*ಗೋಣಿಕೊಪ್ಪಲು, ಮೇ 21: ದಕ್ಷಿಣ ಕೊಡಗಿನ ಬುಡಕಟ್ಟು ಜನರ ವಿಶಿಷ್ಟ ಬೇಡು ಹಬ್ಬ ತಾ. 22 ಮತ್ತು 23 ರಂದು ಜರುಗಲಿದೆ. ಬೈಗುಳದ ಸಂಭ್ರಮವಾದ ಬೇಡು ಹಬ್ಬ 22ರ ಬೆಳಿಗ್ಗೆಯಿಂದ ಆರಂಭಗೊಳ್ಳಲಿದೆ. ಬುಡಕಟ್ಟು ಜನರು ಬುಧವಾರ ಬೆಳಿಗ್ಗೆ ವಿಶಿಷ್ಟ ಬಗೆಯ ವೇಷ ತೊಟ್ಟು, ಕೈಗೆ ಸಿಕ್ಕಿದ ವಸ್ತುಗಳನ್ನು ತಾಳ ಮೇಳೆ ಮಾಡಿಕೊಂಡು ಕುಣಿದು ಕುಪ್ಪಳಿಸುತ್ತಾ ಎದುರಿಗೆ ಸಿಕ್ಕಿದವರಿಗೆಲ್ಲ ಅಶ್ಲೀಲವಾಗಿ ಬೈಯುತ್ತಾ ಹಣ ಬೇಡುವದೇ ಈ ಹಬ್ಬದ ವಿಶೇಷತೆ.

ಕಾಫಿತೋಟ ಮತ್ತು ಕಾಡು ಮೇಡುಗಳಲ್ಲಿ ನೆಲೆಸಿರುವ ಬುಡಕಟ್ಟು ಜನರು ಈ ಹಬ್ಬದಂದು ಕುಣಿದು ಸಂಭ್ರಮಿಸಲಿದ್ದಾರೆ. ಎರಡು ದಿನಗಳ ಕಾಲ ಬೇಡಿದ ಹಣವನ್ನು 23 ರಂದು ದೇವರಪುರದಲ್ಲಿರುವ ಭದ್ರಕಾಳಿ ದೇವಸ್ಥಾನದ ಹುಂಡಿಗೆ ಹಾಕಿ ಹಬ್ಬಕ್ಕೆ ತೆರೆ ಎಳೆಯಲಿದ್ದಾರೆ. 23 ರಂದು ಮಧ್ಯಾಹ್ನ ಭದ್ರಕಾಳಿ ದೇವಸ್ಥಾನದ ಮುಂಭಾಗದಲ್ಲಿರುವ ಆಲ ಮತ್ತು ಗೋಣಿ ಮರದ ಸುತ್ತ ತಾಳಮೇಳಗಳೊಂದಿಗೆ ಕುಣಿದು ಆನಂದಿಸಲಿದ್ದಾರೆ.

ಮನಸೋ ಇಚ್ಛೆ ಮದ್ಯ ಸೇವಿಸಿ ಹುಣಸೂರು, ಗೋಣಿಕೊಪ್ಪಲು ನಡುವಿನ ಹೆದ್ದಾರಿಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಹಣ ಬೇಡುವಾಗ ಹಲವು ಅಪಘಾತಗಳು ಸಂಭವಿಸುತ್ತಿದ್ದವು. ಜತೆಗೆ ಬುಡಕಟ್ಟು ಜನರಲ್ಲದವರೂ ಕೂಡ ಮಜಾ ತೆಗೆದುಕೊಳ್ಳುವದಕ್ಕಾಗಿ ಅಸಹ್ಯಕರ ಉಡುಪುಗಳನ್ನು ಧರಿಸಿ ಮಹಿಳೆಯರಿಗೆ ಅಶ್ಲೀಲವಾಗಿ ಬೈಯುತ್ತಾ ಹಣ ಬೇಡಿ ಆದಾಯ ಮಾಡಿಕೊಳ್ಳುತ್ತಿದ್ದರು. ಇದನ್ನು ತಡೆಗಟ್ಟುವದಕ್ಕಾಗಿ ಜಿಲ್ಲಾಡಳಿತ ಕಳೆದ 2 ವರ್ಷಗಳಿಂದ ವೇಷ ಧರಿಸಿದ ಬುಡಕಟ್ಟು ಜನರು ಮುಖ್ಯ ರಸ್ತೆ ಮತ್ತು ಪಟ್ಟಣ ಪ್ರವೇಶಿಸದಂತೆ ನಿಷೇಧ ಹೇರಿದ್ದಾರೆ. ಹೀಗಾಗಿ ಈ ಜನರು ಹಬ್ಬದ ಅಂತಿಮ ದಿನ ನೇರವಾಗಿ ಭದ್ರಕಾಳಿ ದೇವಸ್ಥಾನದ ಬಳಿಗೆ ತೆರಳುತ್ತಾರೆ. ಈ ಹಬ್ಬದ ಸಂಭ್ರಮವನ್ನು ನೋಡುವದಕ್ಕಾಗಿ ರಾಜ್ಯದ ವಿವಿಧ ಮೂಲೆಗಳಿಂದಲೂ ಸಾವಿರಾರು ಜನರು ಆಗಮಿಸುತ್ತಾರೆ.

