೂ ಆಗಿದೆ. ಇದನ್ನು ಮಕ್ಕಳು ಚಿಕ್ಕವರಾಗಿರುವ ಅವಧಿಯಿಂದಲೇ ಹಂತ ಹಂತವಾಗಿ ಜಾರಿಗೆ ತರಬೇಕು ಎಂಬದು ಈ ಸಂಸ್ಥೆಯ ಉದ್ದೇಶವಾಗಿದೆ.

ಸೇವಾ ಸಂಸ್ಥೆಯಾಗಿರುವ ಇದು ಮಕ್ಕಳ ಎಲ್ಲಾ ವ್ಯವಸ್ಥೆಯನ್ನು ಉಚಿತವಾಗಿ ನಿರ್ವಹಿಸಲಿದೆ. ಇಲ್ಲಿ ಪಾರಂಪರಿಕ ರೀತಿಯಲ್ಲಿ ಮಕ್ಕಳನ್ನು ನೋಡಿಕೊಳ್ಳಲಿದೆ. ಯಾವದೇ ಜಾತಿ ಬೇಧ ಇಲ್ಲಿ ಇರುವದಿಲ್ಲ. ಮಕ್ಕಳ ಕಲಾ ಕೌಶಲ್ಯ, ಗುರು-ಶಿಷ್ಯರ ಭಾಂದವ್ಯ, ಭಾರತೀಯತೆಯ ಮೌಲ್ಯಗಳನ್ನು ಎತ್ತಿಹಿಡಿಯುವ ಪ್ರಯತ್ನ ಇದಾಗಿದೆ. ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವದು, ಮಾತೃ ಭಾಷೆಯಲ್ಲಿ ಕಲಿಸುವದು, ಮಕ್ಕಳಿಗೆ ಅರಿವಾಗದಂತೆ ಅವರ ಆಸಕ್ತಿಯನ್ನು ಅರಿತು ಅವರನ್ನು ಆ ನಿಟ್ಟಿನಲ್ಲಿ ರೂಪಿಸುವ ಪ್ರಯತ್ನ ಇದಾಗಲಿದೆ ಎಂದು ಜಿಲ್ಲೆಯ ಕೇಂದ್ರದ ಉಸ್ತುವಾರಿ ಹೊಂದಿರುವ ನಿವೃತ್ತ ಪ್ರಾಂಶುಪಾಲೆ ರಾಣಿ ಅಪ್ಪಯ್ಯ ಅವರು ‘ಶಕ್ತಿ’ಯೊಂದಿಗೆ ವಿವರಿಸಿದರು. ಭಾರತೀಯ ಸಂಪ್ರದಾಯದೊಂದಿಗೆ ಕೊಡಗಿನ ಪರಂಪರೆಯ ಬಗ್ಗೆಯೂ ಅರಿವು ಮೂಡಿಸಲಾಗುವದು. ಈ ಪ್ರಯತ್ನದ ನಡುವೆಯೇ ಪ್ರಸ್ತುತದ ಶಿಕ್ಷಣವನ್ನೂ ಕಲಿಸಲಾಗುತ್ತದೆ. ಆದರೆ ಮಕ್ಕಳ ಆಸಕ್ತಿ - ಸಾಮಥ್ರ್ಯವನ್ನು ಅರಿತು ಮುಂದುವರಿಯಲಾಗುವದು. ಎಲ್ಲವನ್ನೂ ಸಂಸ್ಥೆ ಸೇವಾ ಮನೋಭಾವದೊಂದಿಗೆ ಉಚಿತವಾಗಿಯೇ ಕಲ್ಪಿಸಲು ಮುಂದಾಗಿರುವದಾಗಿ ರಾಣಿ ಅಪ್ಪಯ್ಯ ತಿಳಿಸಿದರು.

ಶಿಕ್ಷಣ ತಜ್ಞರು ಹೇಳುವಂತೆ ಮಕ್ಕಳು ಸಿ.ಬಿ.ಎಸ್.ಸಿ., ಐ.ಸಿ.ಎಸ್.ಸಿ.ಯಂತಹ ಪಠ್ಯ ಕ್ರಮಗಳನ್ನು ಬಾಯಿಪಾಟ ಮಾಡಿ ಅದೊಂದರತ್ತಲೇ ಎಲ್ಲಾ ನಿಗಾವನ್ನು ಒತ್ತಡದೊಂದಿಗೆ ಇರಿಸಿ ಶೇ. 100 ಅಂಕಗಳಿಸುತ್ತಾರೆ. ಆದರೆ ಇದೊಂದು ಶಿಕ್ಷಣವಾಗದು. ಪಾರಂಪರಿಕವಾದ ಶಿಕ್ಷಣವೂ, ಮುಂದಿನ ಬದುಕಿಗೆ ಅಗತ್ಯವಾದ ಮಾರ್ಗದರ್ಶನ - ಉತ್ತೇಜನವೂ ಬೇಕಿದೆ. ಇಂತಹ ಪ್ರಯತ್ನ ಈ ‘ಹರ್ ಮಂದಿರ್’ನಲ್ಲಿ ಈ ವರ್ಷದಿಂದ ಆರಂಭವಾಗಲಿದೆ. ಹೆಚ್ಚಿನ ಮಾಹಿತಿಗೆ ರಾಣಿ ಅಪ್ಪಯ್ಯ (9611112197) ಹಾಗೂ ಮತ್ತೋರ್ವ ಉಸ್ತುವಾರಿ ಕಮಲಾಕಣ್ಣನ್ (08272-236508) ದೂರವಾಣಿಯನ್ನು ಸಂಪರ್ಕಿಸಬಹುದು.