ಮಡಿಕೇರಿ, ಮೇ 21 : ಪ್ರತ್ಯೇಕವಾದ ಲೋಕಸಭಾ ಸ್ಥಾನವನ್ನು ಕೊಡಗು ಜಿಲ್ಲೆ ಹೊಂದಿಲ್ಲ. ಕ್ಷೇತ್ರ ಪುನರ್ ವಿಂಗಡಣೆಗೆ ಮುಂಚಿತವಾಗಿ ಕೊಡಗು - ಮಂಗಳೂರು ಲೋಕಸಭಾ ಕ್ಷೇತ್ರ ಪುನರ್ ವಿಂಗಡಣೆಯ ಬಳಿಕ ಕೊಡಗು ಸೇರ್ಪಡೆಗೊಂಡಿದ್ದು, ನೆರೆಯ ಮೈಸೂರುವಿನೊಂದಿಗೆ. ಇದಾದ ಬಳಿಕ ನಡೆದ ಪ್ರಪ್ರಥಮ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಅಭ್ಯರ್ಥಿ ಎಚ್. ವಿಶ್ವನಾಥ್ ಜಯಗಳಿಸಿದ್ದರು. 2014ರಲ್ಲಿ ನಡೆದ ಚುನಾವಣೆಯಲ್ಲಿ ಎಚ್. ವಿಶ್ವನಾಥ್ ಅವರ ಎದುರು ಬಿಜೆಪಿಯಿಂದ ಅಚ್ಚರಿಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪ್ರತಾಪ್ ಸಿಂಹ ಅವರು ವಿಜಯ ಸಾಧಿಸುವದರೊಂದಿಗೆ ಪ್ರತಿನಿಧಿಯಾಗಿದ್ದರು.ಇದೀಗ ಇದು ಮೂರನೆಯ ಲೋಕಸಭಾ ಸಮರವಾಗಿ ರಾಜಕೀಯವಾಗಿಯೂ ಬಹಳಷ್ಟು ಬದಲಾವಣೆಗಳಾಗಿವೆ. ಬಿಜೆಪಿಯಿಂದ ಹಾಲಿ ಸಂಸದ ಪ್ರತಾಪ್ ಸಿಂಹ ಅವರೇ ಹುರಿಯಾಳು. ಆದರೆ 2014ರ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಮರು ಆಯ್ಕೆ ಬಯಸಿ ಸ್ಪರ್ಧಿಸಿದ್ದ ಎಚ್. ವಿಶ್ವನಾಥ್ ಅವರು ಈಗ ಕಾಂಗ್ರೆಸ್ ಪಕ್ಷದಲ್ಲೇ ಇಲ್ಲ. ಬದಲಿಗೆ ಇವರು ಜೆಡಿಎಸ್‍ನ ರಾಜ್ಯಾಧ್ಯಕ್ಷರು ಹಾಗೂ ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿದ್ದಾರೆ. ಈ ಬದಲಾವಣೆ ಮಾತ್ರವಲ್ಲದೆ ರಾಜ್ಯದಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರಕಾರವಿದ್ದು, ಮೈತ್ರಿಕೂಟದ ಅಭ್ಯರ್ಥಿಯಾಗಿ ಕಾಂಗ್ರೆಸ್‍ನ ಸಿ.