ಮಡಿಕೇರಿ, ಮೇ 18: ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ತಾ. 23 ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ತಾ. 22 ರಿಂದ ಮದ್ಯ ಮಾರಾಟ ನಿಷೇಧಿಸಿ; ತಾ. 23 ರಂದು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ.ಮತ ಎಣಿಕೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾನೂನು ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕರ್ನಾಟಕ ಅಬಕಾರಿ ನಿಯಮ 1967ರ ನಿಯಮ 10-ಬಿ ಅಧಿಕಾರದಂತೆ ತಾ. 22ರ ಮಧ್ಯರಾತ್ರಿ 12 ಗಂಟೆಯಿಂದ ತಾ. 23ರ ಮಧ್ಯರಾತ್ರಿ 12 ಗಂಟೆಯವರೆಗೆ ಜಿಲ್ಲೆಯಾದ್ಯಂತ ಮದ್ಯ ಸಾಗಾಣಿಕೆ, ಶೇಖರಣೆ ಮತ್ತು ಎಲ್ಲಾ ರೀತಿಯ ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್, ಸ್ಟಾರ್ ಹೊಟೇಲ್ ಮತ್ತಿತರರ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ.ದಂಡ ಪ್ರಕ್ರಿಯಾ ಸಂಹಿತೆ 1973ರ ಸೆಕ್ಷನ್ 144 ಮತ್ತು 144(ಎ) ಹಾಗೂ ಕರ್ನಾಟಕ ಪೊಲೀಸ್ ಆಕ್ಟ್ 1963ರ ಕಲಂ 35ರಡಿ ದತ್ತವಾದ ಅಧಿಕಾರದಂತೆ ತಾ. 23 ರಂದು ಬೆಳಗ್ಗೆ 6 ಗಂಟೆಯಿಂದ ಅದೇ ದಿನ ಮಧ್ಯರಾತ್ರಿ 12 ಗಂಟೆಯವರೆಗೆ ಕೊಡಗು ಜಿಲ್ಲೆಯಾದ್ಯಂತ ಗುಂಪು ಸೇರುವದು, ಪಟಾಕಿ ಸಿಡಿಸುವದು, ವಿಜಯೋತ್ಸವ, ಮೆರವಣಿಗೆ, ಖಾಸಗಿ ವ್ಯಕ್ತಿಗಳು ಧ್ವನಿವರ್ಧಕ ಬಳಸುವದು, ಮಾರಕ ಆಯುಧಗಳನ್ನು ಹೊಂದಿರುವದು ಅಥವಾ ಹಿಡಿದುಕೊಂಡು ಓಡಾಡುವದು ಮುಂತಾದವುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.