ದೇವರಪುರದಲ್ಲಿರುವ ಅಯ್ಯಪ್ಪ ದೇವಸ್ಥಾನದಲ್ಲಿ ಮಧ್ಯಾಹ್ನ 2.30 ಗಂಟೆಗೆ ಎಲ್ಲಾ ವೇಷಧಾರಿಗಳು ಸೇರಿ ದೇವರ ಸನ್ನಿಧಿಯಲ್ಲಿ ಹಾಡುತ್ತಾ, ಕುಣಿಯುತ್ತಾ ತಮ್ಮ ಹರಕೆಯನ್ನು ಸಲ್ಲಿಸುತ್ತಾರೆ

ಹಿನ್ನೆಲೆ: ಕೊಡಗಿನಲ್ಲಿ ಕೆಲವು ಕಾಡುಗಳನ್ನು ವಿವಿಧ ದೇವರ ಹೆಸರಿನಲ್ಲಿ ದೇವರ ಕಾಡೆಂದು ಪರಿಗಣಿಸಿ ಹಿಂದಿನಿಂದಲೂ ಈ ಕಾಡಿನಲ್ಲಿ ದೇವರ ಹೆಸರಿನಲ್ಲಿ ಕಾಡು, ಮರಗಳನ್ನು ಸಂರಕ್ಷಿಸುತ್ತಾ ಬರಲಾಗಿದೆ. ಇದಕ್ಕಾಗಿ ಆಯಾಯ ದೇವರ ಕಾಡಿನಲ್ಲಿ ಆಯಾಯ ದೇವರ ವಿವಿಧ ಬೇಡುಹಬ್ಬ (ಬೋಡ್‍ನಮ್ಮೆ) ಮಾಡಿ ದೇವರ ಪೂಜೆ ಮಾಡಿ ಹರಕೆ ಒಪ್ಪಿಸುತ್ತಾರೆ. ಅದರಂತೆ ಆದಿವಾಸಿಗಳಾದ ಬೆಟ್ಟ ಕುರುಬರು (ಬೊಟ್ಟ ಕುರುಬ) ತರಗು ವಕ್ಕ ಎಂಬ ಹೆಸರಿನೊಂದಿಗೆ ಈ ಬೇಡು ಹಬ್ಬದ ಆಚರಣೆಯಲ್ಲಿ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ತರಗು ಎಂದರೆ ಗುಡಿಸಲಿಗೆ ಉಪಯೋಗಿಸುವ ಕುರುಚಲು ಗಿಡ. ಈ ಗಿಡದಿಂದ ಹಬ್ಬಕ್ಕೆ ಮುನ್ನ ದಿನ ದೇವಸ್ಥಾನದ ಆವರಣ ಶುಚಿಗೊಳಿಸುವದು ಮತ್ತು ಬಿದಿರಿನಿಂದ ತಯಾರಿಸುವ ಕುದುರೆಗೆ ಶೃಂಗಾರ ಮಾಡುವದು ಈ ತರಗು ವಕ್ಕ ಬೆಟ್ಟ ಕುರುಬರು ಹಬ್ಬಕ್ಕೆ ಮಾಡುವ ಸೇವೆಯಾಗಿದೆ.

