ಮಡಿಕೇರಿ, ಮೇ 18: ಕಳೆದ ಮಾರ್ಚ್‍ನಲ್ಲಿ ಭಾರತದ 17ನೇ ಲೋಕಸಭೆಗೆ ಚುನಾವಣೆ ಘೋಷಣೆಯೊಂದಿಗೆ; ದೇಶದೆಲ್ಲೆಡೆ ಸಂಚಲನ ಮೂಡಿಸುವ ಮೂಲಕ ಏಪ್ರಿಲ್ 11ರಂದು ಮೊದಲ ಹಂತದಲ್ಲಿ ಮತದಾನ ಪ್ರಕ್ರಿಯೆ ಆರಂಭಗೊಂಡಿತು. ಭಾರತದ 20 ರಾಜ್ಯಗಳಲ್ಲಿ ಮೊದಲ ಹಂತದ ಮತದಾನ ನಡೆದರೆ, ದ್ವಿತೀಯ ಹಂತದಲ್ಲಿ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳ ಸಹಿತ 13 ಇತರ ರಾಜ್ಯಗಳಲ್ಲಿ ಏ. 18ರಂದು ಚುನಾವಣೆ ನಡೆಸಲಾಯಿತು.ಅನಂತರ ತೃತೀಯ ಹಂತದಲ್ಲಿ ಕರ್ನಾಟಕದ ಇನ್ನುಳಿದ 14 ಸ್ಥಾನಗಳು ಸೇರಿದಂತೆ ಇತರ 13 ರಾಜ್ಯಗಳಲ್ಲಿ ಏ.23ರಂದು ಮತದಾನ ನಡೆಯುವಂತಾಯಿತು. ಅಲ್ಲದೆ, ಏ. 29ರಂದು ಇತರ 14 ರಾಜ್ಯಗಳಲ್ಲಿ ನಾಲ್ಕನೇ ಹಂತದ ಮತದಾನ ಏರ್ಪಡಿಸಲಾಯಿತು.ಹೀಗೆ ವಾರದಿಂದ ವಾರಕ್ಕೆ ಕಾವೇರಿದ ಚುನಾವಣಾ ಪ್ರಚಾರದೊಂದಿಗೆ ಏಪ್ರಿಲ್ ತಿಂಗಳಿನಲ್ಲಿ ನಾಲ್ಕು ಹಂತದ ಚುನಾವಣೆ ಎದುರಾದರೆ; ಬಳಿಕ ಇದೇ ತಾ. 6ರಂದು ಐದನೆಯ ಹಂತದಲ್ಲಿ ಏಳು ರಾಜ್ಯಗಳಲ್ಲಿ ಮತದಾನ ನಡೆಯಿತು. ಮಾತ್ರವಲ್ಲದೆ, ದೇಶದಲ್ಲಿ ಆರನೆಯ ಹಂತದಲ್ಲಿ ತಾ. 12ರಂದು ಏಳು ರಾಜ್ಯಗಳಲ್ಲಿ ಚುನಾವಣೆ ಮುಗಿದು, ಇದೀಗ ಅಂತಿಮವಾಗಿ ತಾ. 19ರಂದು (ಇಂದು) ಪ್ರಸಕ್ತ ಚುನಾವಣೆಯು ಮುಕ್ತಾಯ ಹಂತ ತಲಪಿದೆ.543 ಕ್ಷೇತ್ರ : ಹೀಗೆ ರಾಷ್ಟ್ರದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತೀವ್ರ ಕುತೂಹಲದೊಂದಿಗೆ ಅಚ್ಚರಿಗೆ ಕಾರಣವಾಗಿರುವ ಈ ಲೋಕಸಭಾ ಚುನಾವಣೆಯಲ್ಲಿ ಒಟ್ಟು 543 ಸ್ಥಾನಗಳಿಗೆ (ಮೊದಲ ಪುಟದಿಂದ) ಮತದಾನದೊಂದಿಗೆ ತಾ. 19ರಂದು (ಇಂದು) ಈ ಚುನಾವಣಾ ಜಿದ್ದಾಜಿದ್ದಿಗೆ ತೆರೆಬೀಳುವಂತಾಗಿದೆ.
ದೇಶದಲ್ಲಿ ನಡೆದ ಮೊದಲನೆಯ ಹಂತದ ಚುನಾವಣೆಯಲ್ಲಿ 91 ಕ್ಷೇತ್ರಗಳು, ದ್ವಿತೀಯ ಹಂತದಲ್ಲಿ 97 ಕ್ಷೇತ್ರಗಳು, ತೃತೀಯ ಹಂತದಲ್ಲಿ 115 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು.
