ಮಡಿಕೇರಿ, ಮೇ 18: ಕಳೆದ ವರ್ಷ ಮಳೆಗಾಲದಲ್ಲಿ ವಿವಿಧ ಗ್ರಾಮೀಣ ಭಾಗಗಳಲ್ಲಿ ಜಲಸ್ಫೋಟದೊಂದಿಗೆ ಸಾರ್ವಜನಿಕ ಆಸ್ತಿ - ಪಾಸ್ತಿ ಹಾನಿಗೆ ಹಾರಂಗಿ ಜಲಾಶಯ ಕಾರಣವಾಗಿದ್ದು, ಈ ಜಲಾಶಯವನ್ನು ತೆರವುಗೊಳಿಸುವಂತೆ ಸಿಎನ್‍ಸಿ ಆಗ್ರಹಿಸಿದೆ. ತಪ್ಪಿದಲ್ಲಿ ಹಾರಂಗಿ ಹಿನ್ನೀರು ಪ್ರದೇಶದ ಉಪನದಿಗಳ ಜನವಸತಿಯಲ್ಲಿ, ಆಯ ಗ್ರಾಮಸ್ಥರಿಗೆ ಶಾಶ್ವತ ಬದುಕಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಬೇಡಿಕೆ ಇರಿಸಿದೆ. ಈ ಬಗ್ಗೆ ಇಂದು ಜಿಲ್ಲಾಧಿಕಾರಿ ಮುಖಾಂತರ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಲಿಖಿತ ಪತ್ರ ರವಾನಿಸಲಾಗಿದೆ.ಉತ್ತರಕೊಡಗಿನ ವಿವಿಧೆಡೆಗಳಿಂದ ಹರಿದು ಬರುತ್ತಿರುವ ಹೊಳೆಗಳಿಂದ ಹಾರಂಗಿ ಜಲಾಶಯ ರೂಪುಗೊಂಡು, ಮುಂದೆ ಕಾವೇರಿ ನದಿಯಲ್ಲಿ ಸಂಗಮವಾಗಿ ಕರ್ನಾಟಕದ ಅನೇಕ ಕಡೆಗಳೊಂದಿಗೆ, ತಮಿಳುನಾಡು ಹಾಗೂ ಇತರೆಡೆಗಳಿಗೆ ನೀರುಣಿಸು ತ್ತಿದ್ದರೂ, ಹಾರಂಗಿ ಹಿನ್ನೀರಿನ ಜನವಸತಿಗಳಿಗೆ ಯಾವದೇ ಸುರಕ್ಷಾ ಕ್ರಮ ತೆಗೆದುಕೊಂಡಿಲ್ಲವೆಂದು ಸಂಘಟನೆ ಪ್ರಮುಖ ನಂದಿನೆರವಂಡ ನಾಚಪ್ಪ ಆರೋಪಿಸಿದ್ದಾರೆ.

ಪರಿಣಾಮ ಕಳೆದ ಸಾಲಿನಲ್ಲಿ ಕುಗ್ರಾಮಗಳಾದ ಹಮ್ಮಿಯಾಲ, ಮುಟ್ಲು, ಸೂರ್ಲಬ್ಬಿ, ಗರ್ವಾಲೆ, ಕುಂಬಾರಗಡಿಗೆ, ಕಿಕ್ಕರಳ್ಳಿ, ಮಾಕ್ಯ, ಹೆಬ್ಬೆಟ್ಟಗೇರಿ, ಕೆ. ನಿಡುಗಣೆ, ಕಾಲೂರು, ಕರ್ಣಂಗೇರಿ, ಇಗ್ಗೋಡ್ಲು, ಮೂವತ್ತೊಕ್ಲು, ಶಿರಂಗಳ್ಳಿ, ಮಕ್ಕಂದೂರು, ಜೋಡುಪಾಲ, ಮೊಣ್ಣಂಗೇರಿ, ಗಾಳಿಬೀಡು ಸುತ್ತಮುತ್ತ ಅಪಾರ ಭೂಕುಸಿತದೊಂದಿಗೆ ಜಲಸ್ಫೋಟಕ್ಕೆ ಕಾರಣವಾಗಿದೆ ಎಂದು ಅವರು ಟೀಕಿಸಿದ್ದಾರೆ.ಇಂತಹ ಪ್ರಾಕೃತಿಕ ವಿಕೋಪ ತಡೆಗಟ್ಟಲು ತಮಿಳುನಾಡು ಮಾದರಿ ಮೇಲ್ಕಂಡ ಗ್ರಾಮಗಳಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣಾ ಕಾರ್ಯಘಟಕ ಸ್ಥಾಪಿಸುವ ಮೂಲಕ, ಅಗತ್ಯ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನಾಚಪ್ಪ ಒತ್ತಾಯಿಸಿದ್ದಾರೆ. ಈ ವೇಳೆ ಸಂಘಟನೆ ಬೆಂಬಲಿಗರಾದ ಕಲಿಯಂಡ ಪ್ರಕಾಶ್, ಕಾಂಡೇರ ಸುರೇಶ್, ಬೇಪಡಿಯಂಡ ದಿನು, ಬಾಚರಣಿ ಯಂಡ ಅಪ್ಪಣ್ಣ, ಚಂಬಂಡ ಜನತ್, ಕಾಟುಮಣಿಯಂಡ ಉಮೇಶ್, ಪುಲ್ಲೇರ ಕಾಳಪ್ಪ ಮೊದಲಾದವರು ಪಾಲ್ಗೊಂಡಿದ್ದರು.