ಜನಸಾಮಾನ್ಯರ ಭಾಷೆಯಲ್ಲಿ ಹೇಳುವ ಮೂಲವ್ಯಾಧಿ ಅಥವಾ ಪೈಲ್ಸ್ ಸಮಸ್ಯೆ ತುಂಬ ಸಂಕೀರ್ಣ ಎಂಬ ಭಾವನೆ ಸಾರ್ವತ್ರಿಕವಾಗಿದೆ. ಜನರಿಗೆ ಈ ರೋಗ ಲಕ್ಷಣ ಹಂಚಿಕೊಳ್ಳಲು ಮುಜುಗರ, ವೈದ್ಯರ ಭೇಟಿ, ಚಿಕಿತ್ಸೆ ಪಡೆಯಲು ಸಮಯಾವಕಾಶ ಆಗದಿರುವದು ಅಥವಾ ಸಮಯವೇ ಸಿಕ್ಕದಿರುವಂಥಹ ಸ್ಥಿತಿ ಅಡ್ಮಿಟ್ ಆಗಬೇಕಂತೆ, ಆಪರೇಷನ್ ಮಾಡ್ತಾರಂತೆ ಎಂಬಿತ್ಯಾದಿ ಬಾಯಿಯಿಂದ ಬಾಯಿಗೆ ಪ್ರಚಾರವಾಗುವ ವಿಚಾರಗಳು... ಇವೆಲ್ಲದರ ಕಾರಣಗಳಿಂದ ಪೈಲ್ಸ್ ಎಂಬ ಹೆಸರು ಕೇಳಿದ ತಕ್ಷಣ ಜನರಲ್ಲಿ ಏನೋ ಆತಂಕ ಕಾಡುವದು ಹಿಂದೆಯೂ ಇತ್ತು, ದುರದೃಷ್ಟವಶಾತ್ ಇವತ್ತಿಗೂ ಇದೆ.

ಒಂದು ಅಂದಾಜಿನ ಪ್ರಕಾರ, ವ್ಯಕ್ತಿಯ ಜೀವಿತಾವಧಿಯಲ್ಲಿ 10 ಮಂದಿಯ ಪೈಕಿ ಕನಿಷ್ಟ 7 ಮಂದಿ ಒಮ್ಮೆಯಾದರೂ ಗುದ ಅಥವಾ ಮಲದ್ವಾರ ಸಂಬಂಧಿ ತೊಂದರೆಗಳನ್ನು ಅನುಭವಿಸಿರುತ್ತಾರೆ. ಬಾಲ್ಯ, ಯೌವ್ವನ, ಗರ್ಭಿಣಿ , ಬಾಣಂತಿ, ವೃದ್ಧಾಪ್ಯ ಯಾವದೇ ಹಂತದಲ್ಲೂ ಈ ಸಮಸ್ಯೆ ಕಾಡಬಹುದು.

ವೈದ್ಯಕೀಯವಾಗಿ ಈ ಪ್ರದೇಶದಲ್ಲಿ ಸಾಮಾನ್ಯವಾಗಿ ಕಾಣಸಿಗುವ ಸಮಸ್ಯೆಗಳು ಗುದ ಕರ್ತಿಕ/ಚಿಟಿಚಿಟ ಜಿissuಡಿe - ಇದರಲ್ಲಿ ಆರಂಭದ ಹಂತದ ಒಂದರಿಂದ ಆರು ವಾರ ಮಲದ್ವಾರದಲ್ಲಿ ಸೀಳಿದಂತೆ, ಹರಿತವಾದ ಬ್ಲೇಡ್‍ನಲ್ಲಿ ಕುಯ್ದಂತೆ ಗಾಯವಾಗಿದ್ದು, ಅತಿಯಾದ ನೋವು , ಉರಿಯೊಂದಿಗೆ ಮಲದ ಮೇಲೆ ಬ್ರಶ್‍ನಲ್ಲಿ ಗೆರೆ ಎಳೆದಂತೆ ಸ್ವಲ್ಪವೇ ರಕ್ತ ಸ್ರಾವ ಆಗುತ್ತದೆ.

