ಗೋಣಿಕೊಪ್ಪಲು, ಮೇ 21: ಹೊಸೂರು ಹಾಗೂ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಹಲವು ತಿಂಗಳಿನಿಂದ ಕಾಡಾನೆ ಉಪಟಳ ಮಿತಿಮೀರಿದ್ದು ಗ್ರಾಮಸ್ಥರು, ಸಾರ್ವಜನಿಕರು, ಕಾರ್ಮಿಕ ವರ್ಗ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಭೀತಿಯ ವಾತಾವರಣದಲ್ಲಿ ದಿನದೂಡುವಂತಾಗಿದೆ.

ನಿನ್ನೆ ರಾತ್ರಿ 10.30 ಗಂಟೆ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಅಟೋ ಚಾಲಕನನ್ನು ಅಡ್ಡ ಹಾಕಿದ ಒಂಟಿ ಸಲಗ ಆಟೋವನ್ನು ಜಖಂಗೊಳಿಸಿ, ಚಾಲಕನನ್ನು ಬೆನ್ನಟ್ಟಿದ ಘಟನೆ ನಡೆದಿದೆ. ಅದೃಷ್ಟವಶಾತ್ ಆಟೋ ಚಾಲಕ ವಿನುಕುಮಾರ್ ಸಮೀಪದಲ್ಲಿಯೇ ಇದ್ದ ತಮ್ಮ ನೆರೆಮನೆಯಲ್ಲಿ ಆಶ್ರಯ ಪಡೆಯುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗೋಣಿಕೊಪ್ಪಲಿನಲ್ಲಿ ಕಳೆದ 22 ವರ್ಷಗಳಿಂದ ಆಟೋ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕೈಕೇರಿ ಗ್ರಾಮದ ನಿವಾಸಿ ಸಿ.ಎ.ವಿನುಕುಮಾರ್ ಎಂಬವರು ಎಂದಿನಂತೆ ತಾ.20ರಂದು 10.30 ಗಂಟೆ ಸುಮಾರಿಗೆ ತಮ್ಮ ಮನೆಯ ಹಾದಿಯಲ್ಲಿ ಹಿಂತಿರುಗುತ್ತಿದ್ದ ಸಂದರ್ಭ ಅವರ ಮನೆ ಮುಂಭಾಗವೇ ಬಾಳೆ, ತೆಂಗು ಹಾಗೂ ಹಲಸು ಕೃಷಿ ಫಸಲನ್ನು ನಾಶಪಡಿಸಿದ್ದ ಒಂಟಿ ಸಲಗ ಆಟೋರಿಕ್ಷಾದ ಹೆಡ್ ಲೈಟ್ ಬೆಳಕಿಗೆ ಕೊಂಚ ಗಾಬರಿಗೊಂಡಿದೆ ಹಾಗೂ ಆಟೋವನ್ನು ಹಿಂಬಾಲಿಸತೊಡಗಿದೆ. ಅಪಾಯವನ್ನು ಅರಿತ ಚಾಲಕ ವಿನುಕುಮಾರ್ ಆಟೋವನ್ನು ಹಿಮ್ಮುಖವಾಗಿ ಚಲಿಸತೊಡಗಿದರು. ಆದರೆ, ಗಲಿಬಿಲಿಗೊಂಡ ಆನೆ ಮೊದಲಿಗೆ ಆಟೋದ ಮುಂಭಾಗವನ್ನು ತನ್ನ ದಂತದ ಮೂಲಕ ಪುಡಿಗಟ್ಟಿ ಚಾಲಕನನ್ನು ತಿವಿಯಲು ನೋಡಿದೆ. ಅಟೋದ ಇತರೆ ಭಾಗಕ್ಕೂ ದಂತದಿಂದ ತಿವಿದು ತೀವೃ ಜಖಂ ಗೊಳಿಸಿದೆ. ಈ ಸಂದರ್ಭ ಜಾಗೃತರಾಗಿದ್ದ ವಿನು ಅವರು ತಾವು ಬಂದ ದಾರಿಯಲ್ಲಿಯೇ ಆಟೋದಿಂದ ಇಳಿದು ಓಟಕ್ಕಿತ್ತರು. ಸಮೀಪದ ರಾಯಪ್ಪ ಎಂಬವರ ಮನೆಗೆ ತೆರಳಿ ಭಯದಿಂದಲೇ ಇಂದು ಬೆಳಗ್ಗಿನವರೆಗೂ ಆಶ್ರಯಪಡೆಯಬೇಕಾಗಿ ಬಂತು. ಕೈಕೇರಿ ವ್ಯಾಪ್ತಿಯು ಪೆÇನ್ನಂಪೇಟೆ ಅರಣ್ಯ ಇಲಾಖೆಯ ಸುಪರ್ದಿಗೆ ಒಳಪಡುವ ಹಿನ್ನೆಲೆ ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಪೆÇನ್ನಂಪೇಟೆ ವಲಯಾರ ಣ್ಯಾಧಿಕಾರಿ ಗಂಗಾಧರ್ ಎಚ್.ಎಸ್., ಫಾರೆಸ್ಟರ್ ರಾಖೇಶ್, ಅರಣ್ಯರಕ್ಷಕ ಚೇತನ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದರು.