ಪಟ್ಟಣಿ: ಪಟ್ಟಣಿ ದಿನದ ಬೆಳಿಗ್ಗೆಯಿಂದ ಹಬ್ಬದ ಕಟ್ಟುಪಾಡಿಗೆ ಒಳಪಡುವ ಊರಿನವರು ಅನ್ನವನ್ನು ಬಿಟ್ಟು ಫಲಹಾರ ಸೇವಿಸುತ್ತಾರೆ. ಹಾಗೇ ಹಬ್ಬ ಪ್ರಾರಂಭವಾದ 8 ದಿನಗಳಿಂದಲೂ ಮಾಂಸಾಹಾರ ತಿನ್ನದೆ, ಪ್ರಾಣಿ ಹಿಂಸೆ ಮಾಡದೆ ದೇವರ ಕಟ್ಟು ಪಾಲಿಸುತ್ತಾರೆ. ದೇವಸ್ಥಾನದ ಬಳಿ ಇರುವ ಅಂಬಲಕ್ಕೆ (ದೇವರ ಪರಿಕರ ಇಡುವ ಸ್ಥಳ) ಊರಿನವರೆಲ್ಲರೂ ಮಧ್ಯಾಹ್ನದ ವೇಳೆ ಸೇರಿ ಕಡತಲೆ, ತೂರೆಕೋಲು, ಬೆಳ್ಳಿಯ ಹರಕೆ ವಸ್ತುಗಳಾದ ಕುದುರೆ, ನಾಯಿ, ಮಗು ತೊಟ್ಟಿಲು ಇತ್ಯಾದಿ ದೈವಿಕ ವಸ್ತುಗಳನ್ನು ಶುದ್ಧೀಕರಿಸಿ ಅಯ್ಯಪ್ಪ ದೇವಸ್ಥಾನಕ್ಕೆ ಪೂಜೆ ಸಲ್ಲಿಸುತ್ತಾರೆ. ಈ ದೈವಿಕ ವಸ್ತುಗಳನ್ನು ಹರಕೆ ಒಪ್ಪಿಸಲು ಬಳಸುತ್ತಾರೆ. ಬೇಟೆಕುರುಬ ಸ್ಥಾನಕ್ಕೆ ಮಣ್ಣಿನಿಂದ ಮಾಡಿದ ಬೇಟೆ ನಾಯಿಯ ಹರಕೆ ಸಲ್ಲಿಸಿ ಭದ್ರಕಾಳಿ ದೇವಸ್ಥಾನಕ್ಕೆ ಒಡ್ಡೋಲಗದೊಂದಿಗೆ ತೆರಳಿ ಭದ್ರಕಾಳಿ ದೇವಿಗೆ ಪೂಜೆ ಸಲ್ಲಿಸಿ ಕುರುಬ ದೇವರ ಪ್ರೀತಿಗೆ ಪಾತ್ರವಾದ ಮಣ್ಣಿನಿಂದ ಮಾಡಿದ ನಾಯಿಯನ್ನು ಅರ್ಪಿಸಲಾಗುತ್ತದೆ.

ಹರಕೆ ಹೊತ್ತ ಯುವಕರಲ್ಲಿ ಆಧ್ಯತೆ ಮೇರೆಗೆ ದೇವರ ಅನುವಾದದೊಂದಿಗೆ ಇಬ್ಬರು ಯುವಕರನ್ನು ಕುದುರೆ ತೆಗೆಯುವದಕ್ಕೆ ಆರಿಸಿ ಅಯ್ಯಪ್ಪ ದೇವಸ್ಥಾನಕ್ಕೆ ತೆರಳಿ ಹಣ್ಣುಕಾಯಿ ಪಡೆದು ದೇವಸ್ಥಾನದಲ್ಲಿ ಭಕ್ತರು ಹರಕೆ ನೀಡಿದ ಅಕ್ಕಿ, ಧಾನ್ಯ, ತರಕಾರಿಗಳಿಂದ ಮಾಡಿದ ಅಡುಗೆಯನ್ನು ಸೇವಿಸುತ್ತಾರೆ. ನಂತರ ಅಲ್ಲಿಗೆ ಕಳೆದ 8 ದಿನಗಳಿಂದ ತ್ಯಜಿಸಿದ್ದ ಮಾಂಸಾಹಾರವನ್ನು ಸೇವಿಸಬಹುದು ಹಾಗೂ ಬೇಟೆಯನ್ನು ಕೂಡ ಅಂದಿನಿಂದ ಪ್ರಾರಂಭಿಸಬಹುದು ಎಂಬದಕ್ಕೆ ಸಂಕೇತವಾಗಿ ದೇವತಾ ಕಾರ್ಯದ ಮುಂದಾಳತ್ವ ವಹಿಸುವ ಕುಟುಂಬದ ಹಿರಿಯರು ‘ಊರೇ... ನಾಡೇ... ತಕ್ಕರೇ... ಬಿಲ್ಲ್ ಬುಡಡಾ...’ ಎಂದು 3 ಬಾರಿ ಕೇಳಿ ಬಿದಿರಿನಿಂದ ಮಾಡಿದ ಬಾಣವನ್ನು ಬಿಡುತ್ತಾರೆ. ಆ ಬಳಿಕ ಭಕ್ತರು ಮನೆ ಮನೆಗಳಿಗೆ ತೆರಳಿ ವಿಶ್ರಾಂತಿ ಪಡೆಯುತ್ತಾರೆ.

