ವಿಶ್ವ ಜಲ ದಿನ, ವಿಶ್ವ ಭೂದಿನ ಹಾಗೂ ವಿಶ್ವ ಜೀವ ವೈವಿಧ್ಯ ದಿನಗಳನ್ನು ಅರ್ಥಪೂರ್ಣವಾಗಿ ಆಚರಿಸಲ್ಪಟ್ಟು ಜನರಲ್ಲಿ ಜಾಗೃತಿ ಮೂಡಿಸಿದರೆ ಪ್ರಕೃತಿ ಆಧಾರಿತ ಸಮಸ್ಯೆಗಳಿಗೆ ಅರ್ಧದಷ್ಟು ಪರಿಹಾರ ದೊರೆತಂತೆಯೇ ಸರಿ. ನಿಸರ್ಗ ಅನೇಕ ಜೀವ ವೈವಿಧ್ಯಗಳ ಆಗರ. ಭೂಮಿಯಲ್ಲಿ ಅದೆಷ್ಟು ಜೀವಜಂತುಗಳಿವೆಯೊ...? ಲೆಕ್ಕಕ್ಕೆ ಸಿಕ್ಕವು ಒಂದಿಷ್ಟಾದರೆ...!! ಲೆಕ್ಕದ ಪರಿದಿಗೆ ಬಾರದವು ಮತ್ತೆಷ್ಟೊ...??? ಜೈವಿಕ ಮಂಡಲದ ಜೀವಿಗಳ ಪೈಕಿ ಕೇವಲ ಒಂದು ಭಾಗ ಮಾತ್ರ ನಮಗೆ ತಿಳಿದಿರುವ ಕಾರಣ ನಮಗೆ ಪರಿಸರದ ಕಾರ್ಯವೈಖರಿಗಳ ಬಗ್ಗೆ ಸಂಪೂರ್ಣ ತಿಳಿವಳಿಕೆ ಇಲ್ಲ. ಜಗತ್ತಿನ ಸೌಂದರ್ಯ ಅಡಗಿರ ುವದೇ ಜೀವವೈವಿಧ್ಯಗಳಿಂದಾಗಿ. ಬ್ರಹ್ಮಾಂಡದಲ್ಲಿರುವ ಪ್ರಾಣಿ, ಪಕ್ಷಿ, ಕೀಟ, ಸಸ್ಯ, ಜಲಚರ, ಬ್ಯಾಕ್ಟೀರಿಯಾ ಎಲ್ಲವೂ ಒಂದು ವ್ಯವಸ್ಥಿತ ಜೋಡಣೆಯಲ್ಲಿದೆ. ಆಹಾರ ಸರಪಳಿಯಲ್ಲಿ ಯಾವದೇ ಕೊಂಡಿ ಕಳಚಿದರೂ ಈ ಭೂಮಿಗೆ ಅಪಾಯ ತಪ್ಪಿದ್ದಲ್ಲ. ಈ ಕಾರಣದಿಂದಲೇ ಜೀವ ವೈವಿಧ್ಯವನ್ನು ಕಾಪಾಡುವ, ಅದನ್ನು ಉಳಿಸಿ-ಬೆಳೆಸುವ ಸಂಕಲ್ಪದೊಂದಿಗೆ ಪ್ರತಿವರ್ಷ ಮೇ 22 ರಂದು ವಿಶ್ವ ಜೀವವೈವಿಧ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಅಭಿವೃದ್ಧಿ ಹೆಸರಿನಲ್ಲಿ ಮನುಷ್ಯನ ಮೊದಲ ಹಲ್ಲೆ ಕಾಡಿನ ಮೇಲೆ ಅವ್ಯಾಹತವಾಗಿ ನಡೆದ ಮರಗಳ ಮಾರಣ ಹೋಮದಿಂದ ಕಾಡು ಖಾಲಿ, ಕಾಡು ಖಾಲಿಯಾದ ಮೇಲೆ ಅಲ್ಲಿರುವ ಜೀವಿಗಳೆಲ್ಲ ಖಾಲಿ..? ಹೌದು..! ಅಳಿದು ಹೋದ ಜೀವ ಸಂತತಿಗಳೆಷ್ಟೋ...! ಅಳಿವಿನ ಅಂಚಿಗೆ ಬಂದು ನಿಂತಿರುವ ಜೀವ ಸಂತತಿಗಳು ಒಂದಷ್ಟು...? ಮುಂದೊಂದು