ಭಯದ ವಾತಾವರಣದಲ್ಲಿಯೇ ಬದುಕು!

‘ಶಕ್ತಿ’ಯೊಂದಿಗೆ ತಮ್ಮ ಅನುಭವ ಹಂಚಿಕೊಂಡ ಆಟೋಚಾಲಕ ವಿನುಕುಮಾರ್ ಅವರು, ಕಳೆದ ಹಲವು ವರ್ಷಗಳಿಂದ ಭಯದಲ್ಲಿಯೇ ಜೀವನ ಸಾಗಿಸುವಂತಾಗಿದೆ. ತಮಗೆ ಸುಮಾರು ಒಂದು ಎಕರೆ ಪಿತ್ರಾರ್ಜಿತ ಆಸ್ತಿ ಇದ್ದು ಕಾಫಿ, ಕಾಳುಮೆಣಸು, ಬಾಳೆ, ತೆಂಗು ಕೃಷಿಯಲ್ಲದೆ, ಆಟೋರಿಕ್ಷಾ ಬಾಡಿಗೆಯೊಂದಿಗೆ ಬದುಕು ಸಾಗಿಸುತ್ತಿದ್ದು, ತನ್ನ ಮನೆಯ ಹಾದಿ ಕಿರಿದಾಗಿದೆ ಹಾಗೂ ಅಕ್ಕಪಕ್ಕ ಕೆಲವರು ಕಾಫಿ ತೋಟವನ್ನು ಪಾಳು ಬಿಟ್ಟ ಹಿನ್ನೆಲೆ ಕಾಡು ಬೆಳೆದುಕೊಂಡಿದೆ. ಹಲವು ವರ್ಷಗಳಿಂದ ಪಾಳು ಬಿಟ್ಟಿರುವ ಕಾಪಿ üತೋಟದಲ್ಲಿ ಆನೆಗಳು ಹಗಲು ಹೊತ್ತಿನಲ್ಲಿ ಆಶ್ರಯ ಪಡೆಯುತ್ತಿವೆ. ತಾನು ರಾತ್ರಿ ಮನೆಗೆ ಹಿಂತಿರುಗುವ ಸಂದರ್ಭ ಎಚ್ಚರಿಕೆಯಿಂದಲೇ ಇದೇ ಹಾದಿಯಲ್ಲಿ ಬರುತ್ತಿದ್ದು, ನಿನ್ನೆ ರಾತ್ರಿ ಸ್ವಲ್ಪ ಎಚ್ಚರ ತಪ್ಪಿದ್ದರೂ ತನ್ನ ಸಾವು ಖಚಿತವಾಗಿತ್ತು. ಜೀವದ ಹಂಗು ತೊರೆದು ಬಂದ ಹಾದಿಯಲ್ಲಿಯೇ ಓಡಿ ರಾಯಪ್ಪನವರ ಮನೆಯಲ್ಲಿ ಆಶ್ರಯ ಪಡೆದ ಹಿನ್ನೆಲೆ ಜೀವ ಉಳಿದಿದೆ. ಆಟೋವನ್ನು ಜಖಂಗೊಳಿಸಿದ ಆನೆ ಕೆಲವೇ ಕ್ಷಣದಲ್ಲಿ ನನ್ನನ್ನು ಹಿಂಬಾಲಿಸುತ್ತಾ ಬಂದು, ರಾಯಪ್ಪನವರ ಮನೆ ಮುಂದೆಯೂ ಪ್ರತ್ಯಕ್ಷವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ತನ್ನ ತೋಟದ ಮನೆಯ ಹಾದಿಯಲ್ಲಿ ಈ ಹಿಂದೆ ಹಲವು ಬಾರಿ ರಾತ್ರಿ ಹಾಗೂ ಬೆಳಗ್ಗಿನ ಜಾವ ಕಾಡಾನೆಗಳ ಹಿಂಡು ಹಾಗೂ ಒಂಟಿ ಸಲಗ ದಾರಿಗೆ ಅಡ್ಡವಾಗಿ ಸಿಕ್ಕಿತ್ತು. ಅಂತಹಾ ಸಂದರ್ಭ ಆಟೋದ ಹೆಡ್‍ಲೈಟ್ ಹಾಕಿ ಸುಮ್ಮನೆ ಆಟೋದಲ್ಲಿ ಕುಳಿತುಬಿಡುತ್ತಿದ್ದೆ. ಇದೇ ಪ್ರಥಮ ಬಾರಿಗೆ ತನ್ನ ಮೇಲೆ ದಾಳಿ ಮಾಡಲು ಮುಂದಾಗಿ ಹಿಂಬಾಲಿಸಿರುವದಾಗಿ ಭಯ ವ್ಯಕ್ತಪಡಿಸಿದರು.

