ಮಡಿಕೇರಿ, ಮೇ 18 : ಜಿಲ್ಲೆಯಲ್ಲಿ ಕಾಡಾನೆ ಹಾವಳಿ ನಿಯಂತ್ರಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳ ಗೊಂಡ ಸಮನ್ವಯ ಸಭೆಯು ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಉಪಅರಣ್ಯ ಸಂರಕ್ಷಣಾಧಿಕಾರಿಗಳಾದ ಕ್ರಿಸ್ತರಾಜ, ಮಂಜುನಾಥ್, ಜಯ ಇತರರ ಉಪಸ್ಥಿತಿಯಲ್ಲಿ ಇಂದು ಸಭೆ ನಡೆಯಿತು.ನಗರದ ಅರಣ್ಯ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್ ಅವರು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಹೆಚ್ಚಿದ್ದು, ಕಾಡಾನೆಗಳು ಮತ್ತು ಮಾನವನ ನಡುವೆ ಒಂದಲ್ಲ ಒಂದು ರೀತಿಯಲ್ಲಿ ಸಂಘರ್ಷ ಏರ್ಪಡುತ್ತಿದೆ. ಇದನ್ನು ತಡೆಯಲು ಅರಣ್ಯ ಇಲಾಖೆಯಿಂದ ಸಾಕಷ್ಟು ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೂ ಸಹ ಕಾಡಾನೆ ಮತ್ತು ವನ್ಯ ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಆದ್ದರಿಂದ ವನ್ಯಜೀವಿ ಹಾವಳಿ ನಿಯಂತ್ರಿಸುವದು ಮತ್ತು ಮಾನವ ಸಂಘರ್ಷ ತಪ್ಪಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಸಹಕಾರ ಅತ್ಯಗತ್ಯ ಎಂದು ಅವರು ಕೋರಿದರು.ಕೊಡಗು ಜಿಲ್ಲೆಯ ಅರಣ್ಯ ಪ್ರದೇಶದ ಭಾಗದಲ್ಲಿ ಸೋಲಾರ್ ಬೇಲಿ, ಕಂದಕ ನಿರ್ಮಾಣ, ರೈಲ್ವೆ ಕಂಬಿಗಳ ನಿರ್ಮಾಣ ಜೊತೆಗೆ ಸ್ಥಳೀಯ ಮಟ್ಟದಲ್ಲಿ ರ್ಯಾಪಿಡ್ ರೆಸ್ಪಾನ್ಸ್ ತಂಡ, ಹಾಗೆಯೇ ಗ್ರಾ.ಪಂ.ಮಟ್ಟದಲ್ಲಿ ಸ್ಥಳೀಯ ಪ್ರತಿನಿಧಿಗಳೊಂದಿಗೆ ಮಾಹಿತಿ ಹಂಚಿಕೊಳ್ಳುವದು, ಹೀಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೂ ಸಹ ಬೆಳೆ ಹಾನಿ, ಮಾನವನ ನಡುವೆ ಸಂಘರ್ಷ ಕೊನೆಗೊಂಡಿಲ್ಲ, ಇದನ್ನು ಪರಿಣಾಮಕಾರಿಯಾಗಿ ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಜೊತೆಗೆ ವಿವಿಧ ಇಲಾಖೆಗಳು ಕೈಜೋಡಿಸ ಬೇಕಿದೆ.

ಕಾಡಾನೆ ಹಾವಳಿ ನಿಯಂತ್ರಿಸುವ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಳ್ಳಬಹುದು. ವನ್ಯ ಪ್ರಾಣಿಗಳಿಂದ ಬೆಳೆ ನಾಶವಾದಲ್ಲಿ ತಕ್ಷಣವೇ ಪರಿಹಾರ ವಿತರಿಸಲು ಯಾವ ರೀತಿ ಕ್ರಮವಹಿಸಬಹುದು ಎಂಬ ಮಾಹಿತಿ ನೀಡುವಂತೆ ಅವರು ಕೋರಿದರು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ ಜಿಲ್ಲೆಯಲ್ಲಿ ಕಾಡಾನೆ ಹಾಗೂ ಮಾನವನ ಸಂಘರ್ಷ ನಡೆಯುತ್ತಿದೆ. ಮಾನವನ ಜೀವಕ್ಕೆ ಬೆಲೆ ಕಟ್ಟುವದು ಅಸಾಧ್ಯ. ಆದ್ದರಿಂದ ಕಾಡಾನೆ ಹಾಗೂ ವನ್ಯ ಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸಬೇಕಿದೆ. (ಮೊದಲ ಪುಟದಿಂದ) ಆ ನಿಟ್ಟಿನಲ್ಲಿ ಅರಣ್ಯ ಇಲಾಖೆ ಜೊತೆ ವಿವಿಧ ಇಲಾಖೆಗಳು ಕೈಜೋಡಿಸಬೇಕಿದೆ ಎಂದು ಹೇಳಿದರು. ವನ್ಯಪ್ರಾಣಿಗಳಿಗೆ ತುತ್ತಾಗಿ ಸಾವನ್ನಪ್ಪುವ ಜಾನುವಾರುಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ವಿಮಾ ಕಂಪನಿ ಜೊತೆ ಅರಣ್ಯ ಮತ್ತು ಪಶುಪಾಲನಾ ಇಲಾಖೆ ಅಧಿಕಾರಿಗಳು ಚರ್ಚಿಸುವಂತೆ ಜಿಲ್ಲಾಧಿಕಾರಿ ಸಲಹೆ ಮಾಡಿದರು.