ದಿನ ಹಲವಾರು ಪ್ರಾಣಿಗಳನ್ನು. ನಾವಿಂದು ಡೈನೊಸಾರನ್ನು ಆಶ್ಚರ್ಯದಿಂದ ಕಲ್ಪಿಸಿಕೊಂಡು ಫೋಟೋಗಳಲ್ಲಿ ನೋಡುವಂತೆ ನಮ್ಮ ಮುಂದಿನ ಪೀಳಿಗೆಗಳು ನೋಡಬೇಕಿದೆ. ಜೀವ ವೈವಿಧ್ಯದ ರಕ್ಷಣೆ ಎಂದರೆ ಕೇವಲ ಪ್ರಾಣಿ-ಪಕ್ಷಿಗಳ ರಕ್ಷಣೆ ಅಷ್ಟೇ ಅಲ್ಲ. ತನ್ಮೂಲಕ ವಿವಿಧ ಪರಿಸರ ಕೊಂಡಿಗಳ ರಕ್ಷಣೆಯಾದರೆ ಮಾತ್ರ ಜೀವ ವೈವಿಧ್ಯವೂ ಉಳಿಯಬಲ್ಲದು. ಮಾನವನ ಮೂಲಭೂತ ಅವಶ್ಯಕತೆಗಳಾದ ಅನ್ನ, ಆರೋಗ್ಯ, ಆವಾಸ, ಆದಾಯಗಳು ಬರುವದೇ ಜೀವ ವೈವಿಧ್ಯದಿಂದ. ಮೊದಲಾಗಿ ಮರ-ಗಿಡಗಳ ರಕ್ಷಣೆ ಆಗಬೇಕಿದೆ ಕಾಡಲ್ಲಿ ಬಿದಿರಿನ ನಾಶದಿಂದಾಗಿ ಆನೆಗಳು ಊರಿಗೆ ಲಗ್ಗೆ ಇಟ್ಟು ಆಹಾರ ಹುಡುಕುತ್ತಿವೆ. ಮೊಬೈಲ್ ಟವರ್‍ಗಳ ಅಪಾಯಕಾರಿ ವಿಕಿರಣಗಳಿಂದ ಗುಬ್ಬಚ್ಚಿಗಳು ಊರು ಬಿಟ್ಟಿವೆ...! ಹಣ್ಣುಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಕಚ್ಚಿ ಕೊಂಡೊಯ್ದು ಅಲ್ಲಲ್ಲಿ ಬೀಳಿಸಿ ಪರಿಸರ ಬೆಳೆಸುತ್ತಿದ್ದ ಪಕ್ಷಿಗಳಿಗೆ ಈಗ ತಿನ್ನಲು ಹಣ್ಣಿಲ್ಲ...! ರಾತ್ರಿ ತಂಗಲು ಮರವಿಲ್ಲ..? ಅಲ್ಲಲ್ಲಿ ಇದ್ದ ನೀರಿನ ಸೆಲೆಗಳು ಇಂದು ಮಾರ್ಚ್-ಏಪ್ರಿಲ್‍ಗಳಿಗೆಲ್ಲ ಬರಿದಾಗಿವೆ. ಅತೀವ ಸೆಕೆ ತಾಳಲಾರದೆ ಪಕ್ಷಿಗಳು ಸಾವನ್ನಪ್ಪುತ್ತಿವೆ. ಸ್ಫೋಟಗೊಳ್ಳುತ್ತಿರುವ ಜನಸಂಖ್ಯೆ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಅನೇಕ ಚಟುವಟಿಕೆಗಳು, ಜೀವ ಪರಿಸರ ವ್ಯವಸ್ಥೆಯ ಮೇಲೆ ಮಾಡುತ್ತಿರುವ ಹಲ್ಲೆ, ಆವಾಸಗಳ ನಾಶ, ಕೃಷಿ ವಿಸ್ತರಣೆ, ಪರಿಸರ ಮಾಲಿನ್ಯ, ಬದಲಾಗುತ್ತಿರುವ ಜೀವನ, ಬದಲಾಗುತ್ತಿರುವ ಹವಾಮಾನದ ಪರಿಸ್ಥಿತಿ, ಇವುಗಳೆಲ್ಲವೂ ಜೀವ ವೈವಿಧ್ಯದ ಅಳಿವಿಗೆ ಕಾರಣವಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ವಿನಾಶದ ಕೊಂಡಿ ಮಾನವನನ್ನು ತಲಪುವ ಮುಂಚೆಯೇ ಅವನ್ನೆಲ್ಲಾ ಅವಶ್ಯಕತೆಗಳನ್ನು ಪೂರೈಸುವ ಜೀವವೈವಿಧ್ಯದ ನಾಶದಿಂದ ಅವನು ಅಳಿಯುತ್ತಾನೆ. ಶೇ. 7.5 ರಷ್ಟು ಭೂ ಭಾಗವನ್ನು ಸಂರಕ್ಷಿತ ಪ್ರದೇಶ ಮಾಡಬೇಕಾಗಿದ್ದ ಭಾರತ, ಕೇವಲ ಶೇ. 4 ರಷ್ಟು ಭಾಗವನ್ನು ಮಾತ್ರ ಸಂರಕ್ಷಿತ ಪ್ರದೇಶವೆಂದು ಘೋಷಿಸಿದೆ. ವನ್ಯಜೀವಿಗಳ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಇಂದಿನ ಪೀಳಿಗೆಗೆ ಇದರ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಪಶ್ಚಿಮ ಘಟ್ಟಗಳು ಅತೀವ ಜೀವವೈವಿಧ್ಯದ ಬೀಡಾಗಿದೆ ವಿಶ್ವಪರಂಪರೆಯ ಪಟ್ಟಿಗೆ ಪಶ್ಚಿಮ ಘಟ್ಟಗಳ ಮೂವತ್ತೊಂಬತ್ತು ನೆಲೆಗಳು ಸೇರಿವೆ. ಜೀವ ವೈವಿಧ್ಯ ಸಸ್ಯಸಂಪನ್ಮೂಲಗಳು ಮತ್ತು ಔಷಧಿ ಗಿಡಗಳು, ಪ್ರಾಣಿ-ಪಕ್ಷಿ, ಜಾನುವಾರುಗಳನ್ನು ಉತ್ತಮವಾಗಿ ನೋಡಿಕೊಳ್ಳಬೇಕು ಎಲ್ಲವನ್ನೂ ಲಾಭದ ದೃಷ್ಟಿಯಲ್ಲಿ ನೋಡುವ ನಮ್ಮ ಮನೋಭಾವ ಮೊದಲು ಬದಲಾಗಬೇಕು. ಜೈವಿಕ ಸಂಪನ್ಮೂಲಗಳ ಸುಸ್ಥಿರ ಬಳಕೆ ಮತ್ತು ನಿರ್ವಹಣೆ ಮಾಡಬೇಕಿದೆ. ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ ಸಂತಾನಾಭಿವೃದ್ಧಿ ಅವುಗಳಿಗೆ ಪುನರ್ವಸತಿ ಮತ್ತು ಸಂರಕ್ಷಣಾ ಕಾರ್ಯಗಳ ಬಗ್ಗೆ ಹೆಚ್ಚು ಒತ್ತು ನೀಡಬೇಕಿದೆ. ನಿಯಮಿತವಾಗಿ ಶೈಕ್ಷಣಿಕ ಶಿಬಿರ ಮತ್ತು ಕಾರ್ಯಕ್ರಮವನ್ನು ಹಮ್ಮಿಕೊಳ್ಳುವದರ ಮೂಲಕ ಜೀವ ಸಂರಕ್ಷಣೆಯ ಕುರಿತು ಜನಜಾಗೃತಿ ಮೂಡಿಸಬೇಕು. ಕೊಡಗಿನಲ್ಲಿ ಬೆಟ್ಟ ಗುಡ್ಡಗಳನ್ನು