ಸೋಮವಾರಪೇಟೆ, ಮೇ 17: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿ ರೂಪುಗೊಳ್ಳುತ್ತಿರುವ ಮಲ್ಲಳ್ಳಿ ಜಲಪಾತದಲ್ಲಿ ಸಾವಿನ ಸರಣಿಯನ್ನು ತಡೆಗಟ್ಟಲು ಇಲಾಖೆ ಮುಂದಾಗಿದ್ದು, ಸುರಕ್ಷತಾ ಕ್ರಮಗಳ ಕಾಮಗಾರಿ ನಡೆಯುತ್ತಿದೆ.ಇದುವರೆಗೆ 12 ಮಂದಿ ಈ ಜಲಪಾತದಲ್ಲಿ ಪ್ರಾಣ ಕಳೆದುಕೊಂಡಿದ್ದು, ಇತ್ತೀಚಿನ ವರ್ಷಗಳಲ್ಲಿ ಸಾವಿನ ಸಂಖ್ಯೆ ಅಧಿಕವಾಗುತ್ತಲೇ ಇದೆ. ಪ್ರತಿ ಪ್ರಾಣ ಹಾನಿಯಾದಾಗಲೂ ಜಲಪಾತದ ಬಳಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಬಗ್ಗೆಯೇ ಟೀಕೆಗಳು ವ್ಯಕ್ತವಾಗುತ್ತಿದ್ದವು.
(ಮೊದಲ ಪುಟದಿಂದ) ಕಳೆದೆರಡು ವರ್ಷಗಳ ಹಿಂದೆ ಜಲಪಾತದ ಒಳಭಾಗಕ್ಕೆ ತೆರಳದಂತೆ ಎಚ್ಚರಿಕೆಯ ಫಲಕ, ಕಬ್ಬಿಣದ ಮೆಷ್ ಅಳವಡಿಸಿ ಗೇಟ್ ಹಾಕಿದ್ದರೂ ಸಹ ಇದನ್ನೂ ದಾಟಿ ನೀರಿಗಿಳಿದು ಪ್ರಾಣ ಕಳೆದುಕೊಳ್ಳುವವರ ಸಂಖ್ಯೆಯಲ್ಲಿ ಇಳಿಮುಖ ವಾಗಿರಲಿಲ್ಲ. ಜಲಪಾತದಲ್ಲಿ ನೀರು ಧುಮ್ಮಿಕ್ಕುವ ಸ್ಥಳದಲ್ಲಿ 8 ಹಾಗೂ ಬಂಡೆ ಮೇಲಿನಿಂದ ಕಾಲು ಜಾರಿ ಬಿದ್ದು 4 ಮಂದಿ ಇದುವರೆಗೆ ಜೀವ ಕಳೆದುಕೊಂಡಿದ್ದಾರೆ. ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ಮಿತ್ರರನ್ನು ನಿಯೋಜಿಸಿದ್ದರೂ ಸಹ ಇವರುಗಳ ಕಣ್ತಪ್ಪಿಸಿ ನೀರಿಗಿಳಿದು ಪ್ರವಾಸಿಗರು ಪ್ರಾಣ ಬಿಡುತ್ತಿದ್ದಾರೆ.ಕಳೆದ ನಾಲ್ಕು ವರ್ಷಗಳಿಂದ ಸರ್ಕಾರ, ಪ್ರವಾಸೋದ್ಯಮ ಇಲಾಖೆ ಮೂಲಕ ಅನುದಾನ ನೀಡುತ್ತಿದ್ದು, ಹಂಚಿನಳ್ಳಿ ಜಂಕ್ಷನ್‍ನಿಂದ ಜಲಪಾತದವರೆಗೆ ಕಾಂಕ್ರೀಟ್ ರಸ್ತೆ, ಜಲಪಾತದ ತಳಭಾಗಕ್ಕೆ ತೆರಳಲು ಮೆಟ್ಟಿಲುಗಳನ್ನು ಅಳವಡಿಸಲಾಗಿದೆ. ಇದೀಗ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಜಲಪಾತದಲ್ಲಿ ಹೆಚ್ಚಿನ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಎತ್ತರದ ಮೆಷ್ ಮತ್ತು ಗ್ರಿಲ್ಸ್‍ಗಳನ್ನು ಅಳವಡಿಸಲಾಗುತ್ತಿದೆ.