ನಾಪೋಕ್ಲು, ಮೇ 21: ಮರಂದೋಡ ಗ್ರಾಮದ ಕೆರೆತಟ್ಟು ಪೈಸಾರಿಯಲ್ಲಿರುವ 36 ಕುಟುಂಬ ಗಳಿಗೆ ಮೂಲಸೌಲಭ್ಯ ಒದಗಿಸಲು ಪ್ರಬಾವಿಗಳು ಅಡ್ಡಿ ಪಡಿಸುತ್ತಿದ್ದಾರೆ ಎಂಬ ಪ್ರಜಾ ಪರಿವರ್ತನಾ ವೇದಿಕೆಯ ಪದಾಧಿಕಾರಿಗಳ ಆರೋಪ ಸಂಪೂರ್ಣ ಸತ್ಯಕ್ಕೆ ದೂರವಾಗಿದೆ ಎಂದು ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ. ಇಂತಹ ವೃಥಾ ಆರೋಪ ಮಾಡಿರುವ ಸಂಘಟನೆಯ ಪದಾಧಿಕಾರಿಗಳು ಗ್ರಾಮಸ್ಥರಲ್ಲಿ ಕ್ಷಮೆ ಕೇಳುವಂತೆ ಒತ್ತಾಯಿಸಿರುವ ಗ್ರಾಮಸ್ಥರು, ತಪ್ಪಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದೆಂದು ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ, ಚಂಡಿರ ಎಂ ಜಗದೀಶ್, ಪ್ರಜಾ ಪರಿವರ್ತನಾ ವೇದಿಕೆಯವರು ಮಾಡಿದ ಆರೋಪದಲ್ಲಿ ನೂರಾರು ವರ್ಷಗಳಿಂದ 36 ಕುಟುಂಬಗಳು ಇಲ್ಲಿ ವಾಸವಿವೆ ಎಂದು ಹೇಳಿದ್ದಾರೆ. ಆದರೆ ಇಲ್ಲಿರುವದು ಕೇವಲ 9 ಕುಟುಂಬಗಳು ಮಾತ್ರ, ಅದರಲ್ಲಿ ಎರಡು ಕುಟುಂಬಗಳು ಕೇವಲ ಎರಡು ವರ್ಷಗಳ ಹಿಂದೆಯಷ್ಟೇ ಬೇರೆ ಗ್ರಾಮದಿಂದ ಇಲ್ಲಿಗೆ ಬಂದು ವಾಸಿಸುತ್ತಿದ್ದು, ಎರಡು ಆಶ್ರಯ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ ಅಲ್ಲದೇ ಅನಧಿಕೃತವಾಗಿ ನೀರನ್ನು ಯಥೇಚ್ಚವಾಗಿ ಬಳಸುತ್ತಿದ್ದಾರೆ. ಈ ನೀರು ಹಿಂದೆ ಗ್ರಾಮ ಪಂಚಾಯ್ತಿ ಯಿಂದ 10 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾದ ನೈಸರ್ಗಿಕ ನೀರಿನ ಯೋಜನೆಯಾಗಿದ್ದು ಇದರ ಮೊದಲನೆಯ ಬಳಕೆದಾರರು ಅವರಾಗಿದ್ದಾರೆಂದು ಆರೋಪಿಸಿದರು.
ಕೇಂದ್ರ ಸರ್ಕಾರದ ದೀನದಯಾಳ್ ವಿದ್ಯುತ್ ಯೋಜನೆಯ 145ನೇ ಕೊನೆಯ ವಿದ್ಯುತ್ ಕಂಬವು ರತ್ನ ಎಂಬವರ ಮನೆಯ ಅಂಗಳದಲ್ಲಿ ಅಳವಡಿಸ ಲಾಗಿದೆ. ಹೀಗೆ ವಿದ್ಯುಚ್ಛಕ್ತಿ ಪಡೆದು ಕೊಳ್ಳುವ ಸವಲತ್ತು ಕೂಡಾ ಆಗಿದೆ. ಇಲ್ಲಿರುವ ಮನೆಗಳಿಗೆ ರಸ್ತೆಯಿದೆ. ಪಕ್ಕದಲ್ಲಿಯೇ ವಿಶಾಲವಾದ ಆಟದ ಮೈದಾನವಿದೆ ಗ್ರಾಮದಲ್ಲಿ ಶಾಲೆ ಮತ್ತು ಅಂಗನವಾಡಿ ಇದೆ. ಹೀಗೆ ಸರಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಳ್ಳಲಾಗಿದೆ ಎಂದು ಹೇಳಿದರು.