ಅರ್ಷಸ್ ಅಥವಾ ಪೈಲ್ಸ್: ಇದು, ಅರಿಯಂತೆ (ಶತ್ರುವಿನಂತೆ) ಪೀಡಿಸುವ ಇನ್ನೊಂದು ತೊಂದರೆ. ಪೈಲ್ಸ್‍ನಲ್ಲಿ ಅನೇಕ ವಿಭಾಗಗಳಿವೆ. ಹೆಚ್ಚಾಗಿ ನೋವು ಇಲ್ಲದ ಹಾಗಿರುತ್ತದೆ. ನೋವು ಇರುವ ರೀತಿಯ ಹೊಸ ಪೈಲ್ಸ್, ಹೊರಗೆ ಯಾವಾಗಲು ಮುಟ್ಟಲು ಸಿಕ್ಕುತ್ತ ಚರ್ಮದ ಬಣ್ಣದಿಂದ ಕೂಡಿದ್ದು ಹೆಚ್ಚಿನ ಸಂದರ್ಭದಲ್ಲಿ 5-10 ದಿನದಲ್ಲಿ ಸುಲಭ ಚಿಕಿತ್ಸೆಗಳ ಮೂಲಕ ಗುಣಪಡಿಸಬಹುದಾಗಿದೆ.

ಇದರ ಬಹು ಮುಖ್ಯ ವಿಧ ಅಭ್ಯಂತರ ಅಥವಾ ಒಳಗಿನ ಪೈಲ್ಸ್: ಒಳಗಿನ ಪೈಲ್ಸ್‍ನ್ನೇ ಹೆಚ್ಚಾಗಿ ಮೂಲವ್ಯಾಧಿ ಅಥವಾ ಮೊಳೆ ರೋಗ ಎಂದು ಆಡು ಭಾಷೆಯಲ್ಲಿ ಜನ ಹೇಳುತ್ತಾರೆ . ಇದು ಸಾಮಾನ್ಯ ಜನರಿಂದ ಹಿಡಿದು ಅನೇಕ ವೈದ್ಯರಿಗೂ ರೋಗ ನಿರ್ಣಯ ಮಾಡಲು ಗೊಂದಲ ಮೂಡುವಂತಹ ಒಂದು ಸ್ಥಿತಿ. ವೈದ್ಯಕೀಯವಾಗಿ ಇದರಲ್ಲಿ ಏರು ಕ್ರಮದಲ್ಲಿ ಮೊಳೆ ಎಷ್ಟು ಹೊರಗೆ ಬರುತ್ತದೆ ಎಂಬದರ ಮೇಲೆ ತೀವ್ರತೆ ನಿರ್ಧರಿಸಲಾಗುತ್ತದೆ. 4 ಡಿಗ್ರಿ ಇದ್ದು ಮೊದಲ ಡಿಗ್ರಿಯಲ್ಲಿ ರೋಗಿಗೆ ಮೊಳೆಯ ಅನುಭವ ಆಗದೆ ಕೇವಲ ಮಲವಿಸರ್ಜನೆ ಸಮಯದಲ್ಲಿ 4-5 ಹನಿಯಿಂದ ಕಾಲು ಲೋಟದವರೆಗೆ ನೋವು ಇಲ್ಲದೆ ರಕ್ತ ಸ್ರಾವ ಆಗುತ್ತದೆ. 2 ನೇ ಡಿಗ್ರಿಯಲ್ಲಿ ಮಲವಿಸರ್ಜನೆ ಮಾಡುವಾಗ ಮೊಳೆಯು ಹೊರಗೆ ಬಂದು ತಂತಾನೆ ವಿಸರ್ಜನೆ ನಂತರ ಒಳ ಸೇರುತ್ತದೆ. 3ನೇ ಡಿಗ್ರಿಯಲ್ಲಿ ಮೊಳೆಯ ಆಕಾರವೊಂದು ಮಲವಿಸರ್ಜನೆ ಸಮಯದಲ್ಲಿ ಮಲದ್ವಾರದ ಮೂಲಕ ಹೊರ ಬಂದು ಕೈ ಬೆರಳಿನಲ್ಲಿ ಒಳಗೆ ತಳ್ಳಿದಾಗ ಒಳಗೆ ಸೇರುತ್ತದೆ. 4ನೇ ಡಿಗ್ರಿಯಲ್ಲಿ ಹೊರ ಬಂದ ಆಕಾರವು ಒಳಗೆ ತಳ್ಳಿದರೂ ಒಳ ಸೇರದೆ ಯಾವಾಗಲು ನೋಡಲು ಹಾಗೂ ಮುಟ್ಟಲು ಹೊರಗೆ ಇದ್ದು ಹೆಚ್ಚಿನ ಸಂದರ್ಭದಲ್ಲಿ ನೋವು ಇಲ್ಲದೆ ಇರುತ್ತದೆ. ಈ 4 ಡಿಗ್ರಿಯವರಿಗೂ ಬಿಟ್ಟು ಬಿಟ್ಟು ರಕ್ತ ಸ್ರಾವ ಆಗಬಹುದಾಗಿದೆ. ಹೆಚ್ಚಿನ ಸಂದರ್ಭದಲ್ಲಿ ಜನ ತಮ್ಮ ಮಲವನ್ನು ನೋಡದೆ ಇರುವ ಕಾರಣ ಹಾಗೂ ನೋವಿಲ್ಲದೆ ಇರುವ ಕಾರಣ ಮೊದಲ ಎರಡು ಹಂತ ಅವರ ಅರಿವಿಗೆ ಬರುವದೇ ಇಲ್ಲ. ಅಥವಾ ಅರಿವಿಗೆ ಬರುವಾಗ ತುಂಬ ವಿಳಂಬವಾಗಿರುತ್ತದೆ. ಬಹುತೇಕ ಸಂದರ್ಭಗಳಲ್ಲಿ 4ನೇ ಡಿಗ್ರಿಯ ಪ್ರಕರಣಗಳಲ್ಲಿ ಶಸ್ತ್ರ ಚಿಕಿತ್ಸೆ ಅನಿವಾರ್ಯವಾಗಿದೆ.