ಆ ಬಳಿಕ ನಾಲ್ಕನೆಯ ಹಂತದಲ್ಲಿ 71 ಕ್ಷೇತ್ರಗಳು, ಐದನೆಯ ಹಂತದಲ್ಲಿ 51 ಕ್ಷೇತ್ರಗಳು ಹಾಗೂ ಆರನೆಯ ಹಂತದಲ್ಲಿ 59 ಕ್ಷೇತ್ರಗಳೊಂದಿಗೆ ಕಡೆಯ ಸುತ್ತಿನಲ್ಲಿ ಕೂಡ 59 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಹೀಗೆ ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಹಾಗೂ ಗುಜರಾತ್‍ನಿಂದ ಅರುಣಾಚಲ ತನಕ ವ್ಯಾಪಿಸಿಕೊಂಡಿರುವ ಭಾರತದ 30ಕ್ಕೂ ಅಧಿಕ ರಾಜ್ಯಗಳ ಒಕ್ಕೂಟ ವ್ಯವಸ್ಥೆಯಲ್ಲಿ; ಈ ಬಾರಿಯ ಚುನಾವಣೆ ಸಾಕಷ್ಟು ಕುತೂಹಲಕಾರಿಯಾಗಿದೆ.
ಮುಖ್ಯವಾಗಿ ಕಡೆಯ ಎರಡು ಸುತ್ತಿನಲ್ಲಿ ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ರಾಜಕೀಯ ಸಂಘರ್ಷದೊಂದಿಗೆ; ಆಂಧ್ರ, ತೆಲಂಗಾಣ, ಜಮ್ಮು ಕಾಶ್ಮೀರಗಳಲ್ಲಿ ಅಲ್ಪಸ್ವಲ್ಪ ಅಶಾಂತಿಗೆ ಕಾರಣವಾಗಿತ್ತು. ಕರ್ನಾಟಕದ ಮಟ್ಟಿಗೆ ಮಂಡ್ಯ ಲೋಕಸಭಾ ಕ್ಷೇತ್ರ ದೇಶದ ಗಮನ ಸೆಳೆದರೆ, ನೆರೆಯ ಕೇರಳದ ವಯನಾಡು ಕ್ಷೇತ್ರ ರಾಹುಲ್ ಗಾಂಧಿ ಸ್ಪರ್ಧೆಯಿಂದ ಸುದ್ದಿಯಾಯಿತು. ಇನ್ನು ಪ್ರಧಾನಿ ನರೇಂದ್ರಮೋದಿ ಮರು ಆಯ್ಕೆ ಬಯಸಿರುವ ವಾರಣಾಸಿ ಕ್ಷೇತ್ರ ಅಷ್ಟೇ ಮಹತ್ವ ಪಡೆದಿದ್ದರೆ, ಬೋಪಾಲ್‍ನಿಂದ ಸ್ಪರ್ಧಿಸಿರುವ ಸಾಧ್ವಿ ಪ್ರಜ್ಞಾ ಠಾಕೂರ್ ವಿವಾದದೊಂದಿಗೆ ಕೇಂದ್ರೀಕೃತರಾಗಿದ್ದಾರೆ.
ಒಟ್ಟಿನಲ್ಲಿ ದೇಶದ ಪ್ರಜಾಪ್ರಭುತ್ವ ದೇವಾಲಯ ಎಂಬ ಹೆಗ್ಗಳಿಕೆಯ ಸಂಸತ್ತನ್ನು ಈ ಬಾರಿ ಮತದಾರರ ಬೆಂಬಲದಿಂದ ಯಾರ್ಯಾರು ಪ್ರವೇಶಿಸಲಿದ್ದಾರೆ; ಯಾವ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ; ದೇಶದ ಪ್ರಧಾನಿಯಾಗಿ ಆಯ್ಕೆಗೊಳ್ಳುವವರಾರು... ಎಂಬಿತ್ಯಾದಿ ಎಲ್ಲಾ ಪ್ರಶ್ನೆಗಳಿಗೆ ತಾ. 23ರ ಫಲಿತಾಂಶ ಹೊರಬಿದ್ದ ಬಳಿಕವಷ್ಟೇ ನಿರ್ಧಾರವಾಗಬೇಕಿದೆ. ಕಾರಣ ಎಲ್ಲರ ನಿರೀಕ್ಷೆಯಂತೆ ಮತದಾರ ತನ್ನ ನಿರ್ಧಾರ ಪ್ರಕಟೀಕರಣಗೊಳಿಸದಿದ್ದರೆ; ಮತ್ತೆ ರಾಜಕೀಯ ಚಿತ್ರಣ ಕೌತುಕಮಯ ತಿರುವು ಪಡೆದುಕೊಂಡು, ಪ್ರಧಾನಿ ಹುದ್ದೆಗೂ ಚೌಕಾಸಿ ನಡೆದರೆ ಅಚ್ಚರಿಯಿಲ್ಲ. ಹೀಗಾಗಿ ಈ ಚುನಾವಣೆ ಎಲ್ಲರಿಗೂ ಕುತೂಹಲದೊಂದಿಗೆ ಕೊನೆ ಕ್ಷಣದವರೆಗೆ ಆತಂಕ ಹುಟ್ಟು ಹಾಕಿರುವದು ವಾಸ್ತವ.