23 ಎಕರೆ ವಿವಾದಾತ್ಮಕ ಪಾಳು ಬಿದ್ದ ಕಾಫಿ ತೋಟ

ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ 23 ಎಕರೆ ಕಾಫಿ ತೋಟ ಪಾಲು ಪತ್ತುದಾರಿಕೆ ವಿಚಾರವಾಗಿ ಕಳೆದ 20 ವರ್ಷಗಳಿಂದ ನ್ಯಾಯಾಲಯದ ಮೆಟ್ಟಿಲೇರಿದ್ದು, ತೀರ್ಪು ಹೊರಬಿದ್ದ ನಂತರವೂ ಆಸ್ತಿ ಪಾಲಿನಲ್ಲಿ ಅಸಮಾಧಾನ ಮುಂದುವರಿದ ಹಿನ್ನೆಲೆ ಅಂದಿನಿಂದ ಕಾಫಿ ತೋಟ ಪಾಳುಬಿದ್ದು ಕಾಡಾಗಿ ಪರಿವರ್ತನೆಯಾಗಿದೆ. ಹೊಸೂರು ಹಾಗೂ ಹಾತೂರುವಿನ ಕೃಷಿಕರ ತೋಟಕ್ಕೆ ನುಸುಳುವ ಕಾಡಾನೆಗಳ ಹಿಂಡು ಅರಣ್ಯ ಇಲಾಖೆ ಕಾರ್ಯಾಚರಣೆ ಸಂದರ್ಭ ಇದೇ ಕಾಫಿ ಕಾಡನ್ನು ತಮ್ಮ ಆಶ್ರಯತಾಣವಾಗಿ ಮಾಡಿಕೊಂಡಿದೆ. ಇಂದು ಸ್ಥಳದಲ್ಲಿ ಹಾಜರಿದ್ದ ಕೈಕೇರಿ ನಿವಾಸಿ ಜಮ್ಮಡ ಅಶೋಕ್ ಹಾಗೂ ಪಡಿಕಲ್ ಯದು ಅವರು ಮಾತನಾಡಿ, 23 ಎಕರೆಯಲ್ಲಿರುವ ಕಾಡನ್ನು ಕಡಿಯದೇ ಇದ್ದಲ್ಲಿ ಮುಂದೆ ಆನೆಗಳಿಂದ ಮತ್ತಷ್ಟು ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಹಾತೂರು ಹಾಗೂ ಹೊಸೂರು ಗ್ರಾ.ಪಂ. ಜನಪ್ರತಿನಿಧಿಗಳು, ಅರಣ್ಯ ಇಲಾಖೆ, ಪೆÇಲೀಸ್ ಇಲಾಖೆ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ವಿವಾದಾತ್ಮಕ ಜಾಗದ ಮಾಲೀಕರನ್ನು ಕರೆಯಿಸಿ, ಕಾಡು ತೆರವು ಮಾಡುವ ನಿಟ್ಟಿನಲ್ಲಿ ಸಂಪರ್ಕ ಸಭೆ ಕರೆಯಬೇಕಾದ ಅಗತ್ಯ ಇದೆ ಎಂದು ಒತ್ತಾಯಿಸಿದ್ದಾರೆ.