ಇನ್ನೊಂದು ಸಾಮಾನ್ಯವಾಗಿ ಕಾಣುವ ತೊಂದರೆ ಭಗಂದರ-ಈisಣuಟಚಿ iಟಿ ಂಟಿo: ನುರಿತ ವೈದ್ಯರು ಕೂಡ ಇದನ್ನು ಸವಾಲೆಂದೇ ಸ್ವೀಕರಿಸುತ್ತಾರೆ. ಹೆಚ್ಚಾಗಿ ಮಲದ್ವಾರದ ಸುತ್ತ ಮುತ್ತ 1ರಿಂದ 6 ಇಂಚಿನ ಅಥವಾ ಕೆಲವೊಮ್ಮೆ ಅದಕ್ಕೂ ಹೆಚ್ಚಿನ ದೂರದಲ್ಲಿ ಸಣ್ಣ ಮೊಡವೆ ಆಕಾರದ ಒಂದು ಅಥವಾ ಅನೇಕ ಗುಳ್ಳೆಗಳು ಎದ್ದು, ನೋವಿನೊಂದಿಗೆ ಅಥವಾ ನೋವು ರಹಿತವಾಗಿ, ನೀರು ಅಥವಾ ಸಣ್ಣ ಕೀವಿನಂತೆ ಸುರಿಯುತ್ತ ಒಳ ಉಡುಪನ್ನು ಒದ್ದೆ ಮಾಡಿ ಕಿರಿಕಿರಿ ಮಾಡುತ್ತ ಇರುತ್ತದೆ. ಇದು ಕೂಡ ಶಸ್ತ್ರ ಚಿಕಿತ್ಸೆಯಿಂದ ಮಾತ್ರ ವಾಸಿ ಆಗಬಲ್ಲ ವ್ಯಾಧಿ ಆಗಿದೆ.