ಕಡಿದು ರೆಸಾರ್ಟ್, ಮನೆ, ಹೊಟೇಲ್‍ಗಳನ್ನು ನಿರ್ಮಿಸಿ ಅಲ್ಲಲ್ಲಿ ಬರೆಗಳು ಕುಸಿದು ಉಂಟಾದ ಪರಿಸರ ವೈಪರೀತ್ಯವನ್ನು ಕಣ್ಣಾರೆ ಕಂಡಿದ್ದೇವೆ. ಜೀವ ವೈವಿಧ್ಯ ಮತ್ತು ಅದಕ್ಕೆ ಸಂಬಂಧಿಸಿದ ಪರಂಪ ರಾಗತ ಜ್ಞಾನ ಇವೆರಡರಲ್ಲೂ ಶ್ರೀಮಂತರಾಗಿರುವದು ನಮ್ಮ ದೇಶ ಪ್ರಾಯಶಃ ನಮ್ಮ ದೇಶದಲ್ಲಿರುವಷ್ಟು ಜೀವ ವೈವಿಧ್ಯತೆ ಬೇರೆಲ್ಲೂ ಸಿಗಲಾರದು. ಜೀವವೈವಿಧ್ಯ ಮಾನವನ ಬದುಕಿಗೆ ಹಾಗೂ ಜೀವರಾಶಿಗಳ ಉಳಿವಿಗೆ ಮತ್ತು ಪರಿಸರದ ಸಮತೋಲನಕ್ಕೆ ಅತ್ಯಂತ ಅವಶ್ಯಕವಾಗಿದೆ ಭೂಮಿ ಮೇಲಿರುವ ಹಲವು ಕ್ರಿಮಿಕೀಟಗಳು ಪ್ರಾಣಿಗಳು ಪಕ್ಷಿಗಳು ಜೀವಜಂತು ಗಳು ನಮ್ಮ ಜೀವನಕ್ಕೆ ನೆರವಾಗಿವೆ ಎಂಬ ಅರಿವನ್ನು ವಿದ್ಯಾರ್ಥಿ ಗಳಲ್ಲಿ ನಾವು ಮೂಡಿಸುವ ಕೆಲಸ ಮಾಡಬೇಕಿದೆ. ಸಾವಿರಾರು ವಿವಿಧ ಜಾತಿಯ ಸಸ್ಯಗಳು ನಮ್ಮ ಸುಸ್ಥಿರ ಅಭಿವೃದ್ಧಿಗೆ ಅಗತ್ಯವಾಗಿದೆ ಜೀವ ವೈವಿಧ್ಯತೆಯನ್ನು ಅದರ ವಿಶೇಷತೆ ಮತ್ತು ಮಹತ್ವವನ್ನು ಎಲ್ಲರೂ ಗಮನಿಸುವದು ಸಮಯೋಚಿತ ವಾಗಿದೆ. ಇನ್ನು ನಿರಂತರವಾಗಿ ಜೈವಿಕ ಸಂಪನ್ಮೂಲ ಗಳನ್ನು ಬಳಸುತ್ತಿರುವದರಿಂದ ಅನೇಕ ಸಸ್ಯ, ಪ್ರಾಣಿ-ಪಕ್ಷಿ, ಕೀಟ ಪ್ರಬೇಧಗಳು ಅಪಾಯದ ಅಂಚಿನಲ್ಲಿವೆ. ನಮ್ಮ ದೇಶದ ಪುರಾತನ ಕ್ಷೇತ್ರಗಳು ಪಳಿಯುಳಿಕೆಗಳು, ಅಮೂಲ್ಯ ವನಸ್ಪತಿಗಳು, ದೇವರಕಾಡುಗಳು ನದಿ-ತೊರೆಗಳು, ಕೆರೆ ಕೊಳ್ಳಗಳು, ಹಳ್ಳ ದಿಣ್ಣೆಗಳು, ನೆಲ, ಜಲ, ಪ್ರಾಣಿ-ಪಕ್ಷಿ, ಕೀಟ ಈ ಎಲ್ಲವೂ ನಮ್ಮದಾಗಿಯೇ ಉಳಿಯಬೇಕೆಂದರೆ ಇವುಗಳ ನಡುವೆ ಸಮತೋಲನ ಕಾಯ್ದುಕೊಳ್ಳುವದು ಅತ್ಯ ಗತ್ಯವಾಗಿದೆ.
- ಸಿ.ಎಸ್. ಸತೀಶ್, ಶಿಕ್ಷಕರು ಸ.ಕಿ.ಪ್ರಾ. ಶಾಲೆ ಮುಳ್ಳೂರು.