ಎಚ್. ವಿಜಯಶಂಕರ್ ಕಣದಲ್ಲಿದ್ದಾರೆ. ಈ ಸ್ಥಾನವನ್ನು ಕಾಂಗ್ರೆಸ್‍ಗೆ ಉಳಿಸಿಕೊಳ್ಳುವಲ್ಲಿ ಮೈತ್ರಿ ಕೂಟದ ನಡುವಿನ ಬೇಕು - ಬೇಡಿಕೆಯಲ್ಲಿ ಯಶಸ್ವಿಯಾಗಿರುವ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಇದು ಪ್ರತಿಷ್ಠೆಯ ಚುನಾವಣೆಯಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಕೊಡಗು - ಮೈಸೂರು ಕ್ಷೇತ್ರ ಈ ಬಾರಿಯ ಸಮರದಲ್ಲಿ ಹೆಚ್ಚು ಪ್ರಾಮುಖ್ಯತೆ ಹೊಂದಿದೆ.ಚುನಾವಣೆ ಬಳಿಕದ ಸುಧೀರ್ಘ ಒಂದು ತಿಂಗಳ ಅವಧಿಯ ಅಂತರದ ಬಳಿಕ ಮತ ಎಣಿಕೆ ನಡೆಯುತ್ತಿರುವದು, ಇದರೊಂದಿಗೆ ಚುನಾವಣೋತ್ತರ ಸಮೀಕ್ಷೆಗಳ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಗೆಲ್ಲೋರು ಯಾರು - ಸೋಲೋರುಯಾರು ಎಂಬ ಕುತೂಹಲ ಇಮ್ಮಡಿಗೊಂಡಿದೆ. ಕೆಲವು ಸಮೀಕ್ಷೆಗಳು ಹಾಲಿ ಅಭ್ಯರ್ಥಿ ಪ್ರತಾಪ್ ಸಿಂಹ ಸೋಲು ಕಾಣಲಿದ್ದಾರೆ ಎಂದು ಪ್ರಕಟಿಸಿದ್ದರೆ, ಇನ್ನು ಹಲವು ಸಮೀಕ್ಷೆಗಳಲ್ಲಿ ಗೆಲವು ಸಾಧಿಸುವ ವಿಶ್ವಾಸ ವ್ಯಕ್ತಗೊಂಡಿದೆ. ಈ ಲೆಕ್ಕಾಚಾರಗಳು ಏನೇ ಇದ್ದರೂ ಸ್ಪಷ್ಟ ನಿಲುವು ವ್ಯಕ್ತಗೊಳ್ಳುವದು ತಾ. 23 ರಂದು (ನಾಳೆ) ನಡೆಯುವ ಮತ ಎಣಿಕೆಯ ಮೂಲಕವೇ ಎಂಬದು ವಾಸ್ತವ. ಈಗಾಗಲೇ ಭಾರೀ ಬೆಟ್ಟಿಂಗ್‍ಗಳು ಕೂಡ ನಡೆಯುತ್ತಿವೆಯಂತೆ. ರಾಜಕೀಯ ಪಕ್ಷಗಳಲ್ಲಿ ತಳಮಳ ಅಭ್ಯರ್ಥಿಗಳ ಎದೆಯಲ್ಲಿ ಢವಢವದ ಸನ್ನಿವೇಶವಾದರೆ ಮತದಾರ ಪ್ರಭು ತನ್ನದೇ ಆದ ತವಕದಲ್ಲಿದ್ದಾನೆ.

(ಮೊದಲ ಪುಟದಿಂದ)

ದೇಶದಲ್ಲೇನು..?

ಮುಂದಿನ 5 ವರ್ಷಗಳ ಅವಧಿಗೆ ಭಾರತವನ್ನು ಯಾರು ಆಳಲಿದ್ದಾರೆ ಎಂಬದು ನಿರ್ಣಾಯಕವಾಗುವ ದಿನದತ್ತ ಇದೀಗ ಎಲ್ಲರ ಚಿತ್ತನೆಟ್ಟಿದೆ. ಈ ಬಾರಿ ದೇಶದಲ್ಲಿ 7 ಹಂತಗಳಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಕ್ರಮಕೈಗೊಂಡಿದ್ದು, ಮತ ಸಮರ ಮುಕ್ತಾಯಗೊಂಡಿದ್ದು, ಮತ ಎಣಿಕೆಯ ಸಿದ್ಧತೆ ಅಂತಿಮ ಹಂತದಲ್ಲಿವೆ.

ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆದಿದೆ. ಅದರಲ್ಲೂ ಕೊಡಗು - ಮೈಸೂರು ಕ್ಷೇತ್ರದ ಚುನಾವಣೆ ಪ್ರಥಮ ಹಂತವಾಗಿದ್ದ ಏಪ್ರಿಲ್ 18ರಂದೇ ನಡೆದಿದ್ದು, ಈ ಬಾರಿಯ ಫಲಿತಾಂಶಕ್ಕಾಗಿನ ಕುತೂಹಲಕ್ಕಾಗಿ ಕ್ಷೇತ್ರದ ಜನರು ಒಂದು ತಿಂಗಳಿಗೂ ಅಧಿಕ ಸಮಯವನ್ನು ಕಾಯುವಂತಾಗಿತ್ತು. ಮೇ 23 ರಂದು 16ನೇಯ ಲೋಕಸಭಾ ಚುನಾವಣೆಯ ಮತ ಎಣಿಕೆ ಜರುಗಲಿದ್ದು, ಫಲಿತಾಂಶ ಹೊರಬೀಳಲು ಇನ್ನು ಕೇವಲ ಕ್ಷಣಗಣನೆಯಿದೆ. ಆದರೆ, ವಿರೋಧ ಪಕ್ಷಗಳ ಒತ್ತಾಯದಿಂದಾಗಿ ವಿವಿ ಪ್ಯಾಟ್‍ಗಳನ್ನು ಇವಿಎಂ ಸಂಖ್ಯೆಯೊಂದಿಗೆ ಲೆಕ್ಕಮಾಡಿ ತಾಳೆ ಹಾಕಬೇಕಾಗಿರುವದರಿಂದ ಪ್ರಸಕ್ತ ಚುನಾವಣಾ ಫಲಿತಾಂಶ ಪ್ರಕಟಣೆ ಭಾರೀ ತಡವಾಗಲಿದೆ ಎಂದು ತಿಳಿದು ಬಂದಿದೆ. ಮತದಾನದ ಬಳಿಕ ತುಸು ತಣ್ಣಗಾಗ್ಗಿದಂತಹ ರಾಜಕೀಯ ಲೆಕ್ಕಾಚಾರಗಳು ಇದೀಗ ಮತ್ತೊಮ್ಮೆ ಪುಟಿದೇಳುತ್ತಿವೆ. ಇದರೊಂದಿಗೆ ವಿವಿಧ ಬಗೆಯ ಸಮೀಕ್ಷೆಗಳೂ ಇದನ್ನೆ ಹೆಚ್ಚಿಸಿವೆ. ಕೊಡಗು - ಮೈಸೂರು ಕ್ಷೇತ್ರದಲ್ಲಿ ಈ ಬಾರಿ ಯಾರು ವಿಜಯಶಾಲಿಯಾಗಲಿದ್ದಾರೆ ಎಂಬ ಚರ್ಚೆಗಳು ಮಗದೊಮ್ಮೆ ಆರಂಭಗೊಂಡಿದ್ದು, ರಾಜಕೀಯಾಸಕ್ತರು ಪಕ್ಷದ ಬೆಂಬಲಿಗರು ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ‘ಬೆಟ್ಟಿಂಗ್’ನಲ್ಲಿ ನಿರತರಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಬಿಜೆಪಿಯ ಪ್ರತಾಪ್‍ಸಿಂಹ ತಮ್ಮ ಸ್ಥಾನ ಉಳಿಸಿಕೊಳ್ಳುವರೇ ಅಥವಾ ಕಾಂಗ್ರೆಸ್ -ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಪ್ರತಾಪ್‍ರನ್ನು ಹಿಂದಿಕ್ಕಲಿರುವರೇ ಎಂಬ ಕೌತುಕ ಮಾತ್ರವಲ್ಲದೆ, ಕರ್ನಾಟಕದ 28 ಕ್ಷೇತ್ರಗಳಲ್ಲಿನ ಘಟಾನುಘಟಿಗಳ ಸ್ಪರ್ಧೆಯಲ್ಲಿ ಯಾರು ಏಳಲಿದ್ದಾರೆ, ಯಾರು ಬೀಳಲಿದ್ದಾರೆ. ಇದರೊಂದಿಗೆ ದೇಶದಲ್ಲಿ ಈ ಬಾರಿ ಯಾವ ರೀತಿಯ ಫಲಿತಾಂಶ ಹೊರಬರಲಿದೆ ಎಂಬ ಕುತೂಹಲಕ್ಕೆ ಮೇ 23 ರಂದು ಉತ್ತರ ಸಿಗಲಿದೆ. ಆ ತನಕ ವಿಶ್ಲೇಷಣೆಗಳೇ ಪ್ರಸ್ತುತದ ಚರ್ಚೆಯಾಗಿವೆ.