ಕೆಲವೊಮ್ಮೆ ನಿತಂಬಗಳಲ್ಲಿ ಏಳುವ ಕುರಗಳು ಕೂಡ ತೀವ್ರ ಭಾದೆ ನೀಡುತ್ತದೆ. ಸಾಮಾನ್ಯ ಜನ ಈ ಬೇರೆ ಬೇರೆ ಕಾಯಿಲೆಗಳ ಅಂತರ ತಿಳಿಯದೆ ಮಲಕ್ಕೆ ಸಂಬಂಧಿತ ಎಲ್ಲ ಸಮಸ್ಯೆಗೆ ಪೈಲ್ಸ್ ಎಂದು ಹೇಳುತ್ತಾ, ದುಃಖಿಸುತ್ತಾ ಚಿಂತೆಗೆ ಒಳಗಾಗಿ ದಿಕ್ಕು ತೋಚದೆ ಅಜ್ಜಿ ಮದ್ದು, ನಾಟಿ ವೈದ್ಯ, ಸಾರ್ವಜನಿಕ ಮೂತ್ರಾಲಯಗಳಲ್ಲಿ ಕಾಣುವ ಆಪರೇಷನ್ ಇಲ್ಲದೆ ಮೂಲ ವ್ಯಾಧಿ ಚಿಕಿತ್ಸೆ ಎಂಬ ಜಾಹೀರಾತುಗಳ ಸಂಪರ್ಕ ಸಂಖ್ಯೆಗಳಿಗೆ ಎಡ ತಾಕುತ್ತಾರೆ. ಅಕ್ಕಪಕ್ಕದವರ ಅಂತೆ ಕಂತೆಗಳ ಅನುಭವವನ್ನೇ ತಲೆಯಲ್ಲಿ ಹೊತ್ತುಕೊಂಡು ಸೂಕ್ತ ಚಿಕಿತ್ಸೆಯನ್ನೇ ಮಾಡಿಸದೆ ಅತ್ತಿಂದಿತ್ತ ಓಡಾಡುತ್ತಾ, ಒಳಗಿಂದೊಳಗೆ ಸಮಸ್ಯೆಯನ್ನು ಅನುಭವಿಸುತ್ತಾ ಮತ್ತಷ್ಟು ಕಾಲಹರಣ ಮಾಡುತ್ತಾರೆ. ಹಲವು ಬಾರಿ ವೈದ್ಯರು ಹೇಳಿದರು ಕೂಡ ರೋಗಿ ತೀವ್ರ ಮುಜುಗರದಿಂದ ಪರೀಕ್ಷೆಗೆ ಒಳ ಪಡುವದಿಲ್ಲ. ರೋಗ ಅಥವಾ ಸಮಸ್ಯೆ ನಿರ್ಣಯವೇ ಸರಿಯಾಗಿ ಆಗದೆ ಪರಿಹಾರ ಚಿಕಿತ್ಸೆ ಹೇಗೆ ಸರಿಯಾದೀತು

ಪೈಲ್ಸ್ ಅಥವಾ ಗುದ ರೋಗಗಳಿಗ ಸಾಮಾನ್ಯ ಕಾರಣಗಳು: ಮಲ ವಿಸರ್ಜನೆ ಸಮಯದಲ್ಲಿ ಮುಕ್ಕುವದು ಅಥವಾ ತಿಣುಕುವದು, ಟಾಯ್ಲೆಟ್‍ನಲ್ಲಿ ಸುಮಾರು 5 ನಿಮಿಷಕ್ಕಿಂತ ಹೆಚ್ಚು ಕೂರುವದು, ದೀರ್ಘಕಾಲದ ಭೇದಿ ಅಥವಾ ಮಲ ಬದ್ಧತೆ, ದೀರ್ಘಕಾಲದ ಕಮ್ಮಿ ಹಸಿವು, ಅಜೀರ್ಣ, ಬೊಜ್ಜು, ಗರ್ಭಿಣಿ ಅವಸ್ಥೆ, ಗುದ ಮೈಥುನ, ನಾರು ರಹಿತ ಆಹಾರ ಸೇವನೆ, ಅತಿಯಾದ ಉಪ್ಪು, ಹುಳಿ, ಖಾರ, ಕಹಿ ಸೇವನೆ, ತೀಕ್ಷ್ಮ ಮದ್ಯ ಸೇವನೆ, ಅಧಿಕ ವ್ಯಾಯಾಮ ಹಾಗೂ ಮೈಥುನ, ತುಂಬಾ ಸಮಯದವರೆಗೆ ಕೂತಿರುವದು, ವಂಶವಾಹಿ ಕಾರಣ, ಮಾನಸಿಕ ಕಾರಣಗಳಾದ ಶೋಕ, ಚಿಂತೆ, ಕ್ರೋಧ.

ಪೂರ್ವ ರೂಪ - ಅತಿಯಾದ ತೇಗು, ಹೊಟ್ಟೆ ಉಬ್ಬರ, ಅಲ್ಪ ಮಲ ಪ್ರವೃತ್ತಿ, ಗ್ರಹಣೀರೋಗ, ಸೊಂಟ ಹಾಗೂ ತೊಡೆಗಳ ನೋವು, ಸೋಲುವದು. ಈ ಲಕ್ಷಣಗಳು ಸಾಮಾನ್ಯವಾಗಿ ಕಾಯಿಲೆ ಬರುವದಕ್ಕೆ ಮುಂಚೆ ಪ್ರಕಟವಾಗುತ್ತವೆ. ಈ ಹಂತದಲ್ಲಿ ರೋಗಿ ಮುಂದಿನ ಸೂಕ್ತ ಕ್ರಮ ಕೈಗೊಂಡರೆ ಪೈಲ್ಸ್ ಬರದಂತೆ ತಡೆಯಬಹುದು.