ಈ ಬಗ್ಗೆ ಮಾತನಾಡಿದ ಪಶುಪಾಲನಾ ಇಲಾಖೆ ಉಪ ನಿರ್ದೇಶಕ ತಮ್ಮಯ್ಯ ಜಾನುವಾರುಗಳಿಗೆ ವಿಮೆ ಮಾಡಿಸಲು ಅವಕಾಶವಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಟುಂಬದವರ ಜಾನುವಾರುಗಳಿಗೆ ಉಚಿತವಾಗಿ ವಿಮೆ ಮಾಡಲಾಗುತ್ತದೆ. ಇತರೆ ಕುಟುಂಬದ ಜಾನುವಾರುಗಳಿಗೆ ವಿಮೆ ಮಾಡಿಸಬೇಕಿದೆ. ಆ ನಿಟ್ಟಿನಲ್ಲಿ ಸ್ಥಳೀಯವಾಗಿ ಶಿಬಿರ ಏರ್ಪಡಿಸುವದು ಅಥವಾ ಮನೆ ಮನೆಗೆ ತೆರಳಿ ವಿಮೆ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಮಾಹಿತಿ ನೀಡಿದರು.

ತಿತಿಮತಿ ವ್ಯಾಪ್ತಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಪತಿ ಮಾತನಾಡಿ, ಕಾಡಾನೆ ಹಾವಳಿ ವಿಪರೀತವಾಗಿದೆ. ಕಾಫಿ ತೋಟಗಳಲ್ಲಿಯೇ ಕಾಡಾನೆಗಳು ಇರುತ್ತವೆ. ಬೆಳೆಹಾನಿ ಸಂಬಂಧ ಪರಿಹಾರ ನೀಡಲು ಕಾಲಾವಕಾಶ ಬೇಕಾಗುತ್ತದೆ. ಆದರೆ ತಕ್ಷಣವೇ ಪರಿಹಾರ ಬೇಕು ಎಂದು ಬೆಳೆ ನಷ್ಟ ಉಂಟಾದ ಕುಟುಂಬಸ್ಥರು ಒತ್ತಾಯಿಸುತ್ತಾರೆ ಎಂದು ತಿಳಿಸಿದರು. ಕಾಫಿ ಮಂಡಳಿಯ ಅಧಿಕಾರಿ ಕಾಡಾನೆಗಳು ಕಾಫಿ ತೋಟಕ್ಕೆ ನೀರು ಕುಡಿಯಲು ಅಥವಾ ತಂಪಾದ ವಾತಾವರಣ ಇರುತ್ತದೆ ಎಂದು ಬರುತ್ತವೆ. ಆದರೆ ಕಾಫಿ ಬೆಳೆ ನಷ್ಟ ಮಾಡುವದು ಅಪರೂಪ ಎಂದು ಹೇಳಿದರು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದಿವಾಸಿಗಳಿಗೆ ಅರಣ್ಯ ಹಕ್ಕುಪತ್ರ ನೀಡುವ ನಿಟ್ಟಿನಲ್ಲಿ ಸಾಕಷ್ಟು ಅರ್ಜಿಗಳು ಬಾಕಿ ಇದ್ದು, ಇವುಗಳನ್ನು ಇತ್ಯರ್ಥ ಮಾಡಬೇಕಿದೆ. ಆ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸಹಕರಿಸುವಂತೆ ತಿಳಿಸಿದರು. ಗುಡ್ಡೆಹೊಸೂರು ಗ್ರಾ.ಪಂ.ವ್ಯಾಪ್ತಿಯ ಬಸವನಹಳ್ಳಿಯಲ್ಲಿ ಮೂಲನಿವಾಸಿಗಳಿಗೆ ಆಶ್ರಯ ಮನೆ ಕಲ್ಪಿಸಬೇಕಿದ್ದು, ಆ ನಿಟ್ಟಿನಲ್ಲಿ ಮೂರು ಎಕರೆ ಜಾಗ ಗುರುತಿಸಲಾಗಿದೆ. ಈ ಸಂಬಂಧ ಅಗತ್ಯ ಸಹಕಾರಕ್ಕೆ ಜಿಲ್ಲಾಧಿಕಾರಿ ಕೋರಿದರು.