ಕಳೆದ 15 ದಿನದ ಅವಧಿಯಲ್ಲಿ ಗೊಟ್ಟಡ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ಮೂರು ಕಾಡಾನೆಗಳನ್ನು ‘ರ್ಯಾಪಿಡ್ ರೆಸ್ಪಾನ್ಸ್ ಟೀಮ್’ ವೀರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತರಾಜ್, ವೀರಾಜಪೇಟೆ ವಲಯಾರಣ್ಯಾಧಿಕಾರಿ ಗೋಪಾಲ್, ಉಪ ವಲಯ ಅರಣ್ಯಾಧಿಕಾರಿ ದೇವಯ್ಯ ಅವರ ಸಮ್ಮುಖದಲ್ಲಿ ಕಾಡಿಗೆ ಅಟ್ಟುವ ಪ್ರಯತ್ನ ಪಟ್ಟರೂ ಮತ್ತೆ ಮತ್ತೆ ಕೈಕೇರಿ, ಗೊಟ್ಟಡ, ಕಳತ್ಮಾಡು ವ್ಯಾಪ್ತಿಯಲ್ಲಿ ಪ್ರತ್ಯಕ್ಷವಾಗಿ ಸಾರ್ವಜನಿಕರಲ್ಲಿ ಭೀತಿ ಮೂಡಿಸುತ್ತಿದೆ. ಈ ನಿಟ್ಟಿನಲ್ಲಿ ಶಾಶ್ವತ ಪರಿಹಾರ ಅಗತ್ಯ ಎಂದು ಪಡಿಕಲ್ ಯದು ಅವರು ವಲಯಾರಣ್ಯಾಧಿಕಾರಿ ಗಂಗಾಧರ್ ಅವರಿಗೆ ಮನವಿ ಮಾಡಿದರು.

ಸಾರ್ವಜನಿಕರು ಆನೆ-ಮಾನವ ಸಂಘರ್ಷ ಶಾಶ್ವತ ಪರಿಹಾರಕ್ಕೆ ಯಾವದೇ ಉತ್ತಮ ಸಲಹೆ ನೀಡಿದರೂ ಸ್ವೀಕರಿಸಲಾಗುವದು ಎಂದು ಹೇಳಿದ ಆರ್.ಎಫ್.ಓ.ಗಂಗಾಧರ್ ಅವರು ಹೊಸೂರು,ಹಾತೂರು ಗ್ರಾ.ಪಂ.ವ್ಯಾಪ್ತಿಗೆ ಆನೆಗಳು ನುಸುಳದಂತೆ ರೈಲ್ವೇ ಕಂಬಿಗಳ ಬೇಲಿ ಅಳವಡಿಸುವ ಚಿಂತನೆಯೂ ಇದೆ ಎಂದು ಹೇಳಿದರು. ಪುಂಡಾನೆಗಳನ್ನು ಸೆರೆ ಹಿಡಿಯಲು ಸರ್ಕಾರ ಆದೇಶ ನೀಡಿದ್ದಲ್ಲಿ ಅದನ್ನೂ ಕಾರ್ಯಗತಗೊಳಿಸಲಾಗುವದು ಎಂದು ತಿಳಿಸಿದ್ದಾರೆ.

