ವ್ಯವಹಾರವು ಮಾನವ ಜೀವನದ ಗುಣಮಟ್ಟವನ್ನು ಹಲವು ವಿಧಗಳಲ್ಲಿ ನಿರ್ಧರಿಸುತ್ತದೆ ಎಂಬದು ನಮ್ಮ ನಂಬಿಕೆ. ಇದು ಕೇವಲ ಅರ್ಧಸತ್ಯ ಮಾತ್ರ. ಏಕೆಂದರೆ, ಜನರು ಬಡತನದಲ್ಲಿದ್ದಾಗ, ಆಹಾರವನ್ನು ಹೊರತುಪಡಿಸಿ ಅವರಿಗೆ ನೀವು ಬೇರೆ ಯಾವದರ ಬಗ್ಗೆಯೂ ಹೇಳಲಾಗುವದಿಲ್ಲ. ನೀವು ಹಸಿದಿರುವಾಗ, ನಿಮ್ಮ ಸಂಪೂರ್ಣ ಪ್ರಜ್ಞೆಯು ಆಹಾರದ ಬಗ್ಗೆಯಾಗಿರುತ್ತದೆ. ನೀವು ಭಿಕ್ಷುಕನ ಬಳಿ ಹೋಗಿ ಎರಡು ಮತ್ತು ಎರಡು ಎಷ್ಟು ಎಂದು ಕೇಳಿದರೆ, ಅವರು ನಾಲ್ಕು ಚಪಾತಿ ಎಂದೆನ್ನಬಹುದು. ಆಹಾರ ಇಲ್ಲದಿದ್ದಾಗ ಇಡೀ ವಿಷಯ ಆಹಾರದ ಬಗ್ಗೆಯೇ ಆಗಿರುತ್ತದೆ.

ಜನರ ಮೂಲಭೂತ ಅತ್ಯಗತ್ಯಗಳನ್ನು ಪೂರೈಸದಿದ್ದಾಗ, ಜೀವನದ ಉನ್ನತ ಸ್ತರಗಳ ಬಗ್ಗೆ ಜನರೊಂದಿಗೆ ಮಾತನಾಡಲು ಸಾಧ್ಯವಾಗುವದಿಲ್ಲ. ಆದರೆ, ಬಡತನದಿಂದ ಸಿರಿವಂತರಾಗುವದು ಒಂದು ಕಷ್ಟಕರವಾದ ಪಯಣ. ಒಬ್ಬ ವ್ಯಕ್ತಿಗಾಗಿರಲಿ, ಒಂದು ಸಮಾಜ, ದೇಶಕ್ಕಾಗಿರಲಿ ಅಥವಾ ದೊಡ್ಡ ಜನಸಂಖ್ಯೆಗಾಗಿರಲಿ, ಅದು ಕಷ್ಟಕರವಾದ ಪಯಣ. ಇದು ಸುಲಭವಾಗಿ ಆಗುವಂತದ್ದಲ್ಲ, ಇದನ್ನು ಮಾಡಬೇಕಾದರೆ ಅಪಾರವಾದ ಬೆಲೆಯನ್ನು ತೆರಬೇಕಾಗುತ್ತದೆ. ಆದರೆ ಬಹಳಷ್ಟು ಸಮಯ, ಜನರು ಅಲ್ಲಿಗೆ ತಲಪಿದಾಗ, ಅವರಿಗೆ ತಮ್ಮ ಸಿರಿತನವನ್ನು ಆನಂದಿಸಲು ಸಾಧ್ಯವಾಗುವದಿಲ್ಲ. ಹೆಚ್ಚಿನ ಸಮಾಜಗಳು ತಮ್ಮ ಸಂಪತ್ತಿನಿಂದ ಸಂಕಷ್ಟಕ್ಕೆ ಈಡಾಗುತ್ತವೆ. ಉದಾಹರಣೆಗೆ, ಜಗತ್ತಿನಲ್ಲಿ ಅತ್ಯಂತ ಶ್ರೀಮಂತ ದೇಶಗಳಲ್ಲಿ ಒಂದಾದ ಅಮೇರಿಕಾದಲ್ಲಿ, ನೂರು ವರ್ಷಗಳ ಹಿಂದೆ ರಾಜಮಹಾರಾಜರಿಗೂ ಇರದಿದ್ದಂತಹ ಸೌಲಭ್ಯ ಸೌಕರ್ಯಗಳು ಸಾಮಾನ್ಯ ನಾಗರಿಕರಿಗೆ ಇದೆ. ಹೀಗಿದ್ದರೂ, ಅಮೇರಿಕಾದ ಜನಸಂಖ್ಯೆಯ ಗಮನಾರ್ಹ ಶೇಕಡಾವಾರು ಯಾವುದಾದರೊಂದು ರೀತಿಯ ಆಂಟಿ-ಡಿಪ್ರೆಸೆಂಟ್ ಗುಳಿಗೆಗಳನ್ನು ತೆಗೆದುಕೊಳ್ಳುತ್ತಾರೆ. ನೀವು ಮಾರುಕಟ್ಟೆಯಿಂದ ಕೆಲ ಔಷಧಿಗಳನ್ನು ಹಿಂಪಡೆದರೆ, ದೇಶದ ಅರ್ಧಕ್ಕರ್ಧ ಜನರು ಹುಚ್ಚರಾಗುತ್ತಾರೆ. ಇದು ಯೋಗಕ್ಷೇಮವಲ್ಲ. ನೀವು ಎಲ್ಲಿ ವಾಸಿಸುತ್ತಿದ್ದೀರಿ, ಹೇಗೆ ಬಾಳುತ್ತಿದ್ದೀರಿ, ಏನನ್ನು ತಿನ್ನುತ್ತಿದ್ದೀರಿ, ಎಂತಹ ಬಟ್ಟೆಗಳನ್ನು ಧರಿಸುತ್ತಿದ್ದೀರಿ, ಯಾವ ಕಾರು ಓಡಿಸುತ್ತಿದ್ದೀರಿ ಎಂಬ ಯಾವ ವಿಷಯಗಳೂ ಮುಖ್ಯವಾಗುವದಿಲ್ಲ, ನೀವು ಸಂತೋಷವಾಗಿಲ್ಲದಿದ್ದರೆ, ಅದನ್ನು ಯೋಗಕ್ಷೇಮವೆನ್ನಲಾಗುವದಿಲ್ಲ.

ನಿಮ್ಮನ್ನು ನಿರ್ವಹಿಸುವದು ಹೇಗೆ ಎನ್ನುವದು ನಿಮಗೆ ತಿಳಿದಿಲ್ಲದಿದ್ದರೆ, ನಿಮ್ಮ ಸಂತೋಷವು ಆಕಸ್ಮಿಕವಾಗಿರುತ್ತದೆ. ಹೊರಗಿನ ಸಂದರ್ಭಗಳಲ್ಲಿ ಯಾವಾಗಲೂ ನಿಮ್ಮ ನಿಯಂತ್ರಣದಲ್ಲಿರುವದಿಲ್ಲ ಏಕೆಂದರೆ ಹೊರಗಿನ ಪರಿಸ್ಥಿತಿಯು ಒಂದು ಲಕ್ಷಾಂತರ ವಿಭಿನ್ನ ಅಂಶಗಳನ್ನು ಒಳಗೊಂಡಿರುತ್ತದೆ. ಹೆಚ್ಚಿನವರಿಗೆ ಅವುಗಳು ನಿಜವಾಗಿಯೂ ಏನೆಂದು ತಿಳಿದಿರುವದಿಲ್ಲ. ಕೆಲವಷ್ಟನ್ನು ಮಾತ್ರ ನೀವು ಅರ್ಥಮಾಡಿಕೊಂಡಿರುತ್ತೀರಿ ಮತ್ತು ಅವುಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತೀರಿ. ಮಿಕ್ಕವನ್ನು ನಿಮಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲದಿದ್ದಾಗ ಅವುಗಳನ್ನು ನಿಯಂತ್ರಿಸುವ ಪ್ರಶ್ನೆಯೂ ಇರುವದಿಲ್ಲ. ಎಲ್ಲಾ ತಮ್ಮ ತಮ್ಮ ಸ್ಥಾನಕ್ಕೆ ಬಂದು ಬೀಳುವವು ಎಂದು ನೀವು ಭಾವಿಸುತ್ತೀರಿ.

