ಮಡಿಕೇರಿ ಮೇ 21 : ಚೇರಂಬಾಣೆಯ ಬೇಂಗುನಾಡು ಕೊಡವ ಸಮಾಜದ ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ವತಿಯಿಂದ ನಡೆದ ಮೂರನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ 5-3 ಗೋಲುಗಳ ಅಂತರದಲ್ಲಿ ಕಲ್ಮಾಡಂಡ ತಂಡ ಚೋಕಿರ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಚೇರಂಬಾಣೆಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಎರಡನೇ ಬಾರಿಗೆ ಕಲ್ಮಾಡಂಡ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಚೋಕಿರ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
ದಾನಿಗಳಾದ ಐಚೆಟ್ಟಿರ ಕನಿಕೆ ಕಾವೇರಮ್ಮ ಅವರು ಪತಿ ದಿ.ವಸಂತ ಅವರ ಸ್ಮರಣಾರ್ಥ ಪ್ರಥಮ ಬಹುಮಾನ ಮತ್ತು ಶನಿವಾರಸಂತೆಯ ಚಾಮೇರ ಪವನ್ ದೇವಯ್ಯ ಹಾಗೂ ಮೋನಿಕಾ ದೇವಯ್ಯ ದ್ವಿತೀಯ ಬಹುಮಾನ ವಿತರಿಸಿದರು. ದಾನಿಗಳು ಹಾಗೂ ಕೊಡವ ಸಮಾಜದ ಅಧ್ಯಕ್ಷ ಕುಟ್ಟೇಟಿರ ಕುಂಞಪ್ಪ, ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಪಟ್ಟಮಾಡ ಕುಶಾಲಪ್ಪ, ಕಾರ್ಯದರ್ಶಿ ಬಾಚರಣಿಯಂಡ ದಿನೇಶ್, ಪಟ್ಟಮಾಡ ಕಮಲಾಕ್ಷಿ ಹಾಗೂ ಪದಾಧಿಕಾರಿಗಳು ಬಹುಮಾನ ವಿತರಣಾ ಸಮಾರಂಭದಲ್ಲಿ ಹಾಜರಿದ್ದರು.