ಶನಿವಾರಸಂತೆ, ಮೇ 20: ಶನಿವಾರಸಂತೆ ಪಟ್ಟಣದ ಸೇತುವೆ ಕೆಳಭಾಗದ ಹೊಳೆ ಮೂದರವಳ್ಳಿ ಗ್ರಾಮದ ನಾಲೆಯಲ್ಲಿ ಹರಿಯುತ್ತದೆ. ಆದರೆ ಪ್ರಸ್ತುತ ಹೊಳೆಯ ನೀರು ತ್ಯಾಜ್ಯಗಳಿಂದ ಕಲುಷಿತಗೊಂಡಿದೆ ಎಂದು ಮೂದರವಳ್ಳಿ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೇತುವೆ ಪಕ್ಕದಲ್ಲಿರುವ 2 ಕಲ್ಯಾಣ ಮಂಟಪಗಳಲ್ಲಿ ವಿವಾಹ ದಿನಗಳ ತ್ಯಾಜ್ಯವನ್ನು ಹೊಳೆಗೆ ಸುರಿಯ ಲಾಗುತ್ತಿದೆ. ಜತೆಗೆ ಶನಿವಾರಸಂತೆ ಪಟ್ಟಣದ ತ್ಯಾಜ್ಯವನ್ನು ಟ್ರ್ಯಾಕ್ಟರ್‍ನಲ್ಲಿ ತುಂಬಿಸಿ ತಂದು ಸೇತುವೆ ಪಕ್ಕದಲ್ಲೇ ಸುರಿಯ ಲಾಗುತ್ತಿದೆ. ಈ ಎಲ್ಲಾ ತ್ಯಾಜ್ಯಗಳು ಹೊಳೆ ನೀರಿನಲ್ಲಿ ಸೇರಿ ಹರಿದು ಬಂದು ಮೂದರವಳ್ಳಿ ನಾಲೆಗೆ ಸೇರುತ್ತಿದೆ. ಗ್ರಾಮಸ್ಥರು ಕೃಷಿಗೆ, ದನಕರುಗಳಿಗೆ, ಬಟ್ಟೆ ಒಗೆಯಲು ನಾಲೆಯ ನೀರನ್ನೇ ಅವಲಂಬಿಸಿದ್ದಾರೆ. ಇದೀಗ ನೀರಿಗೆ ಬರ ಬಂದಿದ್ದು, ವಿಧಿಯಿಲ್ಲದೆ ನಾಲೆಯ ಕೊಳಚೆ ನೀರನ್ನೇ ಉಪಯೋಗಿಸುವಂತಾಗಿದೆ. ರೋಗ - ರುಜಿನದ ಭೀತಿ ಕಾಡುತ್ತಿದೆ.
ಶನಿವಾರಸಂತೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಅಧಿಕಾರಿಗಳು ತ್ಯಾಜ್ಯಗಳನ್ನು ತಂದು ಹೊಳೆಗೆ ಸುರಿಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ಎಂ.ಕೆ. ಮುತ್ತಪ್ಪ, ಎಂ.ಎಂ. ರಾಜಪ್ಪ, ಅಪ್ಪಸ್ವಾಮಿ, ಎಂ.ಎ. ನಾಗರಾಜ್, ಎಂ. ರಾಜಪ್ಪ ಒತ್ತಾಯಿಸಿದ್ದಾರೆ.