ಆಟೋ ಚಾಲಕರಿಗೆ ಸೂಕ್ತ ಪರಿಹಾರ

ಒಂಟಿ ಸಲಗದ ದಾಳಿಯಿಂದ ಆಟೋರಿಕ್ಷಾ ತೀವ್ರ ಜಖಂಗೊಂಡಿದ್ದು, ‘ಆಟೋ ವರ್ಕ್ ಶಾಪ್’ ಅಥವಾ ‘ಶೋ ರೂಂ’ ನಿಂದ ಆದ ನಷ್ಟದ ಬಗ್ಗೆ ಅಂದಾಜು ಪಟ್ಟಿ ನೀಡಿದ್ದಲ್ಲಿ ಚಾಲಕರ ಖಾತೆಗೆ ಪರಿಹಾರ ಮೊತ್ತವನ್ನು ಇಲಾಖೆ ಸಂದಾಯ ಮಾಡುತ್ತದೆ ಹಾಗೂ ಕೃಷಿ ಫಸಲು ನಷ್ಟವನ್ನೂ ಆಟೋಚಾಲಕ ವಿನುಕುಮಾರ್ ಅವರಿಗೆ ಶೀಘ್ರ ಕಲ್ಪಿಸಿಕೊಡಲಾಗುವದು ಎಂದು ವಲಯಾರಣ್ಯಾಧಿಕಾರಿ ಗಂಗಾಧರ್ ತಿಳಿಸಿದ್ದಾರೆ. ಸಾವಿನ ದವಡೆಯಿಂದ ಪಾರಾದ ಅಟೋಚಾಲಕರಿಗೆ ಗೋಣಿಕೊಪ್ಪಲು ಆಟೋಚಾಲಕರ ಸಂಘ ಹಾಗೂ ಕೆಲವು ಸ್ವಸಹಾಯ ಸಂಘಗಳಿಂದಲೂ ಪರಿಹಾರ ದೊರಕಿಸಿಕೊಡಲು ಪ್ರಯತ್ನಿಸಲಾಗುವದು ಎಂದು ಗೋಣಿಕೊಪ್ಪಲು ಜಿ.ಪಂ.ಸದಸ್ಯ ಸಿ.ಕೆ.ಬೋಪಣ್ಣ, ಕಾರ್ಯದರ್ಶಿ ಜಪ್ಪು ಅಚ್ಚಪ್ಪ ತಿಳಿಸಿದ್ದಾರೆ.

ಇಂದಿನಿಂದಲೇ ಆನೆ ಕಾಡಿಗಟ್ಟುವ ಕಾರ್ಯಾಚರಣೆ

ಒಂಟಿ ಸಲಗ ಆಟೋವನ್ನು ಜಖಂ ಮಾಡಿದ ಪ್ರಕರಣವನ್ನು ತಾವು ಗಂಭೀರವಾಗಿ ಪರಿಗಣಿಸಿದ್ದು, ಮೇಲಾಧಿಕಾರಿಗಳಿಗೆ ಮಾಹಿತಿ ರವಾನೆ ಮಾಡಿ ಇಂದಿನಿಂದಲೇ ಹಾತೂರು, ಕೈಕೇರಿ ವ್ಯಾಪ್ತಿಯಲ್ಲಿ ಕಾಡಾನೆಗಳನ್ನು ಕಾಡಿಗಟ್ಟಲು ಕಾರ್ಯಾಚರಣೆ ಆರಂಭಿಸಲಾಗುವದು ಎಂದು ಅಧಿಕಾರಿ ಗಂಗಾಧರ್ ‘ಶಕ್ತಿ’ಗೆ ತಿಳಿಸಿದ್ದಾರೆ.

- ವರದಿ: ಟಿ.ಎಲ್.ಶ್ರೀನಿವಾಸ್