ಇಲ್ಲಿ ವಿದ್ಯುಚ್ಛಕ್ತಿಗಾಗಿ ಸುಮಾರು 145 ರಿಂದ 150 ವಿದ್ಯುತ್ ಕಂಬಗ ಳನ್ನು ಅಳವಡಿಸುವ ಸಂದರ್ಭ ರಸ್ತೆಯ ಇಕ್ಕೆಲಗಳಲ್ಲಿ ತೋಟದ ಮಾಲೀಕರು ಹಾಗೂ ಸಾರ್ವ ಜನಿಕರು ತಮ್ಮ ತೋಟದಲ್ಲಿ ಬೆಳೆದಂತಹ ಮರದ ಕೊಂಬೆಗಳನ್ನು ಕತ್ತರಿಸಲು ಸಹಕಾರ ನೀಡಿದ್ದಾರೆ. ಹೀಗಿದ್ದರೂ ಕೂಡಾ ಹೊರಗಿನಿಂದ ಪ್ರಜಾ ಪರಿವರ್ತನಾ ವೇದಿಕೆ ಎಂದು ಹೇಳಿಕೊಂಡು ಬಂದಂತಹ ಮುಖಂಡರು ಗ್ರಾಮದ ಬಗ್ಗೆ ಸರಿಯಾಗಿ ತಿಳಿಸುಕೊಳ್ಳದೇ, ಮುಗ್ಧ ಜನರನ್ನು ಬಳಸಿಕೊಂಡು ವೃಥಾ ಆರೋಪ ಮಾಡಲಾಗಿದೆ ಎಂದು ಆರೋಪಿಸಿದರು.
ಅಧಿಕಾರಿಗಳು ಬಂದು ಸ್ಥಳಪರಿಶೀಲನೆ ನಡೆಸಿದ ಸಂದರ್ಭ ಸಂಘಟನೆಯವರು ಮಾಡಿದ ಆರೋಪದಲ್ಲಿ ಯಾವದೇ ಹುರುಳಿಲ್ಲ ಎಂಬದು ಸಾಬೀತಾಗಿದೆ. ಆದರೂ ಸಂಘಟನೆಯವರು ಗ್ರಾಮಸ್ಥರು ಮತ್ತು ಸೆಸ್ಕ್ ಅಧಿಕಾರಿಗಳ ಮೇಲೆ ಪುಕಾರು ನೀಡುತ್ತಿರುವದು ಸಮಂಜಸವಲ್ಲ ಎಂದಿರುವ ಗ್ರಾಮಸ್ಥರು, ಈ ಬಗ್ಗೆ ಸಂಘಟನೆಯವರು ಗ್ರಾಮಸ್ಥರ ಕ್ಷಮೆ ಕೇಳಬೇಕು. ತಪ್ಪಿದ್ದಲ್ಲಿ ಸಂಘಟನೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸುವದರೊಂದಿಗೆ ಸಂಘಟನೆಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವದು ಎಂದು ಎಚ್ಚರಿಸಿದ್ದಾರೆ. ಸುದ್ದಿಗೋಷಿ ್ಠಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಮುಕ್ಕಾಟಿರ ರಮೇಶ್, ಗ್ರಾಮಸ್ಥರಾದ ಮೇರಿಯಂಡ ಅಪ್ಪಣ್ಣ, ಚೋಯಮಾಡಂಡ ಡಿ. ನಾಣಯ್ಯ, ಅಣ್ಣಾಡಿಯಂಡ ಚಂಗಪ್ಪ ಉಪಸ್ಥಿತರಿದ್ದರು.
- ದುಗ್ಗಳ