ಶನಿವಾರಸಂತೆ, ಮೇ 17: ಪಟ್ಟಣದ ತ್ಯಾಗರಾಜ ಕಾಲೋನಿಯಲ್ಲಿ ವಿಜಯ ವಿನಾಯಕ ದೇಗುಲದ ಮುಂಭಾಗದ ಮುಖ್ಯರಸ್ತೆಯಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಆವರಣದ ನೀರಿನ ಟ್ಯಾಂಕ್‍ನಿಂದ ಸರಬರಾಜಾಗುವ ನೀರಿನ ಪೈಪ್‍ಲೈನ್ ತುಂಡಾಗಿದ್ದು, ಒಂದು ತಿಂಗಳಿನಿಂದ ಕುಡಿಯುವ ನೀರು ಪೋಲಾಗುತ್ತಿದೆ.
ಈ ವಿಭಾಗದ ಗ್ರಾಮ ಪಂಚಾಯಿತಿಯ ಮೂವರು ಸದಸ್ಯ ರಾಗಲೀ, ಅಭಿವೃದ್ಧಿ ಅಧಿಕಾರಿ ಯಾಗಲಿ ಸ್ಪಂದಿಸುತ್ತಿಲ್ಲ ಎಂದು ದೇಗುಲದ ಆದರ್ಶ ವಿಜಯ ವಿನಾಯಕ ಸೇವಾ ಸಮಿತಿ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಟ್ಟಣದ 3 ವಿಭಾಗಗಳಲ್ಲೂ ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಇದ್ದು, ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಳೆಯೂ ಬರುತ್ತಿಲ್ಲ. ಕಾಲೋನಿಯ ಮುಖ್ಯರಸ್ತೆಯಲ್ಲಿ ಲೋಕಸಭಾ ಚುನಾವಣೆ ಸಮಯದಿಂದ ಪೈಪ್‍ಲೈನ್ ತುಂಡಾಗಿದ್ದು, ನೀರು ರಸ್ತೆಯಲ್ಲಿ ಹರಿದು ಅವರಿವರ ಮನೆ ಬಾಗಿಲಿಗೆ ಜಿನುಗುತ್ತಿದೆ. ಇದೇ ರಸ್ತೆಯಲ್ಲಿ ಪಂಚಾಯಿತಿ ಸದಸ್ಯರಾದ ಉಷಾ ಜಯೇಶ್, ಹೇಮಾವತಿ, ಎಸ್.ಎನ್. ಪಾಂಡು ತಿರುಗಾಡುತ್ತಿದ್ದರೂ ಕಂಡೂ ಕಾಣದಂತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಾದರೂ ನೀರಿನ ಸಮಸ್ಯೆಗೆ ಸ್ಪಂದಿಸಿ ಆದಷ್ಟೂ ಶೀಘ್ರ ಪೈಪ್‍ಲೈನ್ ದುರಸ್ತಿಪಡಿಸಲಿ. ರಸ್ತೆಯಲ್ಲಿ ಹರಿಯುತ್ತಿರುವ ನೀರನ್ನು ಸ್ಥಗಿತಗೊಳಿಸಲಿ ಎಂದು ದೇಗುಲ ಸೇವಾ ಸಮಿತಿ ಅಧ್ಯಕ್ಷ ಎಸ್.ಆರ್. ಮಧು, ಉಪಾಧ್ಯಕ್ಷ ಶೇಷಗಿರಿ, ಕಾರ್ಯದರ್ಶಿ ಪಾಲಾಕ್ಷ, ಖಜಾಂಚಿ ಯಶವಂತ್ ಹಾಗೂ ಸದಸ್ಯರು ಆಗ್ರಹಿಸಿದ್ದಾರೆ.