ಮೊದಲನೆಯದಾಗಿ ಮೇಲೆ ಹೇಳಿದ ರೋಗಕ್ಕೆ ಕಾರಣವಾಗಬಹುದಾದ ಪ್ರವೃತ್ತಿ ಅಥವಾ ಅಭ್ಯಾಸಗಳಿಂದ ದೂರವಿರಬೇಕು. ಸಾಕಷ್ಟು ಮೂಲಂಗಿ, ಅಲಸಂದೆ, ಹೀರೆ, ಪಡುವಲ ಇತ್ಯಾದಿ ತರಕಾರಿ ಹಾಗೂ ಹಣ್ಣುಗಳನ್ನು ಆಹಾರದಲ್ಲಿ ಸೇವಿಸಬೇಕು. ಜೀರ್ಣಕ್ಕೆ ಅನುಕೂಲವಾಗುವಷ್ಟು ನೀರು, ಮಜ್ಜಿಗೆ ಇತ್ಯಾದಿ ಸೇವಿಸುವದರಿಂದ ಮಲವು ಸಕಾಲದಲ್ಲಿ ಸಲೀಸಾಗಿ ಹೋಗುತ್ತದೆ. ಆದಷ್ಟು ಮಲವಿಸರ್ಜನೆಯನ್ನು ಮುಕ್ಕದೆ 3-5 ನಿಮಿಷದಲ್ಲಿ ಮುಗಿಸಬೇಕು. ನಮ್ಮ ದೇಶಕ್ಕೆ ಅನ್ವಯಿಸಿ ಹೇಳುವದಾದರೆ ಪ್ರಕೃತಿ ಸಹಜವಾಗಿ ಕೂರುವ ಭಾರತೀಯ ಶೈಲಿಯ ಕಾಮೋಡ್‍ಗಳು ಈ ವಿಷಯದಲ್ಲಿ ಬಹಳ ಸಹಕಾರಿ. ಮಲ ವಿಸರ್ಜನೆ ಮಾಡಬೇಕೆನಿಸಿದಾಗ ತುಂಬಾ ಹೊತ್ತು ತಡೆಹಿಡಿಯಬಾರದು, ಅತಿ ಹೆಚ್ಚು ನಿಲ್ಲುವ ಅಥವಾ ಕೂರುವ ಕೆಲಸದವರು ನಿಯಮಿತವಾಗಿ ಹೊಟ್ಟೆಗೆ ಸಂಬಂಧಿತ ವ್ಯಾಯಾಮ ಮಾಡಬೇಕು.

ವ್ಯಾಧಿ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ: ಮೊಳೆ ಅಥವಾ ಪೈಲ್ಸ್ ಸಮಸ್ಯೆಯನ್ನು ಸರಳವಾಗಿ ಹೇಳುವದಾದರೆ ಮಲದ್ವಾರದಿಂದ 4 ಇಂಚು ಒಳಗಿನ ರಕ್ತ ನಾಳಗಳ ಉಬ್ಬುವಿಕೆ ಹಾಗೂ ಅದರ ಪರಿಣಾಮವಾಗಿ ರಕ್ತನಾಳ ಒಡೆದರೆ ರಕ್ತಸ್ರಾವ ಕಾಣುತ್ತದೆ. ರಕ್ತ ಅತಿಸಾರ, ಕರುಳಿನ ಕ್ಯಾನ್ಸರ್, ಕ್ರೋಹ್ನ್ಸ್ ಡಿಸೀಸ್, ಟಿ.ಬಿ., ಗುದ ಭ್ರಂಶ ಇತ್ಯಾದಿ ಕಾರಣಗಳಿಂದಲೂ ರಕ್ತ ಸ್ರಾವ ಕಾಣಿಸಬಹುದು. ರೋಗಿಗಳು ಬಹಳ ಸಾರಿ ಇಂತಹ ಸಮಸ್ಯೆಗಳನ್ನೇ ಪೈಲ್ಸ್ ಎಂದು ತಿಳಿದು ತಮ್ಮ ಜೀವನವನ್ನೇ ಹಾಳು ಮಾಡಿಕೊಂಡ ಸಾಕಷ್ಟು ಕಥೆಗಳು ಬಹುಷಃ ಪ್ರತಿ ವೈದ್ಯರಿಗೆ ತಿಳಿದಿದೆ ,ಅನೇಕ ಸಾರಿ ರೋಗಿ ಒಳ್ಳೆಯ ವೈದ್ಯರಿಂದ ಪರೀಕ್ಷಿಸಿ ಚಿಕಿತ್ಸೆ ತೆಗೆದುಕೊಂಡಿದ್ದರೂ, ಶಸ್ತ್ರ ಚಿಕಿತ್ಸೆ ಮಾಡಿದ್ದರೂ, ಕಾಯಿಲೆಯ ಕಾರಣಗಳನ್ನು ಸರಿ ಮಾಡಿಕೊಳ್ಳದಿದ್ದರೆ ಆ ವ್ಯಕ್ತಿಗೆ ಜೀವನದಲ್ಲಿ ಎಷ್ಟು ಬಾರಿ ಬೇಕಾದರೂ ಅದು ಜ್ವರ ಶೀತದಂತೆ ಮರಳಿ ಮರಳಿ ಬರಬಹುದು.