ಆದರೆ ಆಂತರ್ಯದ ಪರಿಸ್ಥಿತಿಯ ವಿಷಯಕ್ಕೆ ಬಂದಾಗ, ಅಲ್ಲಿರುವದು ಕೇವಲ ನೀವು; ನೀವು ಮಾತ್ರ. ಕನಿಷ್ಟ ಪಕ್ಷ ಈ ಆಂತರಿಕ ಪರಿಸ್ಥಿತಿಯಾದರೂ ನಿಮಗೆ ಬೇಕಿರುವ ರೀತಿಯಲ್ಲಿ ನಡೆಯಬೇಕು. ಇದು ನಿಮಗೆ ಬೇಕಿದ್ದ ರೀತಿಯಲ್ಲಿ ನಡೆಯದಿದ್ದರೆ, ನಿಮ್ಮ ಬಾಳು ವ್ಯರ್ಥವಾದಂತೆ. ಆದ್ದರಿಂದ ನೀವು ಸಂತೋಷವಾಗಿರಬೇಕಿದ್ದರೆ, ನಿಮ್ಮನ್ನು ನೀವು ಸರಿಯಾಗಿ ನಿರ್ವಹಿಸಬೇಕು. ನಿರ್ವಹಣೆ ಎಂದರೆ ನೀವು ಬಯಸಿದ ರೀತಿಯಲ್ಲಿ ಸಂದರ್ಭಗಳನ್ನು ರಚಿಸುವದು ಎಂದು. ನಿಮ್ಮ ಕುಟುಂಬ, ಹಣಕಾಸು, ಉದ್ಯಮ, ವ್ಯವಹಾರವನ್ನು ನೀವು ನಿರ್ವಹಿಸುವಂತೆ, ನಿಮ್ಮ ಮನಸ್ಸು, ಭಾವನೆ, ಪ್ರಾಣಶಕ್ತಿ ಮತ್ತು ನಿಮ್ಮ ದೇಹವನ್ನು ನಿರ್ವಹಿಸುವದು ಮುಖ್ಯ. ಹೊರಗಿನ ಸಂದರ್ಭಗಳನ್ನು ನಿರ್ವಹಿಸುವ ನಿಮ್ಮ ಸಾಮಥ್ರ್ಯವು ನಿಮ್ಮ ಆಂತರ್ಯವನ್ನು ಉತ್ತಮವಾಗಿ ನಿರ್ವಹಿಸಿದಾಗ ಮಾತ್ರ ನಿಮಗೆ ಲಭ್ಯವಾಗುತ್ತದೆ. ದುರದೃಷ್ಟವಶಾತ್, ನಾವು ವ್ಯಕ್ತಿಗತವಾಗಿ, ಒಂದು ಸಮಾಜವಾಗಿ, ಒಂದು ರಾಷ್ಟ್ರವಾಗಿ, ವಿಶ್ವವಾಗಿ, ಆಂತರ್ಯದ ಯೋಗಕ್ಷೇಮದ ಬಗ್ಗೆ ಏನನ್ನೂ ಹೂಡಿಕೆ ಮಾಡಲಿಲ್ಲ. ನಮ್ಮ ಆಂತರ್ಯದ ಯೋಗಕ್ಷೇಮದಲ್ಲಿ ನಾವು ಹೂಡಿಕೆ ಮಾಡುವ ಸಮಯ ಬಂದಾಗಿದೆ. ಮುಂಬರುವ ಇನ್ನರ್ ಇಂಜಿ ನಿರಿಂಗ್ ಕಾರ್ಯಕ್ರಮಗಳು: ತಾ. 29, 2019 ರಿಂದ ಜೂನ್ 4, 2019. ಸ್ಥಳ 1: ಭಾರತೀಯ ವಿದ್ಯಾ ಭವನ, ಓಂಕಾರೇಶ್ವರ ದೇವಾಲಯದ ಬಳಿ, ಮಡಿಕೇರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಮೊಬೈಲ್ : 9972418982-9952880091. ಸ್ಥಳ 2: ಆದ್ಯ ಹೋಲಿಸ್ಟಿಕ್ ಲಿವಿಂಗ್, ಮೂರನೇ ಮಹಡಿ, ಲೋಪಾಮುದ್ರ ವೈದ್ಯಕೀಯ ಕೇಂದ್ರ, ಆರ್ಥರ್ ಪಾಲಿಬೆಟ್ಟ ರಸ್ತೆ, ಗೋಣಿಕೊಪ್ಪ.