ಅಲ್ಲಿನ ಸ್ಥಳೀಯರೊಂದಿಗೆ ಮತ್ತೊಮ್ಮೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಮೇ ಅಂತ್ಯದೊಳಗೆ ಸಮಸ್ಯೆ ಬಗೆಹರಿಸುವಂತೆ ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತಿಳಿಸಿದರು. ದುಬಾರೆಯಲ್ಲಿ ರಿವರ್ ರ್ಯಾಪ್ಟಿಂಗ್ ಪುನರ್ ಆರಂಭಿಸುವ ಬಗ್ಗೆ ಅರಣ್ಯ ಇಲಾಖೆಯಿಂದ ಪತ್ರ ನೀಡಬೇಕಿದ್ದು, ಈ ಸಂಬಂಧ ಅಗತ್ಯ ಮಾಹಿತಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ವೀರಾಜಪೇಟೆ, ಮಾಕುಟ್ಟ ಮಾರ್ಗದಲ್ಲಿ ಬೀಳುವ ಹಂತದಲ್ಲಿರುವ ಮರಗಳನ್ನು ತೆರವುಗೊಳಿಸಬೇಕು. ಮುಂಗಾರು ಅವಧಿಯಲ್ಲಿ ಬಿದ್ದ ಮರಗಳನ್ನು ಕೂಡಲೇ ತೆರವುಗೊಳಿಸಲು ಕ್ರಮವಹಿಸಬೇಕು. ಆ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ರಿಸ್ತರಾಜ ಅವರು ಏಷ್ಯಾ ಖಂಡದಲ್ಲಿ 40 ಸಾವಿರ ಆನೆಗಳು, ದೇಶದಲ್ಲಿ 27 ಸಾವಿರ ಆನೆಗಳು ಹಾಗೂ ರಾಜ್ಯದಲ್ಲಿ 6 ಸಾವಿರ ಆನೆಗಳಿವೆ. ಅದರಲ್ಲೂ ನಾಗರಹೊಳೆ ಮತ್ತು ಬಂಡೀಪುರ ವ್ಯಾಪ್ತಿಯಲ್ಲಿ ಹೆಚ್ಚಿನ ಆನೆಗಳು ಇವೆ ಎಂದು ಮಾಹಿತಿ ನೀಡಿದರು.

ಕಾಡಾನೆ ಹಾವಳಿ ನಿಯಂತ್ರಿಸುವ ನಿಟ್ಟಿನಲ್ಲಿ ಸೋಲಾರ್ ಬೇಲಿ ನಿರ್ಮಾಣ, ರೈಲ್ವೆ ಕಂಬಿ ಅಳವಡಿಸುವದು, ಕಂದಕ ನಿರ್ಮಾಣ ಹೀಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಆನೆಗೆ ಪ್ರತೀ ನಿತ್ಯ 200-250 ಕೆ.ಜಿ. ಆಹಾರ ಬೇಕಾಗುತ್ತದೆ ಎಂದರು. ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ತಮ್ಮಯ್ಯ ಅವರು ಅರಣ್ಯ ಪ್ರದೇಶದಲ್ಲಿ ಯಥೇಚ್ಛವಾಗಿ ಬಿದಿರು, ಹಲಸು ಗಿಡಗಳನ್ನು ಬೆಳೆಸಬೇಕು. ದೊಡ್ಡ ದೊಡ್ಡ ಕೆರೆ, ಕಟ್ಟೆಗಳನ್ನು ನಿರ್ಮಾಣ ಮಾಡಬೇಕು ಎಂದು ಸಲಹೆಯಿತ್ತರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಅವರು ಕಾಡಾನೆ ಹಾಗೂ ಮಾನವ ಸಂಘರ್ಷ ತಪ್ಪಿಸುವ ನಿಟ್ಟಿನಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಬಗ್ಗೆ ಸಾರ್ವಜನಿಕರೊಂದಿಗೆ ಬೆರೆತು ಕಾರ್ಯನಿರ್ವಹಿಸಿದ್ದಲ್ಲಿ ಹಲವು ಸಮಸ್ಯೆಗಳನ್ನು ಇತ್ಯರ್ಥ ಪಡಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಬಕಾರಿ ಇಲಾಖೆಯ ಉಪ ಆಯುಕ್ತ ವೀರಣ್ಣ ಅವರು ಜಿಲ್ಲೆಯ ಒಂಬತ್ತು ಕಡೆಗಳಲ್ಲಿ ಕಳ್ಳಭಟ್ಟಿ ದಂಧೆ ನಡೆಯುತ್ತಿದೆ. ಇದನ್ನು ನಿಯಂತ್ರಿಸಲು ವಿವಿಧ ಇಲಾಖೆಗಳ ಸಹಕಾರ ಅತ್ಯಗತ್ಯ ಎಂದು ಕೋರಿದರು.

ಉಪ ಅರಣ್ಯಸಂರಕ್ಷಣಾಧಿಕಾರಿ ಜಯ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಡಿವೈಎಸ್‍ಪಿ ಸುಂದರರಾಜ್, ಭೂ ದಾಖಲೆಗಳ ಉಪ ನಿರ್ದೇಶಕರಾದ ಶ್ರೀನಿವಾಸ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಮಹಂತೇಶಪ್ಪ, ತೋಟಗಾರಿಕೆಯ ಇಲಾಖೆಯ ಉಪ ನಿರ್ದೇಶಕರಾದ ಚಂದ್ರಶೇಖರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ನಾನಾ ಇಲಾಖೆ ಅಧಿಕಾರಿಗಳು ಇತರರು ಇದ್ದರು.