ನೆನಪಿಡಿ- ಪೈಲ್ಸ್ ಚಿಕಿತ್ಸೆಗೆ ಅತೀತವಾದ ಸಮಸ್ಯೆ ಅಲ್ಲ: ವೈದ್ಯಕೀಯವಾಗಿ ಪೈಲ್ಸ್‍ನ ಚಿಕಿತ್ಸೆ ಸುಲಭ. ಆಯುರ್ವೇದಾಚಾರ್ಯ ಸುಶ್ರುತ ಮಹರ್ಷಿಗಳು ತುಂಬಾ ವೈಜ್ಞಾನಿಕವಾಗಿ ಈ ಎಲ್ಲ ರೋಗಗಳ ವಿಶ್ಲೇಷಣೆ, ಚಿಕಿತ್ಸೆ ಹಾಗೂ ಶಸ್ತ್ರ ಕ್ರಿಯೆಗಳನ್ನು ವಿವರಿಸಿದ್ದಾರೆ. ಇದೇ ಕ್ರಮಗಳನ್ನು ಇಂದಿಗೂ ಆಯುರ್ವೇದ ವೈದ್ಯರುಗಳು ಬಳಸಿ ಅನೇಕ ರೋಗಿಗಳ ಪಿಡುಗನ್ನು ಸರಳವಾಗಿ ಪರಿಹರಿಸುತ್ತಿರುವದು ಶ್ಲಾಘನೀಯ. ಭಗಂದರ/ಜಿisಣuಟಚಿ ರೋಗದಲಿ ಕ್ಷಾರ ಸೂತ್ರವೆಂಬ ಆಯುರ್ವೇದಿಯ ಶಸ್ತ್ರ ಕ್ರಿಯೆಗೆ ಅನೇಕ ಹೊರ ದೇಶದ ರೋಗಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷವಾಗಿ ಆಯುರ್ವೇದ ಪದ್ಧತಿಯನ್ನೇ ಹುಡುಕಿಕೊಂಡು ಬಂದು ಚಿಕಿತ್ಸೆಗೆ ಒಳಪಡುತ್ತಿರುವದು ನಮ್ಮ ಭಾರತೀಯ ವಿಜ್ಞಾನಗಳ ಸಫಲತೆಗೆ ಹಿಡಿದ ಕೈಗನ್ನಡಿ ಆಗಿದೆ. ಆದಾಗ್ಯೂ, ವ್ಯಕ್ತಿ ಕಾಡುವ ರೋಗಕ್ಕೆ ಅನುಸರಿಸಿ ತನ್ನ ಜೀವನ ಕ್ರಮ ಬದಲಿಸದಿದ್ದರೆ ಯಾವದೇ ರೋಗ ಆದರೂ ಕೂಡ ಗುಣ ಆಗಲಾರದು ಎಂದು ರೋಗಿಗಳು ಯಾವತ್ತೂ ಮರೆಯಬಾರದು.

- ಡಾ. ಶ್ಯಾಮ್ ಪ್ರಸಾದ್ ಪಿ.ಎಸ್., ಕುಶಾಲನಗರ. 9036843207