ಕೂಡಿಗೆ, ಮೇ 20: ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ವೀರಭೂಮಿಯ ಬಸವೇಶ್ವರ ಬಡಾವಣೆಯಲ್ಲಿ ಮೂಲಭೂತ ಸೌಕರ್ಯಕ್ಕಾಗಿ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಬಸವೇಶ್ವರ ಬಡಾವಣೆಯಲ್ಲಿ ರಸ್ತೆ, ಚರಂಡಿ ಇಲ್ಲದೇ ಸಾರ್ವಜನಿಕರು ಪರ ದಾಡುತ್ತಿದ್ದು, ಆದಷ್ಟು ಬೇಗನೇ ಮೂಲಭೂತ ಸೌಕರ್ಯವನ್ನು ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಕೂಡಮಂಗಳೂರು ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮಿರವಿ ಹಾಗೂ ಸ್ಥಳೀಯ ವಾರ್ಡ್ ಸದಸ್ಯೆ ಜ್ಯೋತಿಪ್ರಮೀಳಾ ಸ್ಥಳ ಪರಿಶೀಲನೆ ನಡೆಸಿದ್ದರು. ಚರಂಡಿಯಿಲ್ಲದೆ ತ್ಯಾಜ್ಯ ನೀರು ರಸ್ತೆ ಮೇಲೆ ಹರಿಯುತ್ತಿದ್ದುದನ್ನು ಗಮನಿಸಿದ ಅವರು, ಸಮಸ್ಯೆಗೆ ತಾತ್ಕಾಲಿಕವಾಗಿ ಪರಿಹಾರ ಒದಗಿಸಿಕೊಡುವ ನಿಟ್ಟಿನಲ್ಲಿ ಕಿರಿದಾಗಿದ್ದ ರಸ್ತೆಯನ್ನು ಅಗಲೀಕರಿಸಿ ಚರಂಡಿಯನ್ನು ನಿರ್ಮಾಣ ಮಾಡಲು ತೀರ್ಮಾನಿಸಿದ್ದರು. ಅದರಂತೆ ಮೂರು ದಿನಗಳು ಕಾಲ ರಸ್ತೆ ಅಗಲೀಕರಿಸಿ ರಸ್ತೆ ಒಂದು ಭಾಗದಲ್ಲಿ ಚರಂಡಿ ಕೂಡಾ ತೆಗೆಯಲಾಗಿತ್ತು. ಆದರೆ ಸ್ಥಳೀಯರು ರಸ್ತೆಯ ಎರಡೂ ಬದಿಯಲ್ಲಿ ಕಾಂಕ್ರಿಟ್ ಚರಂಡಿಯ ಜೊತೆಗೆ ರಸ್ತೆ ನಿರ್ಮಾಣ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಅನುದಾನದ ಕೊರತೆಯಿದ್ದರೆ ಮತ್ತೆ ಯಾಕೆ ಕಾಮಗಾರಿಯನ್ನು ನಡೆಸಬೇಕಿತ್ತು. ಈ ರೀತಿ ಅರ್ಧದಲ್ಲಿ ಕೆಲಸವನ್ನು ಬಿಟ್ಟರೇ ನಾವೇನು ಮಾಡೋದು. ನಮ್ಮ ಮನೆಗಳು ಗುಡ್ಡದಲ್ಲಿರುವದರಿಂದ ರಸ್ತೆ ಅಗಲೀಕರಣ ಮಾಡಿ ನಮ್ಮ ಮನೆಗಳಿಗೆ ತೆರಳದಂತಾಗಿದೆ. ಮುಂದೆ ಮಳೆಗಾಲ ಶುರುವಾಗುವದರಿಂದ ಚರಂಡಿ ಇಲ್ಲದ ಕಾರಣ ಮಳೆನೀರು ನೇರವಾಗಿ ಮನೆಗಳಿಗೆ ನುಗ್ಗುತ್ತದೆ. ಮಳೆಗಾಲಕ್ಕೂ ಮುಂಚಿತವಾಗಿ ಇಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದಲ್ಲಿ ಪಂಚಾಯಿತಿಗೆ ಮುತ್ತಿಗೆ ಹಾಕಲಿದ್ದೇವೆ ಎಂದು ಬಸವೇಶ್ವರ ಗ್ರಾಮದ ನಿವಾಸಿಗಳಾದ ಮಂಜಣ್ಣ, ಗೋವಿಂದಗೌಡ, ಶಾರದ, ಮಾದೇವಿ, ಸಮೀನಾ, ಬಾಬು, ಫೌಸಿಯಾ, ಝೈನಾಬಿ, ಭಾರತಿ, ಸಕೀನಾ, ವಸಂತಿ ಹಾಗೂ ಮತ್ತಿತರರು ಎಚ್ಚರಿಸಿದ್ದಾರೆ.