ಕುದುರೆ ತೆಗೆಯುವದು: ಮರುದಿನ (ಗುರುವಾರ) ಬೆಳಿಗ್ಗೆಯಿಂದಲೇ ವೇಷಧಾರಿ ಭಕ್ತರು ಊರಿನ ಮನೆ-ಮನೆ ಹಾಗೂ ಪಟ್ಟಣಗಳಲ್ಲಿ ಬೇಡುತ್ತಾ ದೇವರಿಗೆ ಕಾಣಿಕೆ ಪಡೆಯುತ್ತಾರೆ. ಹಿಂದಿನ ಸಂಸ್ಕøತಿಯಂತೆ ಊರಿನೊಳಗೆ ವಾಸಿಸುವ ಹರಕೆ ಹೊತ್ತ ಭಕ್ತರು ಮತ್ತು ಜೇನು ಕುರುಬರು ಮಾತ್ರ ವೇಷಧಾರಿಗಳಾಗಿ ಅಯ್ಯಪ್ಪ, ಭದ್ರಕಾಳಿ, ಬೋಟೆ ಕುರುಬ ದೇವರನ್ನು ಹೊಗಳುತ್ತಾ ಕಾಣಿಕೆ ಬೇಡುತ್ತಾರೆ. ಮಧ್ಯಾಹ್ನ 2 ಗಂಟೆಯ ವೇಳೆಗೆ ಎಲ್ಲಾ ವೇಷಧಾರಿ ಭಕ್ತರು ಅಯ್ಯಪ್ಪ ಭದ್ರಕಾಳಿ, ಬೇಟೆ ಕುರುಬ ದೇವಸ್ಥಾನಕ್ಕೆ ಬಂದು ಆವರಣದಲ್ಲಿ ದೇವರನ್ನು ಹೊಗಳುತ್ತಾ ಕುಣಿದು ಹರಕೆ ಸಲ್ಲಿಸುತ್ತಾರೆ. ಸರಿಯಾಗಿ 2 ಗಂಟೆಗೆ ಕುದುರೆ ತೆಗೆಯಲು ಹರಕೆ ಹೊತ್ತ ಇಬ್ಬರು ಯುವ ಭಕ್ತರು ಕೊಡವ ಸಂಪ್ರದಾಯದ ಮಂಡೆ ತುಣಿ ಹಾಕಿ ತರಗು ವಕ್ಕದ ಬೇಟೆ ಕುರುಬರು ಸಂಗ್ರಹಿಸಿದ ಬಿದಿರಿನ ಕುದುರೆಯನ್ನು ಊರಿನ ಮುಖ್ಯಸ್ಥರು ಹಾಗೂ ಹಿರಿಯರ ಆಶೀರ್ವಾದದೊಂದಿಗೆ ಅಂಬಲದಲ್ಲಿ ಪೂಜೆ ಸಲ್ಲಿಸಿ ಭಂಡಾರ ಪೆಟ್ಟಿಗೆ ಹಾಗೂ ಪಣಿಕರು ತೆಗೆಯುವ ಮೊಗದೊಂದಿಗೆ ಅಯ್ಯಪ್ಪ ದೇವಸ್ಥಾನಕ್ಕೆ ಆಗಮಿಸುತ್ತಾರೆ.

ಭದ್ರಕಾಳಿ ದೇವರ ಮೊಗಕ್ಕೆ ಮತ್ತು ಕುದುರೆಗೆ ಪೂಜೆ ಸಲ್ಲಿಸಿದ ನಂತರ ಮೊಗದೊಂದಿಗೆ ಒಡ್ಡೋಲಗ ಸಮೇತ ದೇವರ ಕಾಡಿನಲ್ಲಿ ಭದ್ರಕಾಳಿ ದೇವಸ್ಥಾನಕ್ಕೆ ಪೂಜಾರಿ, ತಕ್ಕ ಮುಖ್ಯಸ್ಥರು, ಊರಿನ ಹಿರಿಯರು ಹಾಗೂ ಭಕ್ತ ವೇಷಧಾರಿಗಳೊಂದಿಗೆ ಗಂಡಸರು ಮಾತ್ರ ಭದ್ರಕಾಳಿ ದೇವಸ್ಥಾನಕ್ಕೆ ತೆರಳುತ್ತಾರೆ. ಆಹಾರ ಹರಕೆ ಬಳಿಕ ಅಯ್ಯಪ್ಪ ದೇವಸ್ಥಾನಕ್ಕೆ ಬಂದು ಭಕ್ತರ ಹರಕೆ, ಕಾಣಿಕೆ, ಭಂಡಾರದೊಂದಿಗೆ ಅಂಬಲಕ್ಕೆ ತೆರಳಿ ಪೂಜಾ ಪರಿಕರಗಳನ್ನು ಅಲ್ಲಿಟ್ಟು ಭದ್ರಕಾಳಿ ದೇವರ ಮೊಗಕ್ಕೆ ಮೊಗ ಪೂಜೆ ಸಲ್ಲಿಸುವದರೊಂದಿಗೆ ಎರಡು ದಿನದ ಬೇಡುಹಬ್ಬದ ವಿವರಣೆಯನ್ನು ಮೊಗ ಪಾಟ್‍ನೊಂದಿಗೆ ದೇವರಿಗೆ ಒಪ್ಪಿಸುವ ಮೂಲಕ ಹಬ್ಬವು ಮುಗಿಯುತ್ತದೆ. ಈ ಬೇಡು ಹಬ್ಬವನ್ನು ಮುಖ್ಯವಾಗಿ ಸಣ್ಣುವಂಡ ಕುಟುಂಬಸ್ಥರು ಮುಖ್ಯಸ್ಥರಾಗಿ ನಡೆಸುತ್ತಾ ಬರುತ್ತಿದ್ದಾರೆ. ಈ ಕುಟುಂಬಸ್ಥರಿಗೆ ಊರಿನ ಇತರ ಕುಟುಂಬದವರಾದ ಕಳ್ಳಿಚಂಡ, ಮನೆಯಪಂಡ, ಚಕ್ಕೇರ, ಅಜ್ಜಿನಿಕಂಡ, ಕಂಜಿತಂಡ ಕುಟುಂಬಸ್ಥರು ಸಹಕಾರ ನೀಡುತ್ತಾರೆ.

ಐತಿಹಾಸಿಕ ಬೇಡು ಹಬ್ಬದಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ಪೆÇಲೀಸ್ ಬಿಗಿ ಭದ್ರತೆಯಿಂದಾಗಿ ಪಟ್ಟಣದಲ್ಲಿ ವೇಷಧಾರಿಗಳ ಸಂಖ್ಯೆ ವಿರಳವಾಗಿದ್ದು, ಸಾರ್ವಜನಿಕರಿಗೆ ನಿರಾಶೆ ಉಂಟುಮಾಡುತ್ತಿದೆ. ಈ ಬಾರಿಯೂ ತಾ. 23 ರಂದು ಲೋಕಸಭಾ ಚುನಾವಣೆಯ ಮತ ಎಣಿಕೆ ಇರುವದರಿಂದಲೂ ಹಬ್ಬಕ್ಕೆ ಚುನಾವಣೆ ನೀತಿ ಸಂಹಿತೆಯ ಬಿಸಿ ತಟ್ಟಲಿದೆ.

ಚಿತ್ರ ವರದಿ: ಎನ್.ಎನ್. ದಿನೇಶ್