ಕೂಡಿಗೆ, ಮೇ 21: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಬಸವನತ್ತೂರು ಗ್ರಾಮದ ಕೃಷಿ ಇಲಾಖೆಗೆ ಹೊಂದಿಕೊಂಡಂತಿರುವ 9 ಎಕರೆ ಪ್ರದೇಶವನ್ನು ನಿವೇಶನ ರಹಿತರಿಗೆ ಕಳೆದ 15 ವರ್ಷಗಳಿಂದ ಕಾದಿರಿಸಲಾಗಿದೆ. ಆದರೆ, ಇದುವರೆಗೂ ನಿವೇಶನ ರಹಿತರಿಗೆ ಜಾಗ ಲಭ್ಯವಾಗಿಲ್ಲ.
ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ರಹಿತ ನೂರಾರು ಕುಟುಂಬಗಳಿದ್ದು, ಈ ಪ್ರದೇಶದಲ್ಲಿ ಹೆಚ್ಚು ಕೈಗಾರಿಕಾ ಘಟಕಕ್ಕೆ ತೆರಳುವ ಸ್ಥಳೀಯ ಸಾವಿರಾರು ಕಾರ್ಮಿಕರಿದ್ದು, ಈ ಕಾರ್ಮಿಕರು 20 ವರ್ಷಗಳಿಂದಲೂ ವಾಸವಿದ್ದಾರೆ. ಸ್ಥಳೀಯ ಜನರಿಗೆ ಜನಪ್ರತಿನಿಧಿಗಳು ನಿವೇಶನ ನೀಡುವದಾಗಿ ಭರವಸೆ ನೀಡಿದ್ದು, ಅಧಿಕಾರಿಗಳು ಗ್ರಾ.ಪಂ. ಸಭೆ ಕರೆದು ನಿವೇಶನ ರಹಿತರ ಪಟ್ಟಿಯನ್ನು ತಯಾರಿಸಿ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಿಗೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ತಲಪಿಸಿದ್ದಾರೆ. ಆ ಕಾರ್ಯ ಇನ್ನೂ ಕಾರ್ಯಗತವಾಗಿಲ್ಲ. ಕಂದಾಯ ಇಲಾಖೆಯ ಪ್ರಕಾರ 1/1 ರಲ್ಲಿ 5 ಎಕರೆ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳ ಹೆಸರಿನಲ್ಲಿ ಆರ್‍ಟಿಸಿ ಇದ್ದು, ಇನ್ನುಳಿದ 11/1 ರಲ್ಲಿ ಸರ್ಕಾರ ಎಂದು ಆರ್‍ಟಿಸಿ ನೋಂದಾವಣಿಗೊಂಡಿದೆ. ಆದರೆ, ಕಳೆದ 15 ವರ್ಷಗಳಿಂದಲೂ ಬಕ ಪಕ್ಷಿಗಳಂತೆ ಕಾಯುತ್ತಿರುವ ನಿವೇಶನ ರಹಿತರಿಗೆ ಮುಕ್ತಿ ದೊರಕಿಲ್ಲ.
ನಿವೇಶನಕ್ಕಾಗಿ ಈ ವ್ಯಾಪ್ತಿಯ ನಿವೇಶನ ರಹಿತರು ಗ್ರಾ.ಪಂ. ಹಾಗೂ ತಾಲೂಕು ಪಂಚಾಯಿತಿ ಕಚೇರಿಗೆ ಅಲೆದಾಡುವದು ಸರ್ವೇ ಸಾಮಾನ್ಯವಾಗಿದೆ. ರಾಜಕಾರಣಿಗಳು, ಜನಪ್ರತಿನಿಧಿಗಳು ಚುನಾವಣೆ ಸಂದರ್ಭ ಭರವಸೆಗಳನ್ನು ನೀಡುತ್ತಾ ಬಂದಿದ್ದರೂ ಇದುವರೆಗೂ ಭರವಸೆಗಳನ್ನು ಪೂರೈಸಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಮುಂದಾಗಬೇಕು ಎಂಬದು ನಿವೇಶನ ರಹಿತರ ಆಗ್ರಹವಾಗಿದೆ.
- ಕೆ.ಕೆ. ನಾಗರಾಜ ಶೆಟ್ಟಿ