ಈ ಹಿನ್ನೆಲೆ ಕೂಡಮಂಗಳೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಆಯಿಷಾ ಅವರು ಸ್ಥಳ ಪರಿಶೀಲನೆ ನಡೆಸಿದ್ದು, ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿದರು. ನಂತರ ಮಾತನಾಡಿದ ಅವರು, ಇಲ್ಲಿನ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ್ದು, ಎರಡೂ ಬದಿಯಲ್ಲಿ ಕಾಂಕ್ರಿಟ್ ಚರಂಡಿ ನಿರ್ಮಿಸಲು ಪಂಚಾಯಿತಿ ಯಲ್ಲಿ ಅನುದಾನದ ಕೊರತೆಯಿದೆ. ಸಾರ್ವಜನಿಕರ ವಿರೋಧ ವ್ಯಕ್ತಪಡಿಸಿರುವ ಕಾರಣ ಕಾಮಗಾರಿ ಯನ್ನು ನಿಲ್ಲಿಸಿ ಮೊದಲಿದ್ದಂತೆ ನೀರಿನ ಪೈಪುಗಳನ್ನು ಅಳವಡಿಸ ಲಾಗುವದು. ಸರ್ಕಾರದಿಂದ ಅನುದಾನ ಬಂದ ನಂತರ ಚರಂಡಿ ಹಾಗೂ ರಸ್ತೆ ನಿರ್ಮಾಣದ ಕಾಮಗಾರಿಗೆ ಮುಂದಾಗಲಿದ್ದೇವೆ ಎಂದರು.
ಸ್ಥಳೀಯ ವಾರ್ಡ್ ಸದಸ್ಯೆ ಜ್ಯೋತಿ ಪ್ರಮೀಳಾ ಮಾತನಾಡಿ, ಇಲ್ಲಿನ ಸಮಸ್ಯೆಯನ್ನು ತಾತ್ಕಾಲಿಕವಾಗಿ ಪರಿಹರಿಸಲು ಮುಂದಾದ ವೇಳೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದು, ಅನುದಾನದ ಕೊರತೆಯಿಂದ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಮುಂದಿನ ಮಾಸಿಕ ಸಭೆಯಲ್ಲಿ ಚರ್ಚೆ ನಡೆಸಿ ಆದಷ್ಟು ಬೇಗನೇ ಇಲ್ಲಿನ ಜನರ ಸಮಸ್ಯೆಯನ್ನು ಪರಿಹರಿಸಲಾಗುವದು ಎಂದರು.
ಜಿ.ಪಂ ಸದಸ್ಯೆ ಕೆ.ಆರ್. ಮಂಜುಳಾ ಬಸವೇಶ್ವರ ಬಡಾವಣೆಗೆ ಭೇಟಿ ಮಾಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ನಂತರ ಸ್ಥಳಕ್ಕೆ ತೆರಳಿದ ಪತ್ರಕರ್ತರೊಡನೆ ಮಾತನಾಡಿದ ಅವರು, ಬಸವೇಶ್ವರ ಬಡಾವಣೆಯ ಅಭಿವೃದ್ಧಿಗೆ ಎಂದು ಶಾಸಕರ ನಿಧಿಯಿಂದ 10 ಲಕ್ಷ ರೂ ಅನುದಾನವನ್ನು ತರಲಾಗಿತ್ತು. 10 ಲಕ್ಷ ನಿಧಿಯಲ್ಲಿ ಬಸವೇಶ್ವರ ಬಡಾವಣೆಯ ಮೇಲ್ಭಾಗದ ಮನೆಗಳಿಗೆ ಚರಂಡಿಯನ್ನು ನಿರ್ಮಿಸಬೇಕಾಗಿತ್ತು. ಆದರೆ ತರಾತುರಿಯಲ್ಲಿ ನಡೆದ ಕಾಮಗಾರಿಯಿಂದಾಗಿ ಕೆಳಭಾಗದಲ್ಲಿ ಚರಂಡಿ ನಿರ್ಮಿಸಿರುವದು ಜನರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ. ಎನ್.ಆರ್.ಐ.ಜಿ ಫಂಡ್ನಲ್ಲಿ ರೂ. 1.25 ಲಕ್ಷ ಮಾತ್ರ ಇದ್ದು, ಇದರೊಂದಿಗೆ ಹೆಚ್ಚಿನ ಅನುದಾನ ವನ್ನು ಸೇರಿಸಿ ಕಾಮಗಾರಿಯನ್ನು ಮುಂದುವರೆಸುತ್ತೇವೆ. ಈಗಾಗಲೇ ಶಾಸಕರ ಗಮನಕ್ಕೆ ತಂದಿದ್ದು, ನೀತಿ ಸಂಹಿತೆ ಮುಗಿದ ನಂತರ ಇದರ ಬಗ್ಗೆ ಶಾಸಕರ ಬಳಿ ಖುದ್ದಾಗಿ ಚರ್ಚೆ ನಡೆಸುತ್ತೇನೆ. ಅಲ್ಲಿಯ ತನಕ ತಾತ್ಕಾಲಿಕವಾಗಿ ಜನರ ಸಮಸ್ಯೆಗೆ ಪರಿಹಾರ ಕಂಡುಕೊಡಲು ಸ್ಥಳೀಯ ರೊಡನೆ ಚರ್ಚೆ ನಡೆಸಲಾಗಿದೆ ಎಂದರು. ಒಟ್ಟಿನಲ್ಲಿ ಮಳೆಗಾಲಕ್ಕೆ ಮುಂಚಿತವಾಗಿ ಬಸವೇಶ್ವರ ಬಡಾವಣೆಯಲ್ಲಿ ಮೂಲಭೂತ ಸೌಕರ್ಯ ಒದಗಿಸಿಕೊಡಬೇಕು. ಇಲ್ಲದಿದ್ದಲ್ಲಿ ಹೋರಾಟ ನಡೆಸಲಾಗು ವದು ಎಂದು ಗ್ರಾಮಸ್ಥರು ಎಚ್ಚರಿಕೆಯ ನೀಡಿದ್ದಾರೆ. ಈ ಸಂದರ್ಭ ಬಸವೇಶ್ವರ ಬಡಾವಣೆಯ ಗ್ರಾಮಸ್ಥರು ಇದ್ದರು.