ಮಡಿಕೇರಿ, ಮೇ 17 : ಪ್ರಕೃತಿ ವಿಕೋಪ ಎದುರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ ವತಿಯಿಂದ ಅಧಿಕಾರಿಗಳಿಗೆ ಮಾಹಿತಿ ನೀಡುವ ಕಾರ್ಯಗಾರವು ಶುಕ್ರವಾರ ನಡೆಯಿತು.ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ಸಂಭವಿಸಿದ ಭೂಕುಸಿತ ಹಾಗೂ ಪ್ರವಾಹ ಹಿನ್ನೆಲೆ, ಪ್ರಸಕ್ತ ವರ್ಷದಲ್ಲಿ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.

ಭಾರತೀಯ ಭೂ ವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯವರು ಸೂಕ್ಷ್ಮ ಪ್ರದೇಶಗಳನ್ನು ಅಧ್ಯಯನ ಮಾಡಿ ಗುರುತಿಸಿದ್ದಾರೆ. ಆ ನಿಟ್ಟಿನಲ್ಲಿ ಸೂಕ್ಷ್ಮ ಪ್ರದೇಶಗಳು ಸೇರಿದಂತೆ ಜಿಲ್ಲೆಯ ವಿವಿಧ ವಿಭಾಗಗಳಲ್ಲಿ ಮುಂಗಾರು ಅವಧಿಯಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಜಿ.ಪಂ.ಸಿಇಒ ಕೆ.ಲಕ್ಷ್ಮಿಪ್ರಿಯಾ ಅವರು ಮಾತನಾಡಿ ಈಗಾಗಲೇ ಪ್ರಕೃತಿ ವಿಕೋಪ ಸ್ಥಳಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಲಾಗುತ್ತಿದೆ. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಜಾಗೃತಿ ವಹಿಸಬೇಕಿದೆ ಹೊರತು. ವದಂತಿಗಳಿಗೆ ಕಿವಿಗೊಡಬಾರದು ಎಂದರು.

ಈ ಬಾರಿ ಮಳೆಗಾಲದ ಅವಧಿಯಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಈಗಾಗಲೇ ನೇಮಕ ಮಾಡಿರುವ ನೋಡಲ್ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಇಂದಿನ ಕಾರ್ಯಾಗಾರದಲ್ಲಿ ಜಿಎಸ್‍ಐ ತಂಡವು ನೀಡಿರುವಂತಹ ಮಾರ್ಗ ಸೂಚಿಗಳು

(ಮೊದಲ ಪುಟದಿಂದ) ಹಾಗೂ ಸಲಹೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಹಾಗೂ ಸಂಬಂಧಪಟ್ಟ ನೋಡಲ್ ಅಧಿಕಾರಿಗಳು ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯ ಕ್ರಮಗಳನ್ನು ಕೈಗೊಂಡು ಯಾವದೇ ಅನಾಹುತ ಸಂಭವಿಸದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ವಿಭಾಗದ ರಾಜ್ಯ ನಿರ್ದೇಶಕ ಕೆ.ವಿ.ಮಾರುತಿ ಅವರು ಮಾತನಾಡಿ ಭೂ ಕುಸಿತವನ್ನು ತಪ್ಪಿಸಲು ತಡೆಗೋಡೆ, ಚರಂಡಿ ನಿರ್ಮಾಣ, ನದಿ, ತೊರೆ, ಹಳ್ಳ ಕೊಳ್ಳದ ಬಳಿ ಮನೆ ನಿರ್ಮಿಸದಿರು ವದು. ಹೀಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಸ್ತೆ ಬದಿಯ ಚರಂಡಿಯಲ್ಲಿ ನೀರು ಸರಾಗವಾಗಿ ಹೋಗುವಂತೆ ಮಾಡಬೇಕು. ಪ್ಲಾಸ್ಟಿಕ್ ತ್ಯಾಜ್ಯ ಅಥವಾ ಇತರ ವಸ್ತುಗಳು ಚರಂಡಿಯಲ್ಲಿ ಇರಬಾರದು. ಬೆಂಚ್ ಮಾದರಿಯಲ್ಲಿ ತಡೆಗೋಡೆ ನಿರ್ಮಾಣ, ದೂರವಾಣಿ ಸಂಪರ್ಕ ಮೂಲಕ ಮಾಹಿತಿ ತಲಪಿಸುವದು. ವದಂತಿಗೆ ಕಿವಿಗೊಡದಿರುವದು ಮತ್ತಿತರ ಬಗ್ಗೆ ಗಮನಹರಿಸಬೇಕಿದೆ ಎಂದು ಅವರು ಹೇಳಿದರು.

‘ಕಳೆದ ವರ್ಷ ಸಂಭವಿಸಿದ ಅತಿವೃಷ್ಟಿಯಿಂದ ಉಂಟಾದ ಭೂಕುಸಿತ ಪ್ರದೇಶಗಳಲ್ಲಿ ಮುಂದು ವರಿದ ತಂತ್ರಜ್ಞಾನ ಬಳಸಿಕೊಂಡು ವರದಿಯನ್ನು ಸಿದ್ಧಪಡಿಸಲಾಗಿದ್ದು, ಪ್ರಾಥಮಿಕ ವರದಿಯನ್ನು ಈಗಾಗಲೇ ಜಿಲ್ಲಾಡಳಿತಕ್ಕೆ ನೀಡಲಾಗಿದೆ. ಅಂತಿಮ ವರದಿ ನೀಡಬೇಕಿದೆ ಎಂದು ಅವರು ಮಾಹಿತಿ ನೀಡಿದರು.’ ಅತಿವೃಷ್ಟಿಯಿಂದ ಉಂಟಾದ ಹಾನಿ ಸಂಬಂಧ ನಡೆಸುತ್ತಿರುವ ಶಾಶ್ವತ ಕಾಮಗಾರಿಗಳಲ್ಲಿ ಹೆಚ್ಚಿನ ನಿಗಾವಹಿಸಿ ತಾಂತ್ರಿಕ ಸಲಹೆಗಳನ್ನು ಚಾಚು ತಪ್ಪದೇ ಪಾಲಿಸಬೇಕು. ಇದರಿಂದ ಭೂ ಕುಸಿತ ಪ್ರಮಾಣವು ಕಡಿಮೆಯಾಗಲಿದೆ ಎಂದು ಹೇಳಿದರು.

ಇಳಿಜಾರು ಪ್ರದೇಶದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯವನ್ನು ಹೊಂದಿರುವ ಲಾವಂಛ (ವೆಟ್ಟಿವರ್) ಹುಲ್ಲನ್ನು ಬೆಳೆಸಬೇಕು. ಇದನ್ನು ಬೆಳೆಸುವದರಿಂದ ನೈಸರ್ಗಿಕವಾಗಿ ಭೂ ಕುಸಿತವನ್ನು ತಗ್ಗಿಸಬಹುದು ಎಂದು ಹೇಳಿದರು. ಸಾರ್ವಜನಿಕರಿಗೆ ಹವಾಮಾನ ಇಲಾಖೆಯು ಹೆಚ್ಚು ಮಳೆ ಬೀಳುವ ಮುನ್ಸೂಚನೆ ನೀಡಿದ ಸಂದರ್ಭದಲ್ಲಿ ಗುಡ್ಡಗಾಡು ಪ್ರದೇಶ, ಇಳಿಜಾರಿನ ಪ್ರದೇಶದಲ್ಲಿ ವಾಸಿಸುವಂತಹ ಜನರು ಬದಲಿ ಜಾಗಕ್ಕೆ ಸ್ಥಳಾಂತರ ಗೊಳ್ಳಬೇಕು ಎಂದರು.

‘ಭೂಕುಸಿತ ಸಂಭವಿಸುವ ಸಂದರ್ಭಗಳಲ್ಲಿ ಕೆಲವು ಮುನ್ಸೂಚನೆಗಳು ಕಂಡುಬರುತ್ತವೆ. ಮನೆಯ ಬಾಗಿಲು ಮತ್ತು ಕಿಟಿಕಿಗಳು ಮುಚ್ಚಲು ಇದ್ದಕ್ಕಿದ್ದಂತೆ ಸಿಲುಕಿಕೊಳ್ಳು ವದು. ಮನೆಯ ಗೋಡೆ, ನೆಲದಲ್ಲಿ ಇದ್ದಕ್ಕಿದ್ದಂತೆ ಬಿರುಕು ಕಾಣಿಸಿಕೊಳ್ಳು ವದು. ರಸ್ತೆ ಹಾಗೂ ಭೂ ಪ್ರದೇಶದಲ್ಲಿ ನಿಧಾನವಾಗಿ ಬಿರುಕು ಕಾಣಿಸಿ ಕೊಂಡು ವಿಸ್ತಾರಗೊಳ್ಳುವದು, ಹೊಳೆ, ಕಾಲುವೆ, ನದಿಗಳಲ್ಲಿ ನೀರಿನ ಹರಿವಿನ ಪ್ರಮಾಣ ಇದ್ದಕ್ಕಿದ್ದಂತೆ ಕಡಿಮೆಯಾಗುವದು, ಮರಗಳು, ಬೇಲಿ ಬದಿಯ ಸಸ್ಯಗಳಲ್ಲಿ ಅಲುಗಾಡುವ ರೀತಿಯಲ್ಲಿ ಬದಲಾವಣೆ ಕಾಣಿಸಿಕೊಳ್ಳುವದು, ಈ ರೀತಿಯಾದ ಲಕ್ಷಣಗಳು ಕಂಡುಬಂದ ಸಂದರ್ಭಗಳಲ್ಲಿ ಸಾರ್ವಜನಿಕರು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಗೊಂಡು ಸಂಭವಿಸಬಹುದಾದ ಅನಾಹುತದಿಂದ ಪ್ರಾಣ ರಕ್ಷಣೆ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದರು.’

ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ವಿಭಾಗದ ಸುನಂದನ್ ಬಸು ಅವರು ಪ್ರಕೃತಿ ವಿಕೋಪ ಎದುರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಲವು ಮಾಹಿತಿ ನೀಡಿದರು.

ಕಾರ್ಯಾಗಾರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಜಿ.ಪಂ. ಉಪ ಕಾರ್ಯದರ್ಶಿ ಗುಡೂರು ಭೀಮಸೇನ, ಡಿವೈಎಸ್‍ಪಿ ಸುಂದರರಾಜ್, ಭೂ ದಾಖಲೆಗಳ ಉಪ ನಿರ್ದೇಶಕ ಶ್ರೀನಿವಾಸ್, ಸಹಾಯಕ ನಿರ್ದೇಶಕ ಷಂಶುದ್ದೀನ್, ಜಿಎಸ್‍ಐ ವಿಜ್ಞಾನಿ ಅಮರ್ ಜ್ಯೋತಿ, ಯುನೆಸೆಫ್‍ನ ಸಮಾಲೋಚಕರಾದ ಪ್ರಭಾತ್ ಕಲ್ಕೂರ, ಮನೋಹರ್, ತಾ.ಪಂ ಇಒಗಳು, ತಹಶೀಲ್ದಾರರು, ಪಿಡಿಒಗಳು, ಕಂದಾಯ ಪರಿವೀಕ್ಷಕರು, ಗ್ರಾಮ ಲೆಕ್ಕಿಗರು ಇತರರು